ನವದೆಹಲಿ: ಭುವನೇಶ್ವರ್ ಕುಮಾರ್ ಹಾಗೂ ಜಾಶ್ ಹೇಝಲ್‌ವುಡ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್ (DC) ಆರಂಭಿಕ ಕುಸಿತ ಕಂಡಿತು. ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ 10 ರನ್ ಇರುವಾಗಲೇ ಪ್ರಮುಖ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ 10 ರನ್‌ಗೆ 6 ವಿಕೆಟ್ ಕಳೆದುಕೊಂಡು ಮೊದಲ ತಂಡ ಎಂಬ ಅನಗತ್ಯ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಹೆಗಲೇರಿಸಿಕೊಂಡಿದೆ. ಡಿಸಿ 2.4 ಓವರ್‌ಗಳಿಗೆ ಕೇವಲ 7 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಭುವನೇಶ್ವರ್ ಕುಮಾರ್ ಪಂದ್ಯದ ಎರಡನೇ ಎಸೆತದಲ್ಲಿಯೇ ಸಾಹಿನ್ ಪರಾಖ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ ಡೆಲ್ಲಿ ತಂಡದ ಕುಸಿತ ಆರಂಭವಾಗಿತ್ತು.
ಭುವನೇಶ್ವರ್ ಕುಮಾರ್ ಬಳಿಕ ಜಾಶ್ ಹೇಝಲ್‌ವುಡ್ ಅವರು ಪಾರ್ಟಿಗೆ ಸೇರ್ಪಡೆಯಾದರು. ಪಂದ್ಯದ ಎರಡನೇ ಓವರ್‌ನಲ್ಲಿ ಜಾಶ್ ಹೇಝಲ್‌ವುಡ್ ಸತತ ಎರಡು ಎಸೆತಗಳಲ್ಲಿ ಇನ್‌ಫಾರ್ಮ್ ಬ್ಯಾಟರ್ ಕೆಎಲ್ ರಾಹುಲ್ ಹಾಗೂ ಸಮೀರ್ ರಿಝ್ವಿ ಅವರನ್ನು ಔಟ್ ಮಾಡಿದರು. ಎರಡನೇ ಓವರ್‌ನ ಆರಂಭಿಕ ಎರಡು ಎಸೆತಗಳಲ್ಲಿ ಹೇಝಲ್‌ವುಡ್ ಮ್ಯಾಜಿಕ್ ಮಾಡಿದ್ದರು.
RCB vs DC ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಜತ್ ಪಾಟಿದಾರ್!
ಇನ್ನು ಮೂರನೇ ಓವರ್‌ಗೆ ಮರಳಿದ ಭುವನೇಶ್ವರ್ ಕುಮಾರ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರಿಸ್ಥಿತಿಯನ್ನು ಇನ್ನಷ್ಟು ಕಠಣತೆಗೆ ತಳ್ಳಿದರು. ಅವರು ಮೂರನೇ ಓವರ್‌ನ ಮೊದಲನೇ ಎಸೆತದಲ್ಲಿ ಟ್ರಿಸ್ಟನ ಸ್ಟಬ್ಸ್ ಅವರನ್ನು ಔಟ್ ಮಾಡಿದರೆ, ನಾಲ್ಕನೇ ಎಸೆತದಲ್ಲಿ ನಾಯಕ ಅಕ್ಷರ್ ಪಟೇಲ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆ ಮೂಲಕ ಆರ್‌ಸಿಬಿ ತಂಡದ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಉತ್ತರ ನೀಡುವಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ನಂತರ ನಾಲ್ಕನೇ ಓವರ್‌ನ ಐದನೇ ಎಸೆತದಲ್ಲಿ ಜಾಶ್ ಹೇಝಲ್‌ವುಡ್, ನಿತೀಶ್ ರಾಣಾ ಅವರನ್ನು ಔಟ್ ಮಾಡಿದರು. ಆ ಮೂಲಕ ಡೆಲ್ಲಿ 8 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು.
ಆರ್‌ಸಿಬಿ ಪರ ಕೃಣಾಲ್ ಪಾಂಡ್ಯ, ಸುಯಾಶ್ ಶರ್ಮಾ ಹಾಗೂ ರಸಿಕ್ ದಾರ್ ಸಲಾಮ್ ಅವರು ಕೂಡ ಒಂದೊಂದು ವಿಕೆಟ್ ಕಿತ್ತರು. ಆದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದ ಅಭಿಷೇಕ್ ಪೊರೆಲ್ ಕೆಲಕಾಲ ಆರ್‌ಸಿಬಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಅವರು 17ನೇ ಓವರ್‌ನಲ್ಲಿ ಅವರು ಜಾಶ್ ಹೇಝಲ್‌ವುಡ್‌ಗೆ ವಿಕೆಟ್ ಒಪ್ಪಿಸುವುದಕ್ಕೂ ಮುನ್ನ 33 ಎಸೆತಗಳಲ್ಲಿ 30 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 19 ರನ್ ಹಾಗೂ ಕೈಲ್ ಜೇಮಿಸನ್ 12 ರನ್ ಗಳಿಸಿದರು. ಈ ಮೂವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಲಿಲ್ಲ. ಅಂತಿಮವಾಗಿ ಡಿಸಿ 16.3 ಓವರ್‌ಗಳಿಗೆ 75 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಆರ್‌ಸಿಬಿಗೆ 76 ರನ್‌ಗಳ ಗುರಿಯನ್ನು ನೀಡಿತು.
ಐಪಿಎಲ್ ಪವರ್‌ಪ್ಲೇನಲ್ಲಿ ಅತ್ಯಂತ ಕಡಿಮೆ ರನ್ ಗಳಿಸಿದ ತಂಡಗಳು
2026 - ಡಿಸಿ vs ಆರ್‌ಸಿಬಿ: 13/6, ದೆಹಲಿ
2022 – ಎಸ್‌ಆರ್‌ಹೆಚ್ vs ಆರ್‌ಸಿಬಿ: 14/3, ಪುಣೆ
2009 – ಆರ್‌ಆರ್ vs ಆರ್‌ಸಿಬಿ: 14/2, ಕೇಪ್ ಟೌನ್
2011 – ಸಿಎಸ್‌ಕೆ vs ಕೆಕೆಆರ್: 15/2, ಕೋಲ್ಕತಾ
2015 – ಸಿಎಸ್‌ಕೆ vs ಡಿಸಿ: 16/1, ರಾಯ್‌ಪುರ
2019 – ಸಿಎಸ್‌ಕೆ vs ಆರ್‌ಸಿಬಿ: 16/1, ಚೆನ್ನೈ