ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಂಪೂರ್ಣ ಬದಲಾಗಿದೆ ಹಾಗೂ ಇಲ್ಲಿ ಮೊದಲನೇ ಎಸೆತದಿಂದಲೇ ಶಾಟ್ಸ್ ಆಡಲು ಸಾಧ್ಯವಾಗುವುದಿಲ್ಲ ಎಂದು ಆರ್‌ಸಿಬಿ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (Devdutt padikkal) ತಿಳಿಸಿದ್ದಾರೆ. ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಆರ್‌ಸಿಬಿ 43 ರನ್‌ಗಳ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅವರು ಸ್ಪೋಟಕ ಬ್ಯಾಟ್ ಮಾಡಿ ಅರ್ಧಶತಕವನ್ನು ಬಾರಿಸಿದ್ದರು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆರ್‌ಸಿಬಿ ತಂಡ, ದೇವದತ್ ಪಡಿಕ್ಕಲ್ ಹಾಗೂ ಟಿಮ್ ಡೇವಿಡ್ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 250 ರನ್‌ಗಳನ್ನು ಕಲೆ ಹಾಕಿತು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಪಡಿಕ್ಕಲ್, 29 ಎಸೆತಗಳಲ್ಲಿ 50 ರನ್ ಬಾರಿಸಿದ್ದರು. ಬಳಿಕ ಗುರಿಯನ್ನು ಹಿಂಬಾಲಿಸಿದ ಸಿಎಸ್‌ಕೆ ತಂಡ ಕಠಿಣ ಹೋರಾಟ ನೀಡಿದ ಹೊರತಾಗಿಯೂ 207 ರನ್‌ಗಳಿಗೆ ಆಲ್‌ಔಟ್ ಆಯಿತು.
IPL 2026: ʻತುಂಬಾ ನೋವಾಗುತ್ತಿದೆʼ: ಸಿಎಸ್‌ಕೆ ಹ್ಯಾಟ್ರಿಕ್ ಸೋಲಿನ ಬಗ್ಗೆ ಅಶ್ವಿನ್ ಪ್ರತಿಕ್ರಿಯೆ!
ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ದೇವದತ್ ಪಡಿಕ್ಕಲ್, “ನನ್ನ ಅಭಿಪ್ರಾಯದಲ್ಲಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶೇಷವಾಗಿ ಆರಂಭಿಕ ಓವರ್‌ಗಳಲ್ಲಿ ಪಿಚ್ ಸ್ವಲ್ಪ ನಿಧಾನವಾಗಿರುವುದು ಸಾಮಾನ್ಯ. ಕಳೆದ ಸೀಸನ್‌ನಲ್ಲೂ ನಾವು ಆರಂಭದಲ್ಲಿ ಕೆಲವು ಪಂದ್ಯಗಳಲ್ಲಿ ಅದರಿಂದ ಸಂಕಷ್ಟ ಅನುಭವಿಸಿದ್ದೇವೆ. ಮೊದಲಲ್ಲೇ ಮೂರು ಅಥವಾ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದ್ದೇವೆ,” ಎಂದು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಆರ್‌ಸಿಬಿ 2025ರಲ್ಲಿ ತಮ್ಮ ತವರು ಅಂಗಣದಲ್ಲಿ ಕಠಿಣ ಅವಧಿಯನ್ನು ಎದುರಿಸಿತ್ತು, ಮೊದಲ ಮೂರು ಪಂದ್ಯಗಳನ್ನು ಸೋತಿತ್ತು. ಈ ಬಗ್ಗೆ ಮಾತನಾಡಿದ ದೇವದತ್ ಪಡಿಕ್ಕಲ್, ಕಳೆದ ಸೀಸನ್‌ನಿಂದ ನಾವು ಪಾಠ ಕಲಿತಿದ್ದೇವೆ. ಕಳೆದ ಸೀಸನ್‌ನಿಂದ ಪಾಠ ಕಲಿತ ತಂಡ, ಮೊದಲ 10 ಓವರ್‌ಗಳಲ್ಲಿ ಅತಿಯಾದ ಆಕ್ರಮಣಾತ್ಮಕ ಆಟವನ್ನು ಆಡದೆ ಜಾಗೃತವಾಗಿರುವ ನಿರ್ಧಾರ ತೆಗೆದುಕೊಂಡಿತು ಎಂದಿದ್ದಾರೆ.
IPL 2026: ಟಿಮ್ ಡೇವಿಡ್ ಅಬ್ಬರಕ್ಕೆ ಕೊಚ್ಚಿಹೋದ ಸಿಎಸ್‌ಕೆ, ಆರ್‌ಸಿಬಿಗೆ ಭರ್ಜರಿ ಜಯ!
“ಕಳೆದ ವರ್ಷ ಮಧ್ಯದಲ್ಲಿ ನಾವು ಮಾತುಕತೆ ನಡೆಸಿದ್ದೆವು, ಪಿಚ್ ಈ ರೀತಿಯಾಗಿ ವರ್ತಿಸುತ್ತಿದ್ದರೆ, ನಿಮ್ಮ ಬಳಿ ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಚೆಂಡು ಸ್ವಲ್ಪ ಹಳೆಯದಾದ ನಂತರ ಬ್ಯಾಟಿಂಗ್ ನಡೆಸುವುದು ಸುಲಭವಾಗುತ್ತದೆ,” ಎಂದು ಅವರು ಹೇಳಿದ್ದಾರೆ.
“ಅದೇ ಮುಖ್ಯ ಚರ್ಚೆ. 10 ಓವರ್ ವೇಳೆಗೆ ನಾವು ಮೂರು ಅಥವಾ ನಾಲ್ಕು ವಿಕೆಟ್ ಕಳೆದುಕೊಳ್ಳಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಅದನ್ನು ಸಾಧಿಸಿದ ನಂತರ, ನಾವು ಅಲ್ಲಿಂದ ಮುಂದೆ ಸುಲಭವಾಗಿ ಆಟವನ್ನು ಮುಂದುವರಿಸಬಹುದು,” ಎಂದು ದೇವದತ್ ಪಡಿಕ್ಕಲ್ ತಿಳಿಸಿದ್ದಾರೆ.