ನವದೆಹಲಿ: ಸನ್‌ರೈಸರ್ಸ್ ಹೈದರಾಬಾದ್ ತಂಡದ (SRH) ನಾಯಕ ಪ್ಯಾಟ್ ಕಮಿನ್ಸ್ (Pat Cummins) ಗಾಯದಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಮಾರ್ಚ್ 25 ಬುಧವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ತಂಡದ ತರಬೇತಿ ಶಿಬಿರದಲ್ಲಿ ಅವರು ಭಾಗವಹಿಸಿದ್ದರು. ಬೆನ್ನು ನೋವಿನ ಗಾಯದಿಂದ ಬಳಲುತ್ತಿರುವ ಕಮಿನ್ಸ್, ಈ ತರಬೇತಿ ಅವಧಿಯಲ್ಲಿ ತಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಂಡಿದ್ದರು. ಅವರು ಫಿಟ್‌ನೆಸ್ ಕಡೆಗೆ ಗಮನ ಹರಿಸುತ್ತಿದ್ದಾರೆ ಹಾಗೂ ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ಅಭ್ಯಾಸಗಳಲ್ಲಿ ಭಾಗವಹಿಸಿದ್ದರು. ಇದರ ಜೊತೆಗೆ, ಖಾಲಿ ನೆಟ್ಸ್‌ನಲ್ಲಿ ಕಡಿಮೆ ರನ್-ಅಪ್‌ನೊಂದಿಗೆ ಕೆಲವು ಎಸೆತಗಳನ್ನು ಹಾಕಿದ್ದರು. ತಮ್ಮ ಬೌಲಿಂಗ್‌ನಲ್ಲಿ ಹಂತ-ಹಂತವಾಗಿ ಮರಳುತ್ತಿರುವ ಸೂಚನೆ ನೀಡಿದ್ದಾರೆ.
ಆಸ್ಟ್ರೇಲಿಯಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕನಾದ ಪ್ಯಾಟ್ ಕಮಿನ್ಸ್, ಕಳೆದ ಜುಲೈನಲ್ಲಿ ಕೆರಿಬಿಯನ್ ಪ್ರವಾಸದ ನಂತರ ಗಾಯಕ್ಕೆ ತುತ್ತಾಗಿದ್ದರು. ಕಳೆದ ಒಂದು ವರ್ಷದಿಂದ ಮೈದಾನದಿಂದ ದೂರ ಉಳಿದಿದ್ದರು. ಆಗಿನಿಂದ ಅವರು ಕೇವಲ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದರು. ಕಳೆದ ವರ್ಷ ಸೆಪ್ಟಂಬರ್ ಅಡಿಲೇಡ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಸಿದ್ದರು. ಇದಲ್ಲದೆ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಹೊರ ನಡೆದಿದ್ದರು.
IPL 2026 Full Schedule: 19ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದ ಬಿಸಿಸಿಐ!
ಕಮ್‌ಬ್ಯಾಕ್ ಬಗ್ಗೆ ಪ್ಯಾಟ್ ಕಮಿನ್ಸ್ ಹೇಳಿದ್ದೇನು?
2026ರ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಪ್ಯಾಟ್ ಕಮಿನ್ಸ್ ಅಲಭ್ಯರಾಗಲಿದ್ದಾರೆ ಹಾಗೂ ಅವರು ಟೂರ್ನಿಯ ಎರಡನೇ ಅವಧಿಗೆ ಲಭ್ಯರಾಗಲಿದ್ದಾರೆಂದು ಹೇಳಲಾಗುತ್ತಿದೆ. ಪಾಡ್‌ಕಾಸ್ಟ್‌ವೊಂದರಲ್ಲಿ ಭಾಗವಹಿಸಿದ್ದ ಪ್ಯಾಟ್ ಕಮಿನ್ಸ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
"ನಾನು ಇನ್ನೂ ಬೆನ್ನು ನೋವಿನ ಗಾಯದಿಂದ ಗುಣಮುಖನಾಗುತ್ತಿದ್ದೇನೆ ಹಾಗೂ ಇದು ಉತ್ತಮವಾಗಿ ಸಾಗುತ್ತಿದೆ. ನೆಟ್ಸ್‌ನಲ್ಲಿ ನಾನು ಬೌಲ್ ಮಾಡುತ್ತಿದ್ದೇನೆ. ಐಪಿಎಲ್ ಟೂರ್ನಿಯು ಶೀಘ್ರದಲ್ಲಿಯೇ ಆರಂಭವಾಗಲಿದೆ. ನಾನು ಟೂರ್ನಿಯ ಆರಂಭದಲ್ಲಿ ಆಡುತ್ತಿಲ್ಲ ಹಾಗೂ ನಾನು ಟೂರ್ನಿಗೆ ಕಮ್‌ಬ್ಯಾಕ್ ಮಾಡಲು ಹೆಚ್ಚಿನ ಸಮಯವನ್ನು ಕೂಡ ತೆಗೆದುಕೊಳ್ಳುವುದಿಲ್ಲ," ಎಂದು ಹೇಳಿದ್ದಾರೆ.
IPL 2026: ʻ450 ಕೋಟಿಯಿಂದ 16,500 ಕೋಟಿ ರುʼ-ಆರ್‌ಸಿಬಿ ಮಾರಾಟದ ಬಗ್ಗೆ ವಿಜಯ್ ಮಲ್ಯ ಪ್ರತಿಕ್ರಿಯೆ!
"ಪ್ರಸ್ತುತ ನಾನು ಇಲ್ಲಿಗೆ ಬಂದ ಮೂರನೇ ದಿನದಿಂದಲೇ ಬೌಲಿಂಗ್ ಆರಂಭಿಸಿದ್ದೇನೆ. ಟೂರ್ನಿಯ ಮಧ್ಯಭಾಗಕ್ಕೆ ನಾನು ಸಂಪೂರ್ಣವಾಗಿ ಸಿದ್ಧರಾಗಲು ಯೋಜನೆಯನ್ನು ರೂಪಿಸಿದ್ದೇವೆ. ಯಾವುದೇ ಪ್ರಮಾದ ನಡೆದಿಲ್ಲವಾದರೆ, ನಾನು ಟೂರ್ನಿಯ ಮುಂದಿನ ಹಂತಗಳು ಮತ್ತು ಫೈನಲ್ ಹಂತದಲ್ಲಿ ಆಡಬಲ್ಲೆ," ಎಂದು ಪ್ಯಾಟ್ ಕಮಿನ್ಸ್ ತಿಳಿಸಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್‌ಗೆ ಇಶಾನ್ ಕಿಶನ್ ನಾಯಕ
ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರು ಟೂರ್ನಿಯ ಮೊದಲ ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಂಗಾಮಿ ನಾಯಕರಾಗಿ ಮುನ್ನಡೆಸಲಿದ್ದಾರೆ. ಪ್ಯಾಟ್ ಕಮಿನ್ಸ್ ಅವರ ಕಮ್‌ಬ್ಯಾಕ್ ಕೇವಲ ಹೈದರಾಬಾದ್ ತಂಡಕ್ಕೆ ಮಾತ್ರವಲ್ಲ, ಆಸ್ಟ್ರೇಲಿಯಾ ತಂಡಕ್ಕೂ ಕ್ಯಾಲೆಂಡರ್ ವರ್ಷದ ವೇಳಾಪಟ್ಟಿಯಲ್ಲಿ ಮುಖ್ಯವಾಗಿದೆ. ಆಸ್ಟ್ರೇಲಿಯಾ ತಂಡ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗುವುದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.