ನವದೆಹಲಿ: ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮಾರ್ಚ್ 28 ರಿಂದ ಆರಂಭವಾಗುವ ಸಾಧ್ಯತೆ ಇದ್ದು, ಫೈನಲ್ ಪಂದ್ಯ ಮೇ 31ರಂದು ನಡೆಯುವಂತೆ ಯೋಜನೆ ರೂಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಆರಂಭದಲ್ಲಿ ಟೂರ್ನಿ ಮಾರ್ಚ್ 26ರಂದು ಆರಂಭಿಸಬೇಕೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಆರಂಭ ದಿನಾಂಕವನ್ನು ಇದೀಗ ಎರಡು ದಿನ ಮುಂದಕ್ಕೆ ಹಾಕಲಾಗಿದೆ ಎಂದು ಮೂಲಗಳಿಂದ ಮಾಹಿತಿ ಕಲೆ ಹಾಕಿ ಇಂಡಿಯಾ ಟುಡೇ ವರದಿ ಮಾಡಿದೆ. ಈ ಬದಲಾವಣೆಯಿಂದ ಫ್ರಾಂಚೈಸಿಗಳು ಹಾಗೂ ಇತರ ಸಂಬಂಧಿತ ಘಟಕಗಳಿಗೆ ಹೊಸ ಸೀಸನ್‌ಗೆ ಸಿದ್ಧತೆ ನಡೆಸಲು ಹೆಚ್ಚುವರಿ ಸಮಯ ಸಿಕ್ಕಂತಾಗಿದೆ.
ಮುಂದಿನ ವಾರ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆ ನಡೆಯಲಿದ್ದು, ತಿದ್ದುಪಡಿಸಿದ ದಿನಾಂಕಗಳಿಗೆ ಅಧಿಕೃತ ಅನುಮೋದನೆ ನೀಡುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯಕ್ಕೆ ಸ್ಥಳಗಳು ಸೇರಿದಂತೆ ಸಂಪೂರ್ಣ ವೇಳಾಪಟ್ಟಿಗೆ ಅಧಿಕೃತ ಮುದ್ರೆ ಬೀಳುವ ನಿರೀಕ್ಷೆ ಇದೆ. ಒಪ್ಪಿಗೆ ಸಿಕ್ಕ ಬಳಿಕ, ಪೂರ್ಣ ವೇಳಾಪಟ್ಟಿ ಮತ್ತು ಸ್ಥಳಗಳ ವಿವರಗಳನ್ನು ಪ್ರಕಟಿಸಲಾಗುತ್ತದೆ.
IPL 2026: ಎಂಎಸ್ ಧೋನಿ ಅಭಿಮಾನಿಗಳಿಗೆ ಕಹಿ ಸುದ್ದಿ, ಸಿಎಸ್‌ಕೆ ಪರ ಎಲ್ಲಾ ಪಂದ್ಯಗಳನ್ನು ಆಡುವುದು ಡೌಟ್!
ಇದು ಮುಂದಿನ ಎರಡು ತಿಂಗಳ ಹೊಡಿ ಬಡಿ ರೋಚಕ ಟಿ20 ಕ್ರಿಕೆಟ್ ಹಬ್ಬಕ್ಕೆ ವೇದಿಕೆ ಸಜ್ಜು ಮಾಡಲಿದೆ. ಮೂಲಗಳ ಪ್ರಕಾರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕಗಳು ಇನ್ನೂ ಅಂತಿಮಗೊಳ್ಳದಿರುವುದರಿಂದ ವೇಳಾಪಟ್ಟಿ ಪ್ರಕಟಣೆ ವಿಳಂಬವಾಗಿದೆ. ಕೋಲ್ಕತಾ (ಪಶ್ಚಿಮ ಬಂಗಾಳ) ಮತ್ತು ಚೆನ್ನೈ (ತಮಿಳುನಾಡು) ಕ್ರಮವಾಗಿ ಕೊಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ತವರು ಮೈದಾನಗಳಾಗಿವೆ. ಅಸ್ಸಾಂ ರಾಜಧಾನಿ ಗುವಾಹಟಿ, ರಾಜಸ್ಥಾನ್ ರಾಯಲ್ಸ್ ತಂಡದ ಎರಡನೇ ತವರು ಅಂಗಣವಾಗುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ಬಿಸಿಸಿಐ ಅಧಿಕಾರಿಯೊಬ್ಬರು ಚುನಾವಣಾ ಮತ್ತು ಮತ ಎಣಿಕೆ ದಿನಾಂಕಗಳ ಜೊತೆ ಸಂಭವಿಸಬಹುದಾದ ಬಿಕ್ಕಟ್ಟಿನ ಕಾರಣ ವೇಳಾಪಟ್ಟಿ ತಡವಾಗುತ್ತಿದೆ ಎಂದು ತಿಳಿಸಿದ್ದರು. ಭದ್ರತಾ ನಿರ್ಬಂಧಗಳ ಹಿನ್ನೆಲೆಯಲ್ಲಿ ಕೆಲವು ಸ್ಥಳಗಳ ಬದಲಾವಣೆಗಳೂ ಸಂಭವಿಸಬಹುದು. ಈ ಕಾರಣದಿಂದಾಗಿ ಬಿಸಿಸಿಐ, ಸಂಬಂಧಪಟ್ಟ ಪ್ರಾಧಿಕಾರದ ಸ್ಪಷ್ಟನೆಗಾಗಿ ಕಾಯುತ್ತಿದೆ. ಅಗತ್ಯವಿದ್ದರೆ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಪ್ರಕಟಿಸುವುದನ್ನೂ ಪರಿಗಣಿಸಬಹುದು.
ಎಂ ಚಿನ್ನಸ್ವಾಮಿ ಕ್ರೀಡಾಂಗಣ ಉದ್ಘಾಟನಾ ಪಂದ್ಯ?
ಚುನಾವಣೆಗಳ ಜೊತೆಗೆ ಕ್ರೀಡಾಂಗಣಗಳ ಲಭ್ಯತೆ ಕೂಡ ದೊಡ್ಡ ಸವಾಲಾಗಿದೆ. ದೆಹಲಿ, ಕೋಲ್ಕತಾ, ಮುಂಬೈ, ಚೆನ್ನೈ ಮತ್ತು ಅಹಮದಾಬಾದ್ ಸೇರಿದಂತೆ ಐಪಿಎಲ್‌ನ 10 ಸ್ಥಳಗಳಲ್ಲಿ ಐದು ಕ್ರೀಡಾಂಗಣಗಳು ಪ್ರಸ್ತುತ ಟಿ20 ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ನೀಡುತ್ತಿವೆ. ಐಪಿಎಲ್ ಆರಂಭಕ್ಕೂ ಮೊದಲು ಹಸ್ತಾಂತರ ಮತ್ತು ಸಿದ್ಧತೆಗಾಗಿ ಸಮಯ ಬೇಕಾಗಲಿದೆ.
IPL 2026: ರಾಜಸ್ಥಾನ್ ರಾಯಲ್ಸ್‌ಗೆ ರಿಯಾನ್ ಪರಾಗ್ ನೂತನ ನಾಯಕ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಲಿ ಚಾಂಪಿಯನ್ ಆಗಿ ಹೊಸ ಸೀಸನ್‌ಗೆ ಪ್ರವೇಶಿಸಲಿದೆ. ಕಳೆದ ಆವೃತ್ತಿಯಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರು ರನ್ ಜಯ ಸಾಧಿಸಿ ಆರ್‌ಸಿಬಿ, ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದಿತ್ತು. ಈ ಬಾರಿ ಉದ್ಘಾಟನಾ ಪಂದ್ಯದಲ್ಲೂ ಆರ್‌ಸಿಬಿ ಭಾಗವಹಿಸುವುದು ಖಚಿತವಾಗಿದ್ದರೂ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸುರಕ್ಷತಾ ಸುಧಾರಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ವೇದಿಕೆ ಕುರಿತು ಇನ್ನೂ ಅನಿಶ್ಚಿತತೆ ಮುಂದುವರಿದಿದೆ.