ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಭಾರತೀಯ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ (Irfan Pathan) ಬೆಂಬಲಿಸಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ತೋರಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 5 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಸಿಎಸ್‌ಕೆ, ಆತಿಥೇಯ ಆರ್‌ಸಿಬಿ ವಿರುದ್ದ ಕಾದಾಟ ನಡೆಸಲಿದೆ. ವಿಕೆಟ್‌ಕೀಪರ್-ಬ್ಯಾಟರ್ ಸ್ಯಾಮ್ಸನ್, ಸಿಎಸ್‌ಕೆ ಪರ ತಮ್ಮ ಮೊದಲ ಎರಡು ಇನಿಂಗ್ಸ್‌ಗಳಲ್ಲಿ ಕೇವಲ 13 ರನ್ ಗಳಿಸಿದ್ದಾರೆ. ಎಂಎಸ್ ಧೋನಿ ಸ್ಥಾನಕ್ಕೆ ಸಂಜು ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
IPL 2026: ಆರ್‌ಸಿಬಿ vs ಸಿಎಸ್‌ಕೆ ನಡುವೆ ಪಂದ್ಯ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಆರ್ ಅಶ್ವಿನ್!
ಸಂಜು ಸ್ಯಾಮ್ಸನ್ ಮೇಲೆ ಪಠಾಣ್ ವಿಶ್ವಾಸ
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, "ನೋಡಿ, ಭವಿಷ್ಯದ ದೃಷ್ಟಿಯಲ್ಲಿ ಚೆನ್ನೈ ಫ್ರಾಂಚೈಸಿ ಮಾಜಿ ನಾಯಕ ಎಂಎಸ್ ಧೋನಿ ನಂತರ ಸಿಎಸ್‌ಕೆ ಪ್ರಮುಖ ಆಟಗಾರನನ್ನಾಗಿ ಸಂಜು ಸ್ಯಾಮ್ಸನ್ ಅವರನ್ನು ಸೇರಿಸಿಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಅವರು ರನ್ ಗಳಿಸಿಲ್ಲ, ಬ್ಯಾಟಿಂಗ್‌ಗೆ ಅನುಕೂಲವಾದ ಪಿಚ್‌ನಲ್ಲಿಯೂ ಕೂಡ ಅವರು ವಿಫಲರಾಗಿದ್ದಾರೆ. ಮುಂದಿನ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ, ಅಲ್ಲಿ ಸಂಜು ಸ್ಯಾಮ್ಸನ್ ರನ್ ಗಳಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ," ಎಂದು ಹೇಳಿದ್ದಾರೆ.
"ಈ ಸೀಸನ್‌ನಲ್ಲಿ ಸಂಜು ಉತ್ತಮ ರನ್ ಗಳಿಸಿದರೆ, ಎಂಎಸ್ ಧೋನಿ ಸ್ಥಾನಕ್ಕೆ ಅವರನ್ನು ಪರಿಗಣಿಸಲಿದೆ. ಈ ಪಂದ್ಯದಲ್ಲಿ ಸಂಜು ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಒಳನಂಬಿಕೆ ನನಗಿದೆ,” ಎಂದು ಇರ್ಫಾನ್ ಪಠಾಣ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
IPL 2026: 500 ರನ್‌ಗಳ ಜೊತೆಯಾಟವನ್ನು ಆಡಿ ಎಲೈಟ್ ಲಿಸ್ಟ್ ಸೇರಿದ ವೈಭವ್-ಜೈಸ್ವಾಲ್ ಜೋಡಿ!
ವಿರಾಟ್ ಕೊಹ್ಲಿಯನ್ನು ಉಲ್ಲೇಖಿಸಿದ ಪಠಾಣ್
ಸಂಜು ಸ್ಯಾಮ್ಸನ್ ಆರ್‌ಸಿಬಿ ವಿರುದ್ಧ ರನ್ ಗಳಿಸಿದರೆ, ಆರ್‌ಸಿಬಿ ತಂಡದ ಪರ ವಿರಾಟ್ ಕೊಹ್ಲಿ ಕೂಡ ಮಿಂಚುತ್ತಾರೆ. ಏಕೆಂದರೆ ವಿರಾಟ್ ಕೊಹ್ಲಿ 37 ವಯಸ್ಸಿನ ಆಟಗಾರನ ರೀತಿ ಕಾಣುತ್ತಿಲ್ಲ. ಅಂಗಣದಲ್ಲಿ ಅವರ ವರ್ತನೆ ಆ ರೀತಿ ಇದೆ. ಅಂದ ಹಾಗೆ ಕೊಹ್ಲಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕವನ್ನು ಬಾರಿಸಿದ್ದರು ಎಂಬುದನ್ನು ಪಠಾಣ್ ಉಲ್ಲೇಖಿಸಿದ್ದಾರೆ.
“ಮತ್ತೊಂದೆಡೆ ವಿರಾಟ್ ಕೊಹ್ಲಿ ಇದ್ದಾರೆ. ಮೊದಲ ಪಂದ್ಯದಲ್ಲಿ 182ರ ಸ್ಟ್ರೈಕ್ ರೇಟ್‌ನಲ್ಲಿ ಅವರು ರನ್ ಗಳಿಸಿದ ರೀತಿಯನ್ನು ನೋಡಿದರೆ, ಅವರು 37 ವರ್ಷದ ಆಟಗಾರರಂತೆ ಕಾಣುವುದೇ ಇಲ್ಲ. ಮೈದಾನದಲ್ಲಿ ಅವರು ಅತ್ಯಂತ ಚುರುಕಾಗಿ ಇದ್ದಾರೆ ಮತ್ತು ವಿಕೆಟ್‌ಗಳ ಮಧ್ಯೆ ಓಡುವಲ್ಲಿ ನೀವು ದಣಿದರೂ, ಅವರು ದಣಿಯುವುದೇ ಇಲ್ಲ. ಅವರು ನಿರಂತರವಾಗಿ ರನ್ ಗಳಿಸುತ್ತಲೇ ಇರುತ್ತಾರೆ. ತಮ್ಮ ಸಾಮರ್ಥ್ಯವನ್ನು ಅವರು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದು, ಎಲ್ಲರನ್ನೂ ಸಂತೋಷಪಡಿಸುತ್ತಿದ್ದಾರೆ. ಮತ್ತೊಮ್ಮೆ ಅವರು ಚೆನ್ನೈ ವಿರುದ್ಧ ಆಡಲಿದ್ದಾರೆ ಮತ್ತು ಅದೇ ಉತ್ಸಾಹದೊಂದಿಗೆ ಮೈದಾನಕ್ಕಿಳಿಯುತ್ತಾರೆ. ನನ್ನ ನಂಬಿಕೆಗೆ ತಕ್ಕಂತೆ, ಸಂಜು ಸ್ಯಾಮ್ಸನ್ ರನ್ ಗಳಿಸಿದರೆ, ವಿರಾಟ್ ಕೂಡ ಹಿಂದುಳಿಯುವುದಿಲ್ಲ. ಮತ್ತೆ ಅವರನ್ನು ನಿರಂತರವಾಗಿ ರನ್ ಗಳಿಸುತ್ತಿರುವುದನ್ನು ನೀವು ನೋಡುತ್ತೀರಿ,” ಎಂದು ಪಠಾನ್ ಹೇಳಿದ್ದಾರೆ.