ಬೆಂಗಳೂರು: ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯು ಮಾರ್ಚ್ 28 ರಂದು ಆರಂಭವಾಗಲಿದೆ. ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು (RCB vs SRH) ಕಾದಾಟ ನಡೆಸಲಿವೆ. ಕಳೆದ ಸೀಸನ್‌ನಲ್ಲಿ ಚೊಚ್ಚಲ ಕಪ್ ಗೆದ್ದಿದ್ದ ಆರ್‌ಸಿಬಿ, ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಅದರಂತೆ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಕೂಡ ಇದೇ ಭವಿಷ್ಯವನ್ನು ನುಡಿದಿದ್ದಾರೆ. ಎರಡು ವರ್ಷಗಳ ಅಂತರದಲ್ಲಿ ಆರ್‌ಸಿಬಿ ಮತ್ತೊಂದು ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
2024ರ ಐಪಿಎಲ್ ಟೂರ್ನಿಯ ನಂತರ ಆರ್‌ಸಿಬಿ ಧೈರ್ಯಶಾಲಿ ನಿರ್ಧಾರ ತೆಗೆದುಕೊಂಡು ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಹಾಗೂ ಯಶ್ ದಯಾಳ್ ಅವರನ್ನು ಮಾತ್ರ ಉಳಿಸಿಕೊಂಡಿತ್ತು. ನಂತರ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್, ಜಿತೇಶ ಶರ್ಮಾ, ಜಾಶ್ ಹೇಝಲ್‌ವುಡ್, ಟಿಮ್ ಡೇವಿಡ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡು ತನ್ನ ಬಲವನ್ನು ಹೆಚ್ಚಿಸಿಕೊಂಡಿತ್ತು. ಅದರಂತೆ 2025ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ, ತನ್ನ 17 ವರ್ಷಗಳ ಕನಸನ್ನು ನನಸು ಮಾಡಿಕೊಂಡಿತ್ತು. ಈ ಸೀಸನ್‌ನಲ್ಲಿಯೂ ಆರ್‌ಸಿಬಿ ಬಲಿಷ್ಠ ಆಟಗಾರರನ್ನು ಉಳಿಸಿಕೊಂಡಿದೆ. ಇದರ ಆಧಾರದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಸ್ಪಿನ್ನರ್ ಆರ್ ಅಶ್ವಿನ್, ಆರ್‌ಸಿಬಿ ಪರ ಬ್ಯಾಟ್ ಬೀಸಿದ್ದಾರೆ.
IPL 2026: ಫೋನ್ ಸಂಪರ್ಕಕ್ಕೆ ಸಿಗದ 4 ಕೋಟಿ ರು ಬೆಲೆಯ ಆರ್‌ಸಿಬಿ ವೇಗಿ ಯಶ್ ದಯಾಳ್!
ಆರ್‌ಸಿಬಿ ಮತ್ತೊಂದು ಟ್ರೋಫಿ ಗೆಲ್ಲಲಿದೆ: ಆರ್ ಅಶ್ವಿನ್
“ಈ ಆಟಗಾರರೊಂದಿಗೆ ಆರ್‌ಸಿಬಿ ಮುಂದಿನ ಎರಡು ವರ್ಷಗಳಲ್ಲಿ ಮತ್ತೊಂದು ಪ್ರಶಸ್ತಿ ಗೆಲ್ಲಬಹುದು. ಐಪಿಎಲ್ ಗೆಲ್ಲುವುದು ಸುಲಭವಾದುದಲ್ಲ, ಆದರೆ ಆರ್‌ಸಿಬಿ ಬಳಿ ಅತ್ಯುತ್ತಮ ಆಟಗಾರರು ಇದ್ದಾರೆ ಹಾಗೂ ಆಟಗಾರರಿಗೆ ತಕ್ಕಂತೆ ಬದಲಿ ಆಟಗಾರರು ಕೂಡ ಸಮತೋಲನದಿಂದ ಕೂಡಿದ್ದಾರೆ. ತಂಡದ ಸಂಯೋಜನೆಯಲ್ಲಿ ಇದ್ದ ದುರ್ಬಲತೆಗಳನ್ನು ಅವರು ಸರಿಯಾಗಿ ಭರ್ತಿ ಮಾಡಿದ್ದಾರೆ. ಇದು ಟಾಪ್-2 ಸ್ಥಾನದಲ್ಲಿ ಮುಕ್ತಾಯಗೊಳ್ಳುವ ಉತ್ತಮ ಪ್ಯಾಕೇಜ್,” ಎಂದು ಆರ್ ಅಶ್ವಿನ್ ಹೇಳಿದ್ದಾರೆ.
ಜಾಶ್ ಹೇಝಲ್‌ವುಡ್ ಅನುಪಸ್ಥಿತಿ
ಅಶ್ವಿನ್ ಅವರ ಅಭಿಪ್ರಾಯದಂತೆ, ಆರ್‌ಸಿಬಿ ಫಿಲ್ ಸಾಲ್ಟ್ ಹಾಗೂ ಜಾಕೋಬ್ ಬೆಥೆಲ್ ಇಬ್ಬರನ್ನೂ ಪ್ಲೇಯಿಂಗ್ ಇಲೆವನ್‌ನಲ್ಲಿ ಹೊಂದಿಸುವ ಮಾರ್ಗವನ್ನು ಕಂಡುಹಿಡಿಯಬಹುದು. ಇದರ ನಡುವೆ ಆರ್‌ಸಿಬಿ ತಂಡಕ್ಕೆ ಆರಂಭದಲ್ಲೇ ಸಣ್ಣ ಹಿನ್ನಡೆಯಾಗಿದೆ. ಜಾಶ್ ಹೇಝಲ್‌ವುಡ್ ಇನ್ನೂ ತಂಡಕ್ಕೆ ಸೇರ್ಪಡೆಯಾಗಿಲ್ಲ. ಇತ್ತೀಚಿನ ತಿಂಗಳಲ್ಲಿ ಗಾಯ ಸಮಸ್ಯೆಯಿಂದ ಬಳಲುತ್ತಿರುವ ಹೇಝಲ್‌ವುಡ್, ಸಂಪೂರ್ಣ ಫಿಟ್ನೆಸ್ ಪಡೆಯುವ ಪ್ರಕ್ರಿಯೆಯಲ್ಲಿದ್ದು, ವೈದ್ಯಕೀಯ ಅನುಮತಿ ಸಿಗುವವರೆಗೆ ಮೊದಲ ಕೆಲವು ಪಂದ್ಯಗಳನ್ನು ತಪ್ಪಿಸುವ ಸಾಧ್ಯತೆ ಇದೆ.
IPL 2026: ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಐವರು ಸ್ಟಾರ್ ಆಟಗಾರರು!
“ನಿಜ ಹೇಳಬೇಕೆದರೆ ಇದು ಆರ್‌ಸಿಬಿಗೆ ಒಳ್ಳೆಯದಾಗಿಯೇ ಪರಿಣಮಿಸಬಹುದು. ಜಾಶ್ ಹೇಝಲ್‌ವುಡ್ ಲಭ್ಯವಿಲ್ಲದಿದ್ದರೆ ಮತ್ತು ಫಿಲ್ ಸಾಲ್ಟ್ ಅವರ ಫಾರ್ಮ್ ಬಗ್ಗೆ ಅನುಮಾನ ಇದ್ದರೆ, ಅವರು ಸಾಲ್ಟ್ ಮತ್ತು ಜಾಕೋಬ್ ಬೆಥೆಲ್ ಇಬ್ಬರನ್ನೂ ಆಡಿಸಬಹುದು. ಹೇಝಲ್‌ವುಡ್ ಮರಳಿದ ನಂತರ, ತಂಡಕ್ಕೆ ಸ್ಪಷ್ಟ ಚಿತ್ರಣ ಸಿಗುತ್ತದೆ,” ಎಂದು ಅಶ್ವಿನ್ ತಿಳಿಸಿದ್ದಾರೆ.
“ನನ್ನ ಅನಿಸಿಕೆಗೆ ವೆಂಕಟೇಶ್ ಅಯ್ಯರ್ ಆರಂಭದಲ್ಲೇ ಆಡುವ ಸಾಧ್ಯತೆ ಕಡಿಮೆ. ಆರ್‌ಸಿಬಿಯ ವಿದೇಶಿ ಆಟಗಾರರನ್ನು ನೋಡಿ ಸಾಲ್ಟ್, ಟಿಮ್ ಡೇವಿಡ್, ರೊಮ್ಯಾರಿಯೊ ಶೆಫರ್ಡ್ ಮತ್ತು ಬೆಥೆಲ್. ಇದು ಬಹಳ ಶಕ್ತಿಯುತ ಟಾಪ್-4 ವಿದೇಶಿ ಆಟಗಾರರ ಸಂಯೋಜನೆ. ಟೂರ್ನಿಯಲ್ಲಿಯೇ ಅತ್ಯುತ್ತಮ ವಿದೇಶಿ ಆಟಗಾರರ ಪೈಕಿ ಇದೂ ಒಂದಾಗಬಹುದು,” ಎಂದು ಅವರು ಅಭಿಪ್ರಾಯಪಟ್ಟರು.