ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026 Playoffs Scenario: ಆರ್‌ಸಿಬಿ ಸೇರಿದಂತೆ ಎಲ್ಲಾ 10 ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ!

IPL 2026 Playoffs Scenario: ಮೇ 5 ರಂದು ಮಂಗಳವಾರ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಅಧಿಕಾರಯುತ ಗೆಲುವು ದಾಖಲಿಸಿದ ಬಳಿಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇಆಫ್ಸ್‌ ಹಾದಿಯಲ್ಲಿ ಜೀವಂತವಾಗಿರಿಸಿಕೊಂಡಿದೆ. ಸಿಎಸ್‌ಕೆ ಜೊತೆಗೆ ಎಲ್ಲಾ ತಂಡಗಳ ನಾಕೌಟ್‌ ಅರ್ಹತೆಯ ಲೆಕ್ಕಾಚಾರವನ್ನು ಇಲ್ಲಿ ವಿವರಿಸಲಾಗಿದೆ.

ಎಲ್ಲಾ 10 ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಸಾಲಿನ ಟೂರ್ನಿಯ ಆರಂಭದಲ್ಲಿ ಸತತ ಸೋಲುಗಳಿಂದ ನಿಧಾನಗತಿಯ ಆರಂಭ ಪಡೆದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಎರಡನೇ ಲೆಗ್‌ನಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದೆ. ಆರಂಭಿಕ ಮೂರೂ ಪಂದ್ಯಗಳನ್ನು ಸೋತಿದ್ದ ಬಳಿಕ ಸಿಎಸ್‌ಕೆ ಕೊನೆಯ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದೆ. ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಅಧಿಕಾರಯುತ ಗೆಲುವು ಸಾಧಿಸಿದ ಬಳಿಕ ಸಿಎಸ್‌ಕೆ ತಂಡ, ತನ್ನ ಪ್ಲೇಆಫ್ಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಒಟ್ಟು ಆಡಿರುವ 10 ಪಂದ್ಯಗಳಲ್ಲಿ ಚೆನ್ನೈ ತಂಡ 10 ಅಂಕಗಳನ್ನು ಕಲೆ ಹಾಕಿದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬೇಕೆಂದರೆ ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಮೂರರಲ್ಲಿ ಗೆಲುವು ಅಗತ್ಯವಾಗಿದೆ.

ಇನ್ನು ಪಂಜಾಬ್‌ ಕಿಂಗ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕ್ರಮವಾಗಿ 13 ಮತ್ತು 12 ಅಂಕಗಳ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿವೆ. ಇನ್ನು ಸನ್‌ರೈಸರ್ಸ್‌ ಹೈದರಾಬಾದ್‌, ರಾಜಸ್ಥಾನ್‌ ರಾಯಲ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ತಲಾ 12 ಅಂಕಗಳನ್ನು ಹೊಂದಿವೆ. ಪಿಬಿಕೆಎಸ್‌ ಹಾಗೂ ಆರ್‌ಸಿಬಿ ತಂಡಗಳು ಮೇಲಿನ ತಂಡಗಳಿಗಿಂತ ಒಂದು ಪಂದ್ಯವನ್ನು ಕಡಿಮೆ ಆಡಿವೆ. ಅಂದ ಹಾಗೆ 49ನೇ ಪಂದ್ಯದ ಅಂತ್ಯಕ್ಕೆ ಎಲ್ಲಾ 10 ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ ಹೇಗಿದೆ ಎಂದು ಇಲ್ಲಿ ವಿವರಿಸಲಾಗಿದೆ.

RCB vs LSG ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಹೆಡ್‌ ಟು ಹೆಡ್‌ ದಾಖಲೆ!

ಎಲ್ಲಾ 10 ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ

ಪಂಜಾಬ್‌ ಕಿಂಗ್ಸ್‌: ಕೊನೆಯ ಐದು ಪಂದ್ಯಗಳಲ್ಲಿ ಪಂಜಾಬ್‌ ಕಿಂಗ್ಸ್‌ ಎರಡು ಗೆಲವು ಪಡೆದರೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿದೆ. ಇನ್ನು ಒಂದು ಪಂದ್ಯವನ್ನು ಗೆದ್ದರೂ (+0.855) ಪಂಜಾಬ್‌ ಉತ್ತಮ ರನ್‌ರೇಟ್‌ ಮೂಲಕ ನಾಕ್‌ಔಟ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಆರ್‌ಸಿಬಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಇನ್ನುಳಿದ ಐದು ಪಂದ್ಯಗಳಲ್ಲಿ 2-3ರಲ್ಲಿ ಗೆಲುವು ಅಗತ್ಯವಿದೆ. ರನ್‌ರೇಟ್‌ (+1.420) ಆರ್‌ಸಿಬಿಗೆ ಪ್ಲಸ್‌ ಪಾಯಿಂಟ್‌. 14 ಅಂಕಗಳನ್ನು ಕಲೆಹಾಕಿದರೂ ಬೆಂಗಳೂರು ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲಿದೆ. ಆದರೆ, ಆರ್‌ಸಿಬಿ ಅಗ್ರ ಎರಡರಲ್ಲಿ ಉಳಿಯಲು ಇನ್ನುಳಿದ ಐದರಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆದ್ದರೆ ಒಳ್ಳೆಯದು.

ಸನ್‌ರೈಸರ್ಸ್‌ ಹೈದರಾಬಾದ್‌: ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಎಸ್‌ಆರ್‌ಎಚ್‌ಗೆ ಕೊನೆಯ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಅಗತ್ಯವಿದೆ.

ರಾಜಸ್ಥಾನ್‌ ರಾಯಲ್ಸ್‌: ಆರ್‌ಆರ್‌ ಕೂಡ ಸದ್ಯ 12 ಅಂಕಗಳನ್ನು ಹೊಂದಿದ್ದು, ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಕೊನೆಯ ನಾಲ್ಕರಲ್ಲಿ ಎರಡರಲ್ಲಿ ಗೆಲುವು ಪಡೆಯಬೇಕಾದ ಅಗತ್ಯವಿದೆ. ಆದರೆ, ಇವರು ಇದೇ ರೀತಿಯ ರನ್‌ರೇಟ್ (+0.510)‌ ಉಳಿಸಿಕೊಳ್ಳಬೇಕು.



ಗುಜರಾತ್‌ ಟೈಟನ್ಸ್‌: ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡ ಕೂಡ 12 ಅಂಕಗಳನ್ನು ಹೊಂದಿದ್ದು, ತನ್ನ ಕೊನೆಯ ನಾಲ್ಕರಲ್ಲಿ ಎರಡು ಗೆಲುವು ಅಗತ್ಯ. ಆದರೆ, ಇವರು ರನ್‌ರೇಟ್‌ (-0.147) ಅನ್ನು ಉತ್ತಮಪಡಿಸಿಕೊಳ್ಳಬೇಕಾದ ಅಗತ್ಯವಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌: ಸಿಎಸ್‌ಕೆ ಸದ್ಯ ಆಡಿದ 10 ಪಂದ್ಯಗಳಿಂದ 10 ಅಂಕಗಳನ್ನು ಹೊಂದಿದ್ದು, ಇನ್ನುಳಿದ ನಾಲ್ಕರಲ್ಲಿ ಮೂರು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಚೆನ್ನೈ ಪಾಲಿಗೆ ರನ್‌ರೇಟ್‌ (+0.151) ಸಕಾರಾತ್ಮಕ ಸಂಗತಿಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌: ಡಿಸಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಉಂಟಾಗಿದೆ. ಆಡಿದ 10 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 4ರಲ್ಲಿ ಮಾತ್ರ. ಇನ್ನುಳಿದ ನಾಲ್ಕೂ ಪಂದ್ಯಗಳನ್ನು ಗೆದ್ದರೆ ಮಾತ್ರ ಡೆಲ್ಲಿ 16 ಅಂಕಗಳ ಮೂಲಕ ನಾಕೌಟ್‌ಗೆ ಪ್ರವೇಶಿಸಲಿದೆ.

DC vs CSK: ಡೆಲ್ಲಿ ಕ್ಯಾಪಿಟಲ್ಸ್‌ ಎದುರು ವಿಶೇಷ ದಾಖಲೆಯನ್ನು ಬರೆದ ಸಂಜು ಸ್ಯಾಮ್ಸನ್‌!

ಕೋಲ್ಕತಾ ನೈಟ್‌ ರೈಡರ್ಸ್‌: ಕೆಕೆಆರ್‌ ಆಡಿದ 9 ಪಂದ್ಯಗಳಿಂದ 7 ಅಂಕಗಳನ್ನು ಕಲೆ ಹಾಕಿದೆ. ಇವರು ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಇನ್ನುಳಿದ ಐದೂ ಪಂದ್ಯಗಳನ್ನು ಗೆಲ್ಲಬೇಕು. ಆಗ ಕೆಕೆಆರ್‌ 17 ಅಂಕಗಳನ್ನು ಕಲೆ ಹಾಕಿದಂತಾಗುತ್ತದೆ. ಕನಿಷ್ಠ 4 ಪಂದ್ಯಗಳನ್ನಾದರೂ ಇವರು ಉತ್ತಮ ರನ್‌ರೇಟ್‌ ಮೂಲಕ ಗೆಲ್ಲಬೇಕು.

ಮುಂಬೈ ಇಂಡಿಯನ್ಸ್‌: ಐದು ಬಾರಿ ಚಾಂಪಿಯನ್ಸ್‌ ಆಡಿದ 10 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಮೂರರಲ್ಲಿ ಮಾತ್ರ. ಹಾಗಾಗಿ ಅವರು ಮುಂದಿನ ನಾಲ್ಕೂ ಪಂದ್ಯಗಳನ್ನು ಉತ್ತಮ ರನ್‌ರೇಟ್‌ನಲ್ಲಿ ಗೆದ್ದರೂ ಇವರ ಪ್ಲೇಆಫ್ಸ್‌ ಸ್ಥಾನ ಅನುಮಾನ.

ಲಖನೌ ಸೂಪರ್‌ ಜಯಂಟ್ಸ್‌: ರಿಷಭ್‌ ಪಂತ್‌ ನಾಯಕತ್ವದ ಲಖನೌ ಸೂಪರ್‌ ಜಯಂಟ್ಸ್‌ ತಂಡ 9 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು ಮಾತ್ರ. ಇನ್ನುಳಿದ ಐದೂ ಪಂದ್ಯಗಳನ್ನು ಗೆದ್ದರೂ ಅವರು ಗರಿಷ್ಠ 14 ಅಂಕ ಕಲೆ ಹಾಕಬಹುದು. ಆದರೂ ಎಲ್‌ಎಸ್‌ಜಿ ನಾಕೌಟ್‌ ಪ್ರವೇಶ ಕಷ್ಟ.