ನವದೆಹಲಿ: ಸಂಜು ಸ್ಯಾಮ್ಸನ್ (Sanju Samson) ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರಿದ ಬಳಿಕ ರಾಜಸ್ಥಾನ್ ರಾಯಲ್ಸ್ (Rakasthan Royals) ತಂಡವು ಹೊಸ ಅಧ್ಯಾಯವನ್ನು ಆರಂಭಿಸಿದೆ. ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ (Riyan Parag) ಅವರಿಗೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನು ನೀಡಲಾಗಿದೆ. 2019ರಲ್ಲಿ ಐಪಿಎಲ್ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದ್ದ ಪರಾಗ್, ಅಂದಿನಿಂದ ಇಲ್ಲಿಯವರೆಗೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಪ್ರಮುಖ ಆಟಗಾರನಾಗಿ ಆಡುತ್ತಾ ಬಂದಿದ್ದಾರೆ. ಆರ್‌ಆರ್ ತಂಡದ ಪರ ದೀರ್ಘಾವಧಿ ಆಡಿದ ಆಟಗಾರರ ಪೈಕಿ ರಿಯಾನ್ ಪರಾಗ್ ಕೂಡ ಒಬ್ಬರು. ಇವರ ನಾಯಕತ್ವದಲ್ಲಿ ರಾಜಸ್ಥಾನ್ ತಂಡ ಮುಂದಿನ ಸೀಸನ್‌ನಲ್ಲಿ ಕಣಕ್ಕೆ ಇಳಿಯಲಿದೆ.
24ರ ವಯಸ್ಸಿನ ಪರಾಗ್ ಅವರಿಗೆ ಕಳೆದ ಸೀಸನ್‌ನಲ್ಲಿ ಕೆಲ ಪಂದ್ಯಗಳಲ್ಲಿ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಸಂಜು ಸ್ಯಾಮ್ಸನ್ ಗಾಯದಿಂದ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದರು, ಈ ವೇಳೆ ರಿಯಾನ್ ನಾಯಕತ್ವವನ್ನು ವಹಿಸಿದ್ದರು. ಅವರು ಆರು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ತಮ್ಮ ನಾಯಕತ್ವದಲ್ಲಿ ರಿಯಾನ್ 8 ಪಂದ್ಯಗಳಲ್ಲಿ 2 ಜಯ ಮತ್ತು 6 ಸೋಲುಗಳನ್ನು ಕಂಡಿದ್ದರು. ಆ ಮೂಲಕ ಆರ್‌ಆರ್ ತಂಡ, ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನದ ಮೂಲಕ ತನ್ನ ಅಭಿಯಾನವನ್ನು ಮುಗಿಸಿತ್ತು.
IND vs PAK: ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಖ್‌ಗೆ ಕೌಂಟರ್ ನೀಡುವುದೇಗೆಂದು ಸಲಹೆ ನೀಡಿದ ಆರ್ ಅಶ್ವಿನ್!
ರಿಯಾನ್ ಪರಾಗ್ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಆಡಿದ 84 ಪಂದ್ಯಗಳಲ್ಲಿ 141.84ರ ಸ್ಟ್ರೈಕ್ ರೇಟ್‌ನೊಂದಿಗೆ 1,566 ರನ್ ಗಳಿಸಿದ್ದಾರೆ. 2024ರ ಸೀಸನ್‌ನಲ್ಲಿ ಅವರು ಮಿಂಚಿದ್ದರು. ಅವರು ಆ ಸೀಸನ್‌ನಲ್ಲಿ ಅವರು 149.21 ರ ಸ್ಟ್ರೈಕ್ ರೇಟ್‌ನಲ್ಲಿ 573 ರನ್ ಗಳಿಸಿದ್ದರು. ಆ ಮೂಲಕ ಮಧ್ಯಮ ಕ್ರಮಾಂಕದಲ್ಲಿ ತಾನು ನಂಬಿಕಸ್ಥ ಬ್ಯಾಟರ್ ಎಂಬುದನ್ನು ಸಾಬೀತುಪಡಿಸಿದ್ದರು. ಕಳೆದ ಸೀಸನ್‌ನಲ್ಲಿ ಅವರ ಸ್ಟ್ರೈಕ್ ರೇಟ್ 166.52ಕ್ಕೆ ಏರಿದರೂ, ಒಟ್ಟು ರನ್ 393 ರನ್‌ಗಳಿಗೆ ಸೀಮಿತರಾಗಿದ್ದರು.
ನೂತನ ನಾಯಕ ರಿಯಾನ್ ಪರಾಗ್ ಹೇಳಿದ್ದೇನು?
"ಐಪಿಎಲ್ ಆಡಿದ ಮೊದಲನೇ ದಿನದಿಂದ ರಾಜಸ್ಥಾನ್ ರಾಯಲ್ಸ್ ನನ್ನ ತವರು ಮನೆ. ಈ ಫ್ರಾಂಚೈಸಿ ನನ್ನನ್ನು ಬೆಂಬಲಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ಪ್ರತಿಯೊಂದು ಸೀಸನ್ ನನ್ನನ್ನು ಹೆಚ್ಚು ಬೆಳೆಸಲು ಪ್ರೇರೇಪಿಸಿದೆ. ಈಗ ಈ ತಂಡದ ನಾಯಕತ್ವ ನೀಡಿರುವುದು ಅತ್ಯಂತ ವಿಶೇಷ ಮತ್ತು ನಾನು ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ಸ್ವೀಕರಿಸುತ್ತೇನೆ. ನಮ್ಮ ಕೋಚಿಂಗ್ ಸಿಬ್ಬಂದಿ ಮತ್ತು ನಾಯಕತ್ವ ತಂಡದೊಂದಿಗೆ ಕೆಲಸ ಮಾಡುವುದಕ್ಕೆ ಮತ್ತು ಭಯವಿಲ್ಲದ, ಬುದ್ಧಿವಂತಿಕೆಯಿಂದ ಕ್ರಿಕೆಟ್ ಆಡಲು ನಾನು ಉತ್ಸಾಹಿತರಾಗಿದ್ದೇನೆ. ನಮ್ಮ ಅಭಿಮಾನಿಗಳನ್ನು ಹೆಮ್ಮೆಪಡಿಸಲು ನಾವು ಪ್ರಯತ್ನಿಸುತ್ತೇವೆ,” ಎಂದು ರಿಯಾನ್ ಪರಾಗ್ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.
ರಿಯಾನ್ ಪರಾಗ್‌ಗೆ ಕೋಚ್ ಕುಮಾರ ಸಂಗಕ್ಕಾರ ಮೆಚ್ಚುಗೆ
“ರಿಯಾನ್ ಪ್ರಭಾವಶೀಲ ಆಟಗಾರ ಮತ್ತು ನಮ್ಮ ತಂಡದಲ್ಲಿ ಶಕ್ತಿಶಾಲಿ ಹಾಜರಾತಿಯಾಗಿ ಬೆಳೆದಿದ್ದಾರೆ. ಅವರು ಒತ್ತಡದ ಸಮಯದಲ್ಲಿ ಸ್ಥಿರತೆ ತೋರಿಸಿದ್ದಾರೆ, ತೀಕ್ಷ್ಣ ಕ್ರಿಕೆಟ್ ಜ್ಞಾನ ಹೊಂದಿದ್ದಾರೆ ಮತ್ತು ನಾವು ಹೇಗೆ ಆಡಬೇಕು ಎಂಬುದನ್ನು ಸತ್ಯವಾಗಿ ಅರ್ಥಮಾಡಿಕೊಂಡಿದ್ದಾರೆ. ಆಟಗಾರ, ನಾಯಕತ್ವ ತಂಡದ ಭಾಗವಾಗಿಯೂ ಅವರು ಡ್ರೆಸಿಂಗ್ ಕೊಠಡಿಯ ಗೌರವವನ್ನು ಪಡೆದಿದ್ದಾರೆ ಮತ್ತು ಈ ಪಾತ್ರದಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ನಮಗಿದೆ,” ಎಂದು ಆರ್‌ಆರ್ ಕ್ರಿಕೆಟ್ ನಿರ್ದೇಶಕ ಹಾಗೂ ಹೆಡ್ ಕೋಚ್ ಕುಮಾರ ಸಂಗಕ್ಕಾರ ತಿಳಿಸಿದ್ದಾರೆ.