ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಬೆಂಗಳೂರಿಗೆ ಆಗಮಿಸಿದ ಜಾಶ್‌ ಹೇಝಲ್‌ವುಡ್‌!

Josh Hazlewood Joins RCB: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ 2026 ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲನೇ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ವೇಗಿ ಜಾಶ್‌ ಹೇಝಲ್‌ವುಡ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಆರ್‌ಸಿಬಿ ಬೌಲಿಂಗ್‌ ವಿಭಾಗಕ್ಕೆ ಬಲ ಬಂದಿದೆ.

ಆರ್‌ಸಿಬಿಗೆ ಸೇರ್ಪಡೆಯಾದ ಜಾಶ ಹೇಝಲ್‌ವುಡ್‌.

ಬೆಂಗಳೂರು: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಆರಂಭಿಕ ಪಂದ್ಯಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಕ್ಕೆ ಆಸ್ಟ್ರೇಲಿಯಾ ಹಿರಿಯ ವೇಗಿ ಜಾಶ್‌ ಹೇಝಲ್‌ವುಡ್‌ (Josh Hazlewood) ಅವರು ಸೇರ್ಪಡೆಯಾಗಿದ್ದಾರೆ. ಹಾಲಿ ಚಾಂಪಿಯನ್ಸ್‌ ಆರ್‌ಸಿಬಿ ಮಾರ್ಚ್‌ 28 ರಂದು ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯಕ್ಕೂ ಮುನ್ನ ಜಾಶ್‌ ಹೇಝಲ್‌ವುಡ್‌ ಆಗಮನ, ಆರ್‌ಸಿಬಿಗೆ ಆನೆ ಬಲ ಸಿಕ್ಕಂತಾಗಿದೆ.

ಆರ್‌ಸಿಬಿ ತನ್ನ ಸೋಶಿಯಕ್‌ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಜಾಶ್‌ ಹೇಝಲ್‌ವುಡ್‌ ಆಗಮಿಸುತ್ತಿರುವ ಹಾಗೂ ಸಹ ಆಟಗಾರರ ಜೊತೆ ಮಾತನಾಡುತ್ತಿರುವುದನ್ನು ಕಾಣಬಹುದು. ಆ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಜಾಶ್‌ ಹೇಝಲ್‌ವುಡ್‌ ಅವರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಕಳೆದ 2025ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಚೊಚ್ಚಲ ಕಪ್‌ ಗೆಲ್ಲುವಲ್ಲಿ ಜಾಶ್‌ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇದೀಗ ಅವರ ಆಗಮನ ತಂಡದ ಬೌಲಿಂಗ್‌ ವಿಭಾಗಕ್ಕೆ ಬಲ ತಂದುಕೊಟ್ಟಿದೆ.

IPL 2026: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ಆಟಗಾರರ ವಿರೋಧ! ಕಾರಣವೇನು?

ಇತ್ತೀಚಿನ ತಿಂಗಳುಗಳಲ್ಲಿ ಸ್ನಾಯು ಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜಾಶ್‌ ಹೇಝಲ್‌ವುಡ್‌ ಅವರು ಪೂರ್ಣ ಫಿಟ್‌ನೆಸ್‌ಗೆ ಬಂದಿರುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆರ್‌ಸಿಬಿ ಮೆಡಿಕಲ್‌ ಟೀಮ್‌ ಅವರನ್ನು ಪರಿಶೀಲಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಅಂದ ಹಾಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅವರು ಪ್ಲೇಯಿಂಗ್ XIಗೆ ಸೇರುವುದೇ ಎಂಬುದು ಸಂಪೂರ್ಣವಾಗಿ ವೈದ್ಯಕೀಯ ಅನುಮತಿಯ ಮೇಲೆ ಅವಲಂಬಿತವಾಗಿರುತ್ತದೆ.



ಎಸ್‌ಆರ್‌ಎಚ್‌ ವಿರುದ್ದದ ಪಂದ್ಯದಲ್ಲಿ ಜಾಶ್‌ ಹೇಝಲ್‌ವುಡ್‌ ಆಡ್ತಾರಾ?

ಆರ್‌ಸಿಬಿ ತಂಡಕ್ಕೆ ಜಾಶ್‌ ಹೇಝಲ್‌ವುಡ್‌ ಸೇರಿದ್ದರೂ ಅವರು ಸನ್‌ರೈಸರ್ಸ್‌ ಹೈದರಬಾದ್‌ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಆಡಲು ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಟೆಸ್ಟ್ ವೇಳಾಪಟ್ಟಿ ಇರುವ ಹಿನ್ನೆಲೆಯಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ ಅವರ ಕೆಲಸದ ಒತ್ತಡವನ್ನು ಎಚ್ಚರಿಕೆಯಿಂದ ನಿರ್ವಹಿಸುವ ನೀತಿಯನ್ನು ಅನುಸರಿಸುತ್ತಿದೆ.



ವೇಗದ ಬೌಲರ್ ಇನ್ನೂ ಪೂರ್ಣ ಫಿಟ್‌ನೆಸ್ ಅನುಮತಿ ಪಡೆಯಬೇಕಾಗಿರುವುದರಿಂದ ಆರ್‌ಸಿಬಿ ಅವರನ್ನು ತುರ್ತಾಗಿ ಕಣಕ್ಕಿಳಿಸುವುದಕ್ಕಿಂತ ಹಂತ ಹಂತವಾಗಿ ಆಡಿಸಲು ಯೋಚಿಸುತ್ತಿದೆ. ವರದಿಗಳ ಪ್ರಕಾರ, ಅವರು ಟೂರ್ನಿಯ ಪ್ರಾರಂಭಿಕ ಹಂತದಲ್ಲಿ ವಿರಾಮ ಪಡೆದು, ಪಂದ್ಯಕ್ಕೆ ಸಂಪೂರ್ಣ ಸಿದ್ದರಾದ ಬಳಿಕ ಮಾತ್ರ ತಂಡದ ಪ್ಲೇಯಿಂಗ್‌ XIಗೆ ಮರಳುವ ಸಾಧ್ಯತೆ ಇದೆ. ಹಾಗಾಗಿ ಇದು ಹಾಲಿ ಚಾಂಪಿಯನ್ಸ್‌ಗೆ ಆರಂಭಿಕ ಹಂತದಲ್ಲಿ ಸವಾಲು ಎದುರಾಗಬಹುದು.

ಆರ್‌ಸಿಬಿಗೆ ಭಾರಿ ಹಿನ್ನಡೆ

ಆರಂಭಿಕ ಪಂದ್ಯಗಳಿಗೆ ಜಾಶ್‌ ಹೇಝಲ್‌ವುಡ್‌ ಅಲಭ್ಯರಾದರೆ, ಆರ್‌ಸಿಬಿ ತಮ್ಮ ವೇಗದ ಬೌಲಿಂಗ್‌ ದಾಳಿಯಲ್ಲಿ ಉಂಟಾಗಿರುವ ಖಾಲಿ ಸ್ಥಳಗಳನ್ನು ತುಂಬಲು ಪರ್ಯಾಯ ಆಯ್ಕೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ. ಆರಂಭಿಕ ಪಂದ್ಯಗಳಲ್ಲಿ ಅವಕಾಶ ಪಡೆಯಲು ಜಾಕೋಬ್‌ ಡಫಿ ಮುಂಚೂಣಿಯಲ್ಲಿದ್ದಾರೆ. ಮತ್ತೊಂದೆಡೆ ಅತ್ಯಾಚಾರ ಆರೋಪದ ಕಾರಣ ಯಶ್‌ ದಯಾಳ್‌ ಲಭ್ಯವಿಲ್ಲದಿರುವುದು ಕೂಡ ತಂಡಕ್ಕೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ. ಇದಲ್ಲದೆ, ಶ್ರೀಲಂಕಾ ವೇಗಿ ನುವಾನ್‌ ತುಷಾರ ಅವರ ಲಭ್ಯತೆ ಬಗ್ಗೆಯೂ ಇನ್ನೂ ಯಾವುದೇ ಸ್ಪಷ್ಡತೆ ಇಲ್ಲ. ಫಿಟ್‌ನೆಸ್‌ ನಿಯಮಗಳ ಅಡಿಯಲ್ಲಿ ಅವರಿಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತನ್ನ ವೇಗಿಗೆ ಎನ್‌ಒಸಿ ನೀಡದೇ ಇರಬಹುದು.