ಮುಂಬೈ: ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಕೃಣಾಲ್ ಪಾಂಡ್ಯ (Krunal pandya) ಸಹೋದರರ ನಡುವಿನ ಬಾಂಧವ್ಯದ ಬಗ್ಗೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗಳಿಗೂ ಗೊತ್ತಿದೆ. ದೇಶಿ ಕ್ರಿಕೆಟ್‌ನಲ್ಲಿ ಬರೋಡಾ, ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡದಲ್ಲಿ ಹಲವು ವರ್ಷಗಳ ಕಾಲ ಪಾಂಡ್ಯ ಸಹೋದರರು ಆಡಿದ್ದಾರೆ. ಅದರಂತೆ ಸಾಕಷ್ಟು ಪಂದ್ಯಗಳನ್ನು ಈ ಇಬ್ಬರೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಗೆಲ್ಲಿಸಿದ್ದಾರೆ. ಆದರೆ, 2022 ರಿಂದ ಐಪಿಎಲ್ ಟೂರ್ನಿಯಲ್ಲಿ ಈ ಇಬ್ಬರೂ ಆಲ್‌ರೌಂಡರ್‌ಗಳು ಬೇರೆ-ಬೇರೆ ತಂಡಗಳ ಪರ ಆಡುತ್ತಿದ್ದಾರೆ.
ಪರಸ್ಪರ ಎದುರಾಳಿ ತಂಡಗಳಲ್ಲಿ ಆಡಿದರೂ ಮೈದಾನದಲ್ಲಿ ಈ ಇಬ್ಬರೂ ಅನೂನ್ಯವಾಗಿ ಕಾಣಿಸಿಕೊಳ್ಳುತ್ತಿದ್ದರು. ಕೃಣಾಲ್ ಲಖನೌ ಸೂಪರ್ ಜಯಂಟ್ಸ್ ಪರ ಆಡುವಾಗ ಹಾಗೂ ಹಾರ್ದಿಕ್ ಗುಜರಾತ ಟೈಟನ್ಸ್ ಪರ ಆಡುವಾಗ, ಪಂದ್ಯದ ಬಳಿಕ ಈ ಇಬ್ಬರೂ ತಮ್ಮ-ತಮ್ಮ ಜೆರ್ಸಿಗಳನ್ನು ಬದಲಾಯಿಸಿಕೊಂಡಿದ್ದರು. ಅಷ್ಟರ ಮಟ್ಟಿಗೆ ಇವರ ನಡುವೆ ಬಾಂಧವ್ಯ ಇತ್ತು. ಆದರೆ, ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದಲ್ಲಿ ಹಾರ್ದಿಕ್-ಕೃಣಾಲ್ ಬದ್ದ ವೈರಿಗಳ ರೀತಿ ಕಾಣಿಸಿಕೊಂಡಿದ್ದರು.
ಪಂದ್ಯದ ಬಳಿಕ ಕೈಕುಲುಕದ ಪಾಂಡ್ಯ ಬದ್ರರ್ಸ್; ಬಿರುಕು ಖಚಿತ ಎಂದ ನೆಟ್ಟಿಗರು
241 ರನ್‌ಗಳ ಚೇಸಿಂಗ್ ವೇಳೆ ಬ್ಯಾಟ್ ಮಾಡುತ್ತಿದ್ದಾಗ ಹಾರ್ದಿಕ್ ಪಾಂಡ್ಯಗೆ ಕೃಣಾಲ್ ಪಾಂಡ್ಯ ಬೌನ್ಸರ್ ಎಸೆದಿದ್ದರು. ಇದನ್ನು ಹಾರ್ದಿಕ್ ಪಾಂಡ್ಯ ನಿರೀಕ್ಷೆ ಮಾಡಿರಲಿಲ್ಲ. ಈ ವೇಳೆ ಹಾರ್ದಿಕ್ ಗುರಾಯಿಸಿದ್ದರು. ನಂತರ ಜೇಕನಬ್ ಡಫಿ ಬೌಲಿಂಗ್‌ನಲ್ಲಿ ಹಾರ್ದಿಕ್ ರೊಮ್ಯಾರಿಯೊ ಶೆಫರ್ಡ್‌ಗೆ ಕ್ಯಾಚ್ ಕೊಟ್ಟು ಔಟ್ ಆದ ಬಳಿಕ ಕೃಣಾಲ್ ಪಾಂಡ್ಯ ವಿಭಿನ್ನವಾಗಿ ಸಂಭ್ರಮಿಸಿದ್ದರು. ಈ ವೇಳೆ ಹಾರ್ದಿಕ್ ಪಾಂಡ್ಯ, ತಮ್ಮ ಸಹೋದರನ ಕಡೆ ಅಪಾಯಕಾರಿಯ ಲುಕ್ ಕೊಟ್ಟು ಪೆವಿಲಿಯನ್‌ಗೆ ಹೆಜ್ಜೆ ಹಾಕಿದ್ದರು. ಇದನ್ನು ಗಮನಿಸಿದರೆ, ಪಾಂಡ್ಯ ಸಹೋದದರು ಮೊದಲಿನ ರೀತಿ ಅನೂನ್ಯವಾಗಿಲ್ಲ ಎಂಬುದು ಅರ್ಥವಾಗುತ್ತದೆ.
ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ ಪಾಂಡ್ಯ ಬ್ರದರ್ಸ್
ಆರ್‌ಸಿಬಿ ತಂಡ ಅಂತಿಮವಾಗಿ 18 ರನ್‌ಗಳ ಗೆಲುವು ಪಡೆದ ಬಳಿಕ ಆಟಗಾರರು ಹ್ಯಾಂಡ್ ಶೇಕ್ ನೀಡುತ್ತಿದ್ದರು. ಈ ವೇಳೆ ಒಬ್ಬರಿಗೊಬ್ಬರು ಎದುರಾದಾಗಲೂ ಹ್ಯಾಂಡ್‌ಶೇಕ್ ಮಾಡಲು ಕೃಣಾಲ್ ಹಾಗೂ ಹಾರ್ದಿಕ್ ಮುಂದಾಗಲಿಲ್ಲ. ಇದನ್ನು ಗಮನಿಸಿದರೆ, ಈ ಇಬ್ಬರ ನಡುವೆ ಬಾಂಧವ್ಯ ಹದಗೆಟ್ಟಿದೆ ಎಂದು ಅಂದಾಜಿಸಬಹುದು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಪಾಂಡ್ಯ ಸಹೋದರರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಭಾರತ ತಂಡ ಇತ್ತೀಚೆಗೆ ಮೂರನೇ ಟಿ20 ವಿಶ್ವಕಪ್ ಗೆದ್ದಾಗಲೂ ಹಾರ್ದಿಕ್ ಪಾಂಡ್ಯಗೆ ಕೃಣಾಲ್ ಅಭಿನಂದನೆಗಳನ್ನು ತಿಳಿಸಿರಲಿಲ್ಲ ಹಾಗೂ ಇತ್ತೀಚೆಗೆ ಕೃಣಾಲ್ ಪಾಂಡ್ಯ ಅವರ ಹುಟ್ಟು ಹಬ್ಬಕ್ಕೂ ಹಾರ್ದಿಕ್ ಶುಭಾಶಯ ತಿಳಿಸಿರಲಿಲ್ಲ. ಇದೆಲ್ಲಾ ಅಂಶಗಳನ್ನು ಗಮನಿಸಿದರೆ, ಈ ಇಬ್ಬರ ನಡುವೆ ಬಾಂಧವ್ಯ ಹದಗೆಟ್ಟಿದೆ ಎಂದು ತಿಳಿದುಬರುತ್ತದೆ.