ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CSK vs GT: ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಭರ್ಜರಿ ಗೆಲುವು ಪಡೆದ ಗುಜರಾತ್‌ ಟೈಟನ್ಸ್!

CSK vs GT Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 89 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 18 ಅಂಕಗಳ ಮೂಲಕ ಎರಡನೇ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದೆ.

ಸಿಎಸ್‌ಕೆ ಎದುರು ಜಿಟಿಗೆ 89 ರನ್‌ಗಳ ಭರ್ಜರಿ ಜಯ.

ಅಹಮದಾಬಾದ್‌: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ(CSK vs GT) ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 89 ರನ್‌ಗಳ ಭರ್ಜರಿ ಜಯವನ್ನು ದಾಖಲಿಸಿತು. ಇದರೊಂದಿಗೆ 18 ಅಂಕಗಳನ್ನು ಕಲೆ ಹಾಕಿದ ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಜಿಟಿ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು. ಇನ್ನು ಈ ಸೋಲಿನ ಮೂಲಕ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ ತಂಡ, ಪ್ಲೇಆಫ್ಸ್‌ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆಯಿತು.

ಗುರುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟನ್ಸ್‌ ನೀಡಿದ್ದ 230 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಬಹುಬೇಗ ಚೇಸ್‌ ಮಾಡಿ ರನ್‌ರೇಟ್‌ ಹೆಚ್ಚಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮೊದಲನೇ ಎಸೆತದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಕೈಹಾಕಿತು. ಆದರೆ, ಪವರ್‌ಪ್ಲೇನಲ್ಲಿ ಮೊಹಮ್ಮದ್‌ ಸಿರಾಜ್‌ ಮಾರಕ ದಾಳಿ ನಡೆಸಿದ ಮೊಟ್ಟ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್‌ ಸೇರಿದಂತೆ ಋತುರಾಜ್‌ ಗಾಯಕ್ವಾಡ್‌ ಹಾಗೂ ಊರ್ವಿಲ್‌ ಪಟೇಲ್‌ ಅವರನ್ನು ಔಟ್‌ ಮಾಡಿ ಸಿಎಸ್‌ಕೆಗೆ ಪವರ್‌ಪ್ಲೇನಲ್ಲಿಯೇ ಪೆಟ್ಟು ನೀಡಿದರು.

IPL 2026: ಟಿ20 ಕ್ರಿಕೆಟ್‌ನಲ್ಲಿ 6000 ರನ್‌ಗಳನ್ನು ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದ ಶುಭಮನ್‌ ಗಿಲ್‌!

14 ಎಸೆತಗಳಲ್ಲಿ 24 ರನ್‌ ಗಳಿಸಿ ಆಡುತ್ತಿದ್ದ ಮ್ಯಾಥ್ಯೂ ಶಾರ್ಟ್‌ ಅವರನ್ನು ಕಗಿಸೊ ರಬಾಡ ಔಟ್‌ ಮಾಡಿದರು. ಕಾರ್ತಿಕ್‌ ಶರ್ಮಾ ರನ್‌ಔಟ್‌ ಆದರು. ಮಧ್ಯಮ ಓವರ್‌ಗಳಲ್ಲಿ ಅಬ್ಬರಿಸಿದ ಶಿವಂ ದುಬೇ ಕೇವಲ 17 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 47 ರನ್‌ ಸಿಡಿಸಿ ಸಿಎಸ್‌ಕೆ ಭರವಸೆ ಮೂಡಿಸಿದ್ದರು, ಆದರೆ ಅವರನ್ನು ಔಟ್‌ ಮಾಡುವಲ್ಲಿ ರಶೀದ್‌ ಖಾನ್‌ ಯಶಸ್ವಿಯಾದರು. 8 ಎಸೆತಗಳಲ್ಲಿ 19 ರನ್‌ ಸಿಡಿಸಿದ ಬಳಿಕ ಅನ್ಷುಲ್‌ ಕಾಂಬೋಜ್‌ ಹಾಗೂ ಡೆವಾಲ್‌ ಬ್ರೆವಿಸ್‌ ಅವರನ್ನು ರಶೀದ್‌ ಖಾನ್‌ ಸ್ಪಿನ್‌ ಮೋಡಿಯಿಂದ ಔಟ್‌ ಮಾಡಿದರು. ಕೊನೆಯಲ್ಲಿ ಕಗಿಸೊ ರಬಾಡ ಎರಡು ವಿಕೆಟ್‌ ಕಿತ್ತರು. ಅಂತಿಮವಾಗಿ ಸಿಎಸ್‌ಕೆ 13.4 ಓವರ್‌ಗಳಿಗೆ 140 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಜಿಟಿ ಪರ ನಿರ್ಣಾಯಕ ಮೂರು ವಿಕೆಟ್‌ಗಳನ್ನು ಕಿತ್ತ ಮೊಹಮ್ಮದ್‌ ಸಿರಾಜ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ರಬಾಡ ಹಾಗೂ ರಶೀದ್‌ ತಲಾ ಮೂರು ವಿಕೆಟ್‌ಗಳನ್ನು ಕಿತ್ತರು.



229 ರನ್‌ ಕಲೆ ಹಾಕಿದ್ದ ಗುಜರಾತ್‌ ಟೈಟನ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಗುಜರಾತ್‌ ಟೈಟನ್ಸ್‌ ತಂಡ, ಶುಭಮನ್‌ ಗಿಲ್‌, ಸಾಯಿ ಸುದರ್ಶನ್‌ ಹಾಗೂ ಜೋಸ್‌ ಬಟ್ಲರ್‌ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 229 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 230 ರನ್‌ಗಳ ಕಠಿಣ ಗುರಿಯನ್ನು ನೀಡಿತು.



ಗಿಲ್‌-ಸುದರ್ಶನ್‌ ಜುಗಲ್‌ಬಂದಿ

ಇನಿಂಗ್ಸ್‌ ಆರಂಭಿಸಿದ ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಆರಂಭದಿಂದಲೂ ಆಕ್ರಮಣಕಾರಿ ಆಟವನ್ನು ಆಡಿದರು.ಈ ಇಬ್ಬರೂ ಮೊದಲನೇ ವಿಕೆಟ್‌ಗೆ 12.2 ಓವರ್‌ಗಳಿಗೆ 125 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆ ಮೂಲಕ ಟೈಟನ್ಸ್‌ಗೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ನಾಯಕ ಗಿಲ್‌, 37 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 64 ರನ್‌ ಗಳಿಸಿದ ಬಳಿಕ ಸ್ಪೆನ್ಸರ್‌ ಜಾನ್ಸನ್‌ಗೆ ವಿಕೆಟ್‌ ಒಪ್ಪಿಸಿದರು.

IPL 2026: ಸತತ 5 ಅರ್ಧಶತಕಗಳ ಮೂಲಕ ವೀರೇಂದ್ರ ಸೆಹ್ವಾಗ್‌ ದಾಖಲೆ ಸರಿಗಟ್ಟಿದ ಸಾಯಿ ಸುದರ್ಶನ್‌!

ಸಾಯಿ ಸುದರ್ಶನ್‌ ಸತತ ಐದನೇ ಅರ್ಧಶತಕ

ಗಿಲ್‌ ವಿಕೆಟ್‌ ಒಪ್ಪಿಸಿದ ಬಳಿಕ ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಿದ ಸಾಯಿ ಸುದರ್ಶನ್‌ ಆಡಿದ 53 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 84 ರನ್‌ಗಳನ್ನು ಕಲೆ ಹಾಕಿದರು ಹಾಗೂ ಜೋಸ್‌ ಬಟ್ಲರ್‌ ಅವರ ಜೊತೆಗೆ 82 ರನ್‌ಗಳ ಜೊತೆಯಾಟವನ್ನು ಆಡಿದರು. ಇವರ ಜೊತೆಗೆ ಜೋಸ್‌ ಬಟ್ಲರ್‌ ಕೊನೆಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ 27 ಎಸೆತಗಳಲ್ಲಿ 57 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಜಿಟಿ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು.