ನವದೆಹಲಿ: ಗಾಯಾಳು ಇಂಗ್ಲೆಂಡ್ ಆಲ್‌ರೌಂಡರ್ ಜೇಮಿ ಓವರ್ಟನ್ (Jamie Overton) ಅವರ ಸ್ಥಾನಕ್ಕೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಇನ್ನುಳಿದ ಭಾಗಕ್ಕೆ ದಕ್ಷಿಣ ಆಫ್ರಿಕಾ ಆಲ್‌ರೌಂಡರ್ ಡಿಯಾನ್ ಫರೆಸ್ಟರ್ (Dian Forrester) ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಸಿಕೊಂಡಿದೆ. ಬಲ ತೊಡೆ ಗಾಯಕ್ಕೆ ತುತ್ತಾದ ಕಾರಣ ಜೇಮಿ ಓವಟರ್ನ್ ಅವರು ಟೂರ್ನಿ ಇನ್ನುಳಿದ ಭಾಗದಿಂದ ಹೊರ ಬಿದ್ದಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ಫರೆಸ್ಟರ್ ಅವರು 75 ಲಕ್ಷ ರು. ಗಳಿಗೆ ಸಿಎಸ್‌ಕೆಗೆ ಸೇರ್ಪಡೆಯಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೇ 13ರಂದು ಬುಧವಾರ ತಿಳಿಸಿದಂತೆ ಜೇಮಿ ಓವರ್ಟನ್ ಅವರು ಗಾಯದ ನಂತರ “ಮುಂದಿನ ವೈದ್ಯಕೀಯ ಪರಿಶೀಲನೆ ಮತ್ತು ಚಿಕಿತ್ಸೆ”ಗಾಗಿ ಯುನೈಟೆಡ್ ಕಿಂಗ್‌ಡಮ್‌ಗೆ ಮರಳಿದ್ದಾರೆ. ಲಖನೌದಲ್ಲಿ ನಡೆಯಲಿರುವ ಮುಂದಿನ ಪಂದ್ಯಕ್ಕೂ ಮುನ್ನ ಈ ಗಾಯ ಸಂಭವಿಸಿದ್ದು, ಅವರು ಇದೀಗ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆಂಬುದು ಸ್ಪಷ್ಟವಾಗಿದೆ.
LSG vs RCB: ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಚೆನ್ನೈ ಸಜ್ಜು; ಲಖನೌ ಎದುರಾಳಿ
ಪ್ರಸ್ತುತ ಸಾಗುತ್ತಿರುವ ಈ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಜೇಮಿ ಓವರ್ಟನ್ ಕೀ ಆಟಗಾರರಾಗಿದ್ದರು. ಅವರು ಆಡಿದ 10 ಪಂದ್ಯಗಳಿಂದ 17.78ರ ಸರಾಸರಿ ಹಾಗೂ 8.89ರ ಎಕಾನಮಿ ರೇಟ್‌ನಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರ ಜೊತೆಗೆ ಬ್ಯಾಟಿಂಗ್‌ನಲ್ಲಿ 158.13ರ ಸ್ಟ್ರೈಕ್ ರೇಟ್‌ನಲ್ಲಿ 136 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಕೆಳ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಿದ್ದರು. ಇದೀಗ ಅವರ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಗಿದೆ.
ಮೇ 11 ರಂದು ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿ ಸಿಎಸ್‌ಕೆ ಪರ ಆಡಿದ್ದರು. ಈ ಪಂದ್ಯದಲ್ಲಿ ಅವರು ಈ ಸೀಸನ್‌ನ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಬೌಲ್ ಮಾಡಿದ್ದ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 36 ರನ್ ನೀಡಿ ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಸಿಎಸ್‌ಕೆ ಎದುರಾಳಿ ತಂಡವನ್ನು 203 ರನ್‌ಗಳಿಗೆ ಕಟ್ಟಿ ಹಾಕಿತ್ತು. ನಂತರ ಸಿಎಸ್‌ಕೆ ಕೊನೆಯ ಓವರ್‌ನಲ್ಲಿ ಗುರಿ ತಲುಪಿತ್ತು. ಈ ಪಂದ್ಯದಲ್ಲಿ ಓವರ್ಟನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿತ್ತು.
2026ರ ಮಾರ್ಚ್ ತಿಂಗಳಲ್ಲಿ ಡಿಯಾನ್ ಫರೆಸ್ಟರ್ ಅವರು ದಕ್ಷಿಣ ಆಫ್ರಿಕಾ ತಂಡದ ಪರ ನ್ಯೂಜಿಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಆಲ್‌ರೌಂಡರ್ ಐದು ಪಂದ್ಯಗಳನ್ನು ಆಡಿದ್ದು, 83 ರನ್‌ಗಳನ್ನು ಗಳಿಸಿದ್ದಾರೆ.
ಈ ಸೀಸನ್‌ನಲ್ಲಿ ಗಾಯಾಳುಗಳ ಸಮಸ್ಯೆ ಎದುರಿಸುತ್ತಿರುವ ಸಿಎಸ್‌ಕೆ ತಂಡಕ್ಕೆ ಈ ಹಿಂದೆ ಮತ್ತೊಂದು ಬದಲಾವಣೆಯಾಗಿತ್ತು. ಬುಧವಾರ ಫ್ರಾಂಚೈಸಿ ಗಾಯಾಳು ರಾಮಕೃಷ್ಣ ಘೋಷ್ ಅವರ ಬದಲಿಗೆ ಕರ್ನಾಟಕದ ಆಲ್‌ರೌಂಡರ್ ಮ್ಯಾಕ್ನೀಲ್ ನೊರೊನ್ಹಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಘೋಷಿಸಿತ್ತು. ಈಗಾಗಲೇ ಸೀಸನ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ವೇಗಿ ನೇಥನ್ ಎಲ್ಲಿಸ್ ಗಾಯದಿಂದ ಹೊರಗುಳಿದಿದ್ದರು. ಬಳಿಕ ಎಡಗೈ ವೇಗಿ ಖಲೀಲ್ ಅಹ್ಮದ್ ಗಾಯದಿಂದ ಹೊರಬಿದ್ದರೆ, ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಯಿಂದ ಟೂರ್ನಿಯಿಂದ ದೂರವಾಗಿದ್ದಾರೆ. ಈ ಗಾಯಗಳ ಸರಣಿ ತಂಡದ ಸಂಯೋಜನೆಗೆ ದೊಡ್ಡ ಹೊಡೆತ ನೀಡಿದ್ದು, ತಂಡ ನಿರಂತರವಾಗಿ ಬದಲಾವಣೆಗಳನ್ನು ಮಾಡಬೇಕಾದ ಸ್ಥಿತಿಗೆ ತಲುಪಿದೆ.