ನವದೆಹಲಿ: ಫಿನ್ ಆಲೆನ್ (Finn Allen) ಸ್ಪೋಟಕ ಶತಕದ ಬಲದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ (KKR vs DC) ಡೆಲ್ಲಿ ಕ್ಯಾಪಿಟಲ್ಸ್ ಎದುರು 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಸತತ ನಾಲ್ಕನೇ ಜಯದ ಮೂಲಕ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ 9 ಅಂಕಗಳೊಂದಿಗೆ ಟೂರ್ನಿಯ ಪ್ಲೇಆಫ್ಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಏಳನೇ ಸೋಲು ಅನುಭವಿಸಿ 16 ಅಂಕಗಳನ್ನು ಕಲೆ ಹಾಕುವ ಅವಕಾಶವನ್ನು ಕಳೆದುಕೊಂಡ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ತಂಡದ ಪ್ಲೇಆಫ್ಸ್ ಹಾದಿ ಅತ್ಯಂತ ಕಠಿಣವಾಗಿದೆ.
ಮೇ 8 ರಂದು ಶಕ್ರವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದ ಬ್ಯಾಟಿಂಗ್ ವಿಕೆಟ್‌ನಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೇವಲ 142 ರನ್‌ಗಳಿಗೆ ಕಟ್ಟಿ ಹಾಕಿ ತಮ್ಮ ತಂಡಕ್ಕೆ ಅರ್ಧ ಪಂದ್ಯವನ್ನು ಕೆಕೆಆರ್ ಬೌಲರ್‌ಗಳು ಗೆದ್ದುಕೊಟ್ಟರೆ, ಇನ್ನುಳಿದ ಅರ್ಧ ಪಂದ್ಯವನ್ನು 47 ಎಸೆತಗಳಲ್ಲಿ ಶತಕ ಬಾರಿಸಿದ ಆರಂಭಿಕ ಫಿನ್ ಆಲೆನ್ ಗೆದ್ದುಕೊಟ್ಟರು. ಅವರು 212.77ರ ಸ್ಟ್ರೈಕ್ ರೇಟ್‌ನಲ್ಲಿ ಬರೋಬ್ಬರಿ 10 ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಬಾರಿಸಿದ್ದು ಅತ್ಯಂತ ವಿಶೇಷವಾಗಿತ್ತು. ಅಂದಹಾಗೆ ಕೆಕೆಆರ್ ಪರ ಹಾಗೂ ತಮ್ಮ ಐಪಿಎಲ್ ವೃತ್ತಿ ಜೀವನದ ಮೊದಲ ಶತಕ ಬಾರಿಸಿದರು. ಇವರ ಸ್ಪೋಟಕ ಶತಕದ ನೆರವಿನಿಂದ ಕೆಕೆಆರ್, 14.2 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಗೆದ್ದು ಬೀಗಿತು ಹಾಗೂ ಆಲೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
DC vs KKR: ಐಪಿಎಲ್ ಟೂರ್ನಿಯಲ್ಲಿ ಅಪರೂಪದ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್!
ಫಿನ್ ಆಲೆನ್ ಜೊತೆಗೆ ಮೂರನೇ ವಿಕೆಟ್‌ಗೆ 116(64 ಎಸೆತಗಳು) ರನ್‌ಗಳ ಜೊತೆಯಾಟವನ್ನು ಆಡಿದ್ದ ಕ್ಯಾಮೆರಾನ್ ಗ್ರೀನ್ 27 ಎಸೆತಗಳಲ್ಲಿ ಅಜೇಯ 33 ರನ್‌ಗಳನ್ನು ಕಲೆ ಹಾಕಿದ್ದರು. ಇದಕ್ಕೂ ಮುನ್ನ ನಾಯಕ ಅಜಿಂಕ್ಯ ರಹಾನೆ 13 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರೂ ಅಚ್ಚರಿ ರೀತಿಯಲ್ಲಿ ರನೌಟ್ ಆಗಿದ್ದರು. ಡಿಸಿ ಪರ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದಿದ್ದಾರೆ.
ಡೆಲ್ಲಿಯನ್ನು 142 ರನ್‌ಗಳಿಗೆ ಕಟ್ಟಿ ಹಾಕಿದ ಕೆಕೆಆರ್
ಇದಕ್ಕೂ ಮುನ್ನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಅವರ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ಪಥುಮ್ ನಿಸಾಂಕ ಅವರ ಅರ್ಧಶತಕದ ಹೊರತಾಗಿಯೂ ಕೆಕೆಆರ್ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳ 8 ವಿಕೆಟ್‌ಗಳ ನಷ್ಟಕ್ಕೆ 142 ರನ್‌ಗಳಿಗೆ ಸೀಮಿತವಾಯಿತು.
ಡಿಸಿ ಪರ ಇನಿಂಗ್ಸ್ ಆರಂಭಿಸಿದ ಪಥುಮ್ ನಿಸಾಂಕ ಹಾಗೂ ಕೆಎಲ್ ರಾಹುಲ್ ಮೊದಲನೇ ವಿಕೆಟ್‌ಗೆ 49 ರನ್ ಕಲೆ ಹಾಕಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಕಾರ್ತಿಕ್ ತ್ಯಾಗಿ 23 ರನ್ ಗಳಿಸಿ ಆಡುತ್ತಿದ್ದ ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದರು. ನಿಸಾಂಕ ಹಾಗೂ ನಿತೀಶ್ ರಾಣಾ 25 ರನ್ ಜೊತೆಯಾಟದ ಮೂಲಕ ಡೆಲ್ಲಿಗೆ ಭರವಸೆ ಮೂಡಿಸಿತ್ತಾದರೂ ಕ್ಯಾಮೆರಾನ್ ಗ್ರೀನ್ ಅವರು ಎಡಗೈ ಬ್ಯಾಟ್ಸ್‌ಮನ್‌ಗೆ ಪೆವಿಲಿಯನ್ ಹಾದಿ ತೋರಿಸಿದ ಬಳಿಕ ಪಂದ್ಯದ ದಿಕ್ಕು ಸಂಪೂರ್ಣವಾಗಿ ಕೆಕೆಆರ್ ಪರ ತಿರುಗಿತು.
ಡೆಲ್ಲಿಗೆ ಪಥುಮ್ ನಿಸಾಂಕ ಅರ್ಧಶತಕದ ಆಸರೆ
ಡೆಲ್ಲಿ ತಂಡ ಕೇವಲ 15 ರನ್‌ಗಳ ಅಂತರದಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಸಮೀರ್ ರಿಝ್ವಿ, ಅರ್ಧಶತಕ ಬಾರಿಸಿದ್ದ ಪಥುಮ್ ನಿಸಾಂಕ ಹಾಗೂ ಟ್ರಿಸ್ಟನ್ ಸ್ಟಬ್ಸ್ ವಿಕೆಟ್ ಒಪ್ಪಿಸಿದರು. ವಿಶೇಷವಾಗಿ ಸ್ಪಿನ್ನರ್ ಅನುಕುಲ್ ರಾಯ್ ಅವರು 11ನೇ ಓವರ್‌ನಲ್ಲಿ 29 ಎಸೆತಗಳಲ್ಲಿ 50 ರನ್ ಗಳಿಸಿದ್ದ ನಿಸಾಂಕ ಹಾಗೂ ಅಪಾಯಕಾರಿ ಟ್ರಿಸ್ಟನ್ ಸ್ಟಬ್ಸ್ ಅವರನ್ನು ಸ್ಪಿನ್ ಬಲೆಗೆ ಬೀಳಿಸಿ ಪಂದ್ಯವನ್ನು ತಿರುಗಿಸಿದ್ದರು. ನಾಯಕ ಅಕ್ಷರ್ ಪಟೇಲ್ ಕೂಡ ವಿಫಲರಾದರು. ಆದರೆ, ಕೊನೆಯಲ್ಲಿ ಕೊಂಚ ಪರಿಣಾಮಕಾರಿ ಬ್ಯಾಟ್ ಮಾಡಿದ 28 ಎಸೆತಗಳಲ್ಲಿ 39 ರನ್ ಗಳಿಸಿದರು. ಆ ಮೂಲಕ ತಂಡದ ಮೊತ್ತ 140ರ ಗಡಿ ದಾಟಲು ನೆರವು ನೀಡಿದ್ದರು. ಡೆಲ್ಲಿ ಪರ ಪಥುಮ್ ನಿಸಾಂಕ ಅರ್ಧಶತಕ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಕೆಕೆಆರ್ ಪರ ಅನುಕುಲ್ ರಾಯಲ್ ಹಾಗೂ ಕಾರ್ತಿಕ್ ತ್ಯಾಗಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ವೈಭವ್ ಅರೋರಾ, ಸುನೀಲ್ ನರೇನ್ ಹಾಗೂ ಕ್ಯಾಮೆರಾನ್ ಗ್ರೀನ್ ತಲಾ ಒಂದೊಂದು ವಿಕೆಟ್ ಕಿತ್ತರು.