ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸಾಲಿನ (IPL 2026) ಟೂರ್ನಿಯು ಅಂತಿಮ ಘಟ್ಟಕ್ಕೆ ತಲುಪಿದ್ದು, ಚೆನ್ನೈ ಸೂಪರ್ ಕಿಂಗ್ಸ್ (CSK) ಮಾಜಿ ನಾಯಕ ಎಂಎಸ್ ಧೋನಿ (MS Dhoni) ಇನ್ನೂ ಒಂದೇ ಒಂದು ಪಂದ್ಯದಲ್ಲಿಯೂ ಆಡಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡ, ತನ್ನ ತವರು ಅಂಗಣ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಈ ಸೀಸನ್‌ನ ಕೊನೆಯ ಪಂದ್ಯವನ್ನು ಆಡುತ್ತಿದೆ. ಪಂದ್ಯಕ್ಕೂ ಮುನ್ನ ಎಂಎಸ್ ಧೋನಿ ತವರು ಅಭಿಮಾನಿಗಳ ಎದುರು ಈ ವರ್ಷದ ತಮ್ಮ ಮೊದಲನೇ ಪಂದ್ಯವನ್ನು ಆಡಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಅಭಿಮಾನಿಗಳ ಕನಸು ನನಸಾಗಲೇ ಇಲ್ಲ. ಟಾಸ್ ವೇಳೆ ನಾಯಕ ಋತುರಾಜ್ ಗಾಯಕ್ವಾಡ್ ಪ್ಲೇಯಿಂಗ್ XI ಪ್ರಕಟಿಸುತ್ತಿದ್ದಂತೆ ಎಂಎಸ್ ಧೋನಿ ಆಡುತ್ತಿಲ್ಲ ಎಂಬುದು ಸ್ಪಷ್ಟವಾಯಿತು.
ಎಂಎಸ್ ಧೋನಿ ತಂಡದೊಂದಿಗೆ ಇದ್ದರೂ, ಇಂದಿನ (ಸೋಮವಾರ) ಪಂದ್ಯದಲ್ಲಿ ಆಡಲು ಅವರು ಸಂಪೂರ್ಣ ಫಿಟ್ ಆಗಿಲ್ಲ ಎಂದು ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಹೇಳಿದ್ದಾರೆ. ಟಾಸ್ ವೇಳೆ ಮಾತನಾಡಿದ ಗಾಯಕ್ವಾಡ್, "ನಾವು ಮೊದಲು ಬ್ಯಾಟ್ ಮಾಡಲು ಬಯಸುತ್ತೇವೆ. ಪಿಚ್ ಸ್ವಲ್ಪ ಒಣಗಿರುವ ರೀತಿ ಕಾಣುತ್ತಿದೆ ಮತ್ತು ನಾವು ಉತ್ತಮ ಮೊತ್ತವನ್ನು ಕಲೆ ಹಾಕಲು ಬಯಸುತ್ತೇವೆ. ಮುಂಬೈ ಇಂಡಿಯನ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲೂ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿರಲಿಲ್ಲ. ಎಂಎಸ್ ಧೋನಿ ಇನ್ನೂ ತಂಡದಲ್ಲಿದ್ದಾರೆ, ಆದರೆ ಅವರು ಈ ಪಂದ್ಯದಲ್ಲಿ ಆಡಲು ಸಂಪೂರ್ಣವಾಗಿ ಫಿಟ್ ಆಗಿಲ್ಲ. ನಮ್ಮ ತಂಡದಲ್ಲಿ ನಾವು ಒಂದು ಬದಲಾವಣೆ ಮಾಡಿದ್ದೇವೆ," ಎಂದು ಮಾಹಿತಿ ನೀಡಿದರು.
IPL 2026: ʻಆರ್‌ಸಿಬಿ ನನಗೆ ತವರು ತಂಡದ ರೀತಿ ಭಾಸವಾಗುತ್ತಿದೆʼ-ಭಾವುಕರಾದ ವೆಂಕಟೇಶ್ ಅಯ್ಯರ್!
ಸಿಎಸ್‌ಕೆ ತಂಡದ ಮೊದಲ ಪಂದ್ಯದಿಂದಲೇ ಎಂಎಸ್ ಧೋನಿ ಈ ಋತುವಿನ ಉದ್ದಕ್ಕೂ ತಂಡದಿಂದ ಹೊರಗುಳಿದಿದ್ದಾರೆ. ಋತುವಿನ ಆರಂಭದಲ್ಲಿಯೇ ಧೋನಿ ಕಾಲಿನ ಗಾಯಕ್ಕೆ ತುತ್ತಾಗಿದ್ದರು, ಅದರ ನಂತರ ಅವರು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ ಅವರು ನೆಟ್ ಸೆಷನ್‌ಗಳು ಮತ್ತು ತಂಡದ ಅಭ್ಯಾಸದಲ್ಲಿ ಭಾಗವಹಿಸುವುದನ್ನು ಮುಂದುವರೆಸಿದ್ದರೂ, ಅವರು ಇನ್ನೂ ಒಂದು ಪಂದ್ಯದಲ್ಲಿ ಆಡಲು ಸಾಕಷ್ಟು ಫಿಟ್ ಆಗಿಲ್ಲ. ಪರಿಣಾಮವಾಗಿ ಇದೇ ಮೊದಲ ಬಾರಿ ಚೆನ್ನೈ ಅಭಿಮಾನಿಗಳು ಇಡೀ ಋತುವಿನಲ್ಲಿ ಎಂಎಸ್ ಧೋನಿಯನ್ನು ಒಮ್ಮೆಯೂ ಪಂದ್ಯದಲ್ಲಿ ನೋಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ XI
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ
ಚೆನ್ನೈ ಸೂಪರ್ ಕಿಂಗ್ಸ್: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹುಸೇನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್