ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ʻಮುಂಬೈ ಇಂಡಿಯನ್ಸ್‌ ತೊರೆಯಿರಿʼ-ಹಾರ್ದಿಕ್‌ ಪಾಂಡ್ಯಗೆ ಮೈಕಲ್‌ ವಾನ್‌ ಸಲಹೆ!

IPL 2026: ಮುಂಬೈ ಇಂಡಿಯನ್ಸ್‌ ತಂಡದ ವೈಫಲ್ಯದ ಹಿನ್ನೆಲೆಯಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯಗೆ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಮುಂಬೈ ತಂಡದ ಜತೆಗಿನ ಟ್ರೇಡ್‌ ಡೀಲ್‌ ಮುರಿದುಕೊಂಡು ಬೇರೆ ತಂಡಕ್ಕೆ ಸೇರ್ಡೆಯಾಗಿ ಎಂದು ಅವರು ಆಗ್ರಹಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯಗೆ ಸಲಹೆ ನೀಡಿದ ಮೈಕಲ್‌ ವಾನ್‌.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಸಾಲಿನ (IPL 2026) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ (MI) ಸತತ ವೈಫಲ್ಯ ಅನುಭವಿಸಿದ ಬಳಿಕ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಟೀಕೆಗಳಿಗೆ ಗುರಿಯಾಗಿದ್ದಾರೆ. ಆದರೆ, ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌, ಹಾರ್ದಿಕ್‌ ಪಾಂಡ್ಯ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡದಲ್ಲಿ ನಿಮ್ಮ ನಾಯಕತ್ವ ಕೆಲಸ ಮಾಡುತ್ತಿಲ್ಲ, ಹಾಗಾಗಿ ನೀವು ಬೇರೆ ಯಾವುದಾದರೂ ತಂಡಕ್ಕೆ ಸೇರ್ಪಡೆಯಾಗಿ ಎಂದು ಆಗ್ರಹಿಸಿದ್ದಾರೆ.

ಮುಂದಿನ ಐಪಿಎಲ್‌ ಟೂರ್ನಿಯ ಆಟಗಾರರ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ ತಂಡ ಹಾರ್ದಿಕ್‌ ಪಾಂಡ್ಯ ಅವರನ್ನು ಏನು ಮಾಡಬೇಕೆಂದು ಕೇಳಿದಾಗ ಮೈಕಲ್‌ ವಾನ್‌ ಯಾವುದೇ ಹಿಂಜರಿಕೆಯಿಲ್ಲದೆ “ರಿಲೀಸ್ ಮಾಡಿ” ಎಂದು ಸಲಹೆ ನೀಡಿದ್ದಾರೆ.

ಕ್ರಿಕ್‌ಬಝ್‌ನಲ್ಲಿ ಮಾತನಾಡಿದ ವಾನ್, “ನಾನು ಸಾಕಷ್ಟು ನೋಡಿದ್ದೇನೆ. ಅವರನ್ನು ಮತ್ತೆ ತಂಡಕ್ಕೆ ಕರೆತಂದ ನಿರ್ಧಾರದ ತರ್ಕ ನನಗೆ ಸ್ಪಷ್ಟವಾಗಲಿಲ್ಲ. ಅವರು ಗುಜರಾತ್‌ ಟೈಟನ್ಸ್‌ ತಂಡದೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದರು. ಬೇರೆ ಆಟಗಾರರು ಹಾಗೂ ಬೇರೆ ಕೋಚ್‌ನೊಂದಿಗೆ ಅವರು ಅಲ್ಲಿ ಪ್ರಶಸ್ತಿ ಗೆದ್ದಿದ್ದರು,” ಎಂದು ಹೇಳಿದರು.

IPL 2026: ಮುಂಬೈ ಇಂಡಿಯನ್ಸ್‌ ತಂಡದ ವಾತಾವರಣವನ್ನು ಹಾರ್ದಿಕ್‌ ಪಾಂಡ್ಯ ಹಾಳು ಮಾಡಿದ್ದಾರೆ-ಮನೋಜ್‌ ತಿವಾರಿ!

“ನನ್ನ ಅನಿಸಿಕೆಯಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿ ಈಗ ಅಡುಗೆಮನೆಗೆ ತುಂಬಾ ಹೆಚ್ಚು ‘ಶೆಫ್’ಗಳು ಇದ್ದಾರೆ. ಆದ್ದರಿಂದ ಒಬ್ಬರನ್ನು ಹೊರಗಿಡುವುದು ಉತ್ತಮ,” ಎಂದು ವಾನ್ ವ್ಯಂಗ್ಯವಾಗಿ ಅಭಿಪ್ರಾಯಪಟ್ಟರು. ಆದರೆ, ವಾನ್ ಮುಂಬೈ ಇಂಡಿಯನ್ಸ್‌ಗೆ ಧೈರ್ಯಶಾಲಿ ಟ್ರೇಡ್ ಡೀಲ್ ಪರಿಗಣಿಸುವ ಸಲಹೆಯನ್ನೂ ನೀಡಿದರು. “ಅವರ ಬದಲಿಗೆ ಕ್ಯಾಮೆರಾನ್‌ ಗ್ರೀನ್‌ ಅವರನ್ನು ತರಬಹುದು,” ಎಂದು ಅವರು ತಿಳಿಸಿದ್ದಾರೆ.

ಟ್ರೇಡ್‌ ಡೀಲ್‌ ಮತ್ತೆ ನಡೆಯಬಹುದು: ವಾನ್‌

2024ರ ಐಪಿಎಲ್‌ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌, ಕ್ಯಾಮೆರಾನ್‌ ಗ್ರೀನ್‌ ಅವರನ್ನು ಆರ್‌ಸಿಬಿಗೆ ಟ್ರೇಡ್ ಮಾಡಿ, ಬದಲಿಗೆ ಹಾರ್ದಿಕ್‌ ಪಾಂಡ್ಯ ಅವರನ್ನು ಗುಜರಾತ್‌ ಟೈಟನ್ಸ್‌ ತಂಡದಿಂದ ಪಡೆದುಕೊಂಡಿತ್ತು. ಆ ಸಮಯದಲ್ಲಿ ಹಾರ್ದಿಕ್, ರೋಹಿತ್‌ ಶರ್ಮಾ ಅವರ ನಂತರ ಭಾರತದ ವೈಟ್-ಬಾಲ್ ನಾಯಕತ್ವದ ಭವಿಷ್ಯದ ನಾಯಕನಾಗಿ ಕಾಣಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಮೈಕಲ್‌ ವಾನ್‌, ಗ್ರೀನ್ ಮತ್ತು ಹಾರ್ದಿಕ್ ನಡುವಿನ ಟ್ರೇಡ್ ಮತ್ತೆ ಸಾಧ್ಯವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕೆಕೆಆರ್‌ ತಂಡಕ್ಕೂ ನಾಯಕತ್ವ ಅಗತ್ಯವಿರುವ ಕಾರಣ ಈ ರೀತಿಯ ವಿನಿಮಯವು ತಂತ್ರಾತ್ಮಕವಾಗಿ ಸಾಧ್ಯತೆ ಹೊಂದಿರಬಹುದು ಎಂದು ಅವರು ಸೂಚಿಸಿದ್ದಾರೆ.

IPL 2026: ಎಸ್‌ಆರ್‌ಎಸ್‌ ಎದುರು ಸೋತರೆ ಅಗ್ರ ಸ್ಥಾನವನ್ನು ಕಳೆದುಕೊಳ್ಳುತ್ತಾ ಆರ್‌ಸಿಬಿ?

“ಅವರು ನಾಯಕನಾಗಿ ಮುಂದುವರಿಯಲು ಬಯಸಿದರೆ, ಹೊಸ ಪರಿಸರ ಮತ್ತು ಹೊಸ ನಾಯಕತ್ವ ಗುಂಪಿನೊಂದಿಗೆ ಇರಬೇಕಾಗುತ್ತದೆ. ಬಹುಶಃ ಕೆಕೆಆರ್‌ ಇದಕ್ಕೆ ಒಂದು ಆಯ್ಕೆಯಾಗಬಹುದು. ಅವರಿಗೆ ಕೂಡ ಹೊಸ ನಾಯಕ ಬೇಕಾಗಬಹುದು,” ಎಂದು ಮೈಕಲ್‌ ವಾನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

“ಹೀಗಾಗಿ, ಕ್ಯಾಮೆರಾನ್‌ ಗ್ರೀನ್‌ ಮುಂಬೈ ಇಂಡಿಯನ್ಸ್‌ಗೆ ಬಂದರೆ, ಮತ್ತೊಬ್ಬರು ಮುಂಬೈ ತಂಡವನ್ನು ಮುನ್ನಡೆಸಬಹುದು. ಹಾರ್ದಿಕ್‌ ಪಾಂಡ್ಯ ಕೆಕೆಆರ್‌ಗೆ ಹೋದರೆ, ಅವರಿಗೆ ನಾಯಕನಾಗಿ ಹೊಸ ಆರಂಭ ಸಿಗಬಹುದು,” ಎಂದು ವಾನ್ ಸಲಹೆ ನೀಡಿದ್ದಾರೆ.