ನವದೆಹಲಿ: ಭಾರತೀಯ ಕ್ರಿಕೆಟ್‌ನ ಯುವ ವೇಗದ ಬೌಲರ್ ನವದೀಪ್ ಸೈನಿ (Navdeep Saini) ಅವರು ಗಾಯಾಳು ಹರ್ಷಿತ್ ರಾಣಾ (Harshit Rana) ಅವರ ಸ್ಥಾನಕ್ಕೆ ಕೋಲ್ಕತಾ ನೈಟ್ ರೈಡರ್ಸ್‌ಗೆ (Kolkata Knight Riders) ಸೇರ್ಪಡೆಯಾಗಿದ್ದಾರೆ. ಹರ್ಷಿತ್ ರಾಣಾ ಅವರು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಗಾಯಕ್ಕೆ ತುತ್ತಾಗಿದ್ದರು. ಇದರ ಪರಿಣಾಮ ಅವರು ಚುಟುಕು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರು. ಅವರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗದ ಕಾರಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಆರ್‌ಸಿಬಿ ವೇಗಿ ನವದೀಪ್ ಸೈನಿಗೆ ಕೆಕೆಆರ್ ಅವಕಾಶ ನೀಡಿದೆ.
ಅಂದ ಹಾಗೆ ಕೆಲ ಕಾರಣಗಳಿಂದ ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್ ರೆಹಮಾನ್ ಅವರನ್ನು ಕೋಲ್ಕತಾ ಫ್ರಾಂಚೈಸಿ, ಟೂರ್ನಿಯ ಆರಂಭಕ್ಕೂ ಮುನ್ನ ರಿಲೀಸ್ ಮಾಡಿತ್ತು. ಇದೀಗ ಆಕಾಶ್ ದೀಪ್ ಹಾಗೂ ಮತೀಶ ಪತಿರಣ ಅವರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಕೆಕೆಆರ್ ವೇಗದ ಬೌಲಿಂಗ್ ವಿಭಾಗಕ್ಕೆ ಭಾರಿ ಹಿನ್ನಡೆಯಾಗಿದೆ.
77 ಟಿ20 ಪಂದ್ಯಗಳಲ್ಲಿ 77 ವಿಕೆಟ್‌ಗಳನ್ನು ಪಡೆದಿರುವ ನವದೀಪ್ ಸೈನಿ, ಒಮ್ಮೆ ನಾಲ್ಕು ವಿಕೆಟ್ ಸಾಧನೆಯನ್ನು ಮಾಡಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡ ತಮ್ಮನ್ನು ಆಯ್ಕೆ ಮಾಡಿಕೊಂಡಿರುವುದನ್ನು ಕಳೆದ ರಾತ್ರಿ ಮಾತ್ರ ತಿಳಿದುಕೊಂಡೆ ಎಂದು ಅವರು ತಿಳಿಸಿದ್ದಾರೆ. ಈ ಸುದ್ದಿ ಕೇಳಿ ತಾವು ಭಾವುಕನಾಗಿದ್ದೇನೆಂದು ಅವರು ಹೇಳಿಕೊಂಡಿದ್ದಾರೆ.
ನನ್ನ ಪರಿಶ್ರಮ ಫಲ ನೀಡಿದೆ: ನವದೀಪ್ ಸೈನಿ
ತಮ್ಮ ಪರಿಶ್ರಮ ಒಂದು ದಿನ ಫಲ ನೀಡುತ್ತದೆ ಎಂಬ ನಂಬಿಕೆ ಸದಾ ಇತ್ತು ಎಂದು ನವದೀಪ್ ಸೈನಿ ಹೇಳಿದ್ದಾರೆ. ಈ ಅವಕಾಶವನ್ನು ತಾವು ಮನಸ್ಸಿನಲ್ಲಿ ರೂಪಿಸಿಕೊಂಡಿದ್ದೆ ಎಂದೂ, ದೇವರ ಮೇಲಿನ ತಮ್ಮ ನಂಬಿಕೆ ಈ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿದೆ ಎಂದು ನವದೀಪ್ ಸೈನಿ ನೈಟ್ ಕ್ಲಬ್‌ಗೆ ತಿಳಿಸಿದ್ದಾರೆ.
“ಒಂದು ರೀತಿಯಲ್ಲಿ ನೋಡಿದರೆ, ಐಪಿಎಲ್‌ಗೆ ಮರಳುತ್ತೇನೆಂದು ನನ್ನ ಮನಸ್ಸಿನಲ್ಲಿ ಈಗಾಗಲೇ ಇತ್ತು. ನಿಜ ಹೇಳಬೇಕೆಂದರೆ ನಾನು ಇದನ್ನು ಮನಸ್ಸಿನಲ್ಲಿ ರೂಪಿಸಿಕೊಂಡಿದ್ದೆ ಎಂದೇ ಹೇಳಬಹುದು. ಇದು ಒಂದು ದಿನ ಖಂಡಿತವಾಗಿಯೂ ನಡೆಯುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು. ಅತ್ಯಂತ ಮುಖ್ಯವಾದದ್ದು ದೇವರ ಮೇಲೆ ನಂಬಿಕೆ ಇಡುವುದು. ನಾನು ಅದನ್ನೇ ಮಾಡಿದ್ದೇನೆ ಮತ್ತು ಕೊನೆಗೂ ಅದು ನಡೆದಾಗ, ಅದು ಅತ್ಯಂತ ಅದ್ಭುತ ಅನುಭವವಾಗಿ ಭಾಸವಾಯಿತು,” ಎಂದು ದೆಹಲಿ ವೇಗಿ ಸಂತಸ ವ್ಯಕ್ತಪಡಿಸಿದ್ದಾರೆ.
2019ರಲ್ಲಿ ಐಪಿಎಲ್‌ಗೆ ಪದಾರ್ಪಣೆ
ನವದೀಪ್ ಸೈನಿ ಅವರು 2023ರ ನಂತರ ಮೊದಲ ಬಾರಿ ಐಪಿಎಲ್‌ಗೆ ಮರಳಿದ್ದಾರೆ. ಇತ್ತೀಚಿನ ಸೀಸನ್‌ಗಳಲ್ಲಿ ನಿಯಮಿತವಾಗಿ ಆಡದಿದ್ದರೂ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಅವರು ಮಹತ್ವದ ಅನುಭವವನ್ನು ತರಲಿದ್ದಾರೆ. ಬಲಗೈ ವೇಗದ ಬೌಲರ್ ಆಗಿರುವ ಸೈನಿ, 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದು, ಅದಕ್ಕೂ ಮೊದಲು 2017ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಮೂಲಕ ಆಯ್ಕೆಯಾಗಿದ್ದರು.
ಇಲ್ಲಿವರೆಗೆ ಐಪಿಎಲ್ ವೃತ್ತಿಜೀವನದಲ್ಲಿ 32 ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನು ಪಡೆದಿರುವ ಸೈನಿ, 8.88ರ ಎಕಾನಮಿ ರೇಟ್ ಅನ್ನು ಹೊಂದಿದ್ದಾರೆ. ಆರಂಭಿಕ ದಿನಗಳಲ್ಲಿ ಆರ್‌ಸಿಬಿ ಜೊತೆಗಿದ್ದ ಅವರು, ಬಳಿಕ ರಾಜಸ್ಥಾನ್ ರಾಯಲ್ಸ್ ಸೇರಿ 2023ರಲ್ಲಿ ಕೊನೆಯ ಬಾರಿ ಲೀಗ್‌ನಲ್ಲಿ ಕಾಣಿಸಿಕೊಂಡಿದ್ದರು.