ಬೆಂಗಳೂರು: ಗುಜರಾತ್ ಟೈಟನ್ಸ್ ಎದುರು ಸ್ಪೋಟಕ ಬ್ಯಾಟಿಂಗ್ ನಡೆಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 5 ವಿಕೆಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್ ಕೊಹ್ಲಿಯನ್ನು (Virat Kohli) ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. 206 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 81 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನಕ್ಕೇರುವ ಮೂಲಕ ಆರೆಂಜ್ ಕ್ಯಾಪ್ ಸ್ವೀಕರಿಸಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 328 ರನ್‌ಗಳನ್ನು ಬಾರಿಸಿದ್ದಾರೆ.
ಅಂದ ಹಾಗೆ ಆರ್‌ಸಿಬಿ ಇನಿಂಗ್ಸ್‌ನ ಮೊದಲನೇ ಓವರ್‌ನಲ್ಲಿಯೇ ಮೊಹಮ್ಮದ್ ಸಿರಾಜ್ ಅವರ ಬೌಲಿಂಂಗ್‌ನಲ್ಲಿ ವಿರಾಟ್ ಕೊಹ್ಲಿ ಒಂದು ಜೀವದಾನ ಪಡೆದಿದ್ದರು. ವಿರಾಟ್ ಕೊಹ್ಲಿಯವರ ಸುಲಭವಾದ ಕ್ಯಾಚ್ ಅನ್ನು ಮಿಡ್ ವಿಕೆಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಕೈ ಚೆಲ್ಲಿದ್ದರು. ಇದು ಗುಜರಾತ್ ಟೈಟನ್ಸ್ ತಂಡಕ್ಕೆ ಭಾರಿ ಹಿನ್ನಡೆಯನ್ನು ತಂದಿತ್ತು. ಇದನ್ನು ಸದುಪಯೋಗಪಡಿಸಿಕೊಂಡ ಕೊಹ್ಲಿ 81 ರನ್‌ಗಳನ್ನು ಬಾರಿಸಿದ್ದರು.
IPL 2026: 'ಇಲ್ಲಿ ಆಡುವುದೇ ಒಂದು ವಿಶೇಷ'; ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಕೊಹ್ಲಿ ಮನದಾಳದ ಮಾತು
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸುನೀಲ್ ಗವಾಸ್ಕರ್, "ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿಯ ಕ್ಯಾಚ್ ಅನ್ನು ಕೈ ಚೆಲ್ಲಿದ್ದು ಖಂಡಿತವಾಗಿಯೂ ಗುಜರಾತ್ ಟೈಟನ್ಸ್‌ಗೆ ಭಾರಿ ಹಿನ್ನಡೆಯನ್ನು ತಂದಿತ್ತು," ಎಂದು ಹೇಳಿದ್ದಾರೆ.
"ವಿರಾಟ್ ಕೊಹ್ಲಿ ಕೇವಲ ಕಿಂಗ್ ಮಾತ್ರವಲ್ಲ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಅವರು ಚೇಸ್ ಮಾಸ್ಟರ್ ಕೂಡ. ನೀವು ಮೊದಲ ಬಾಲ್‌ನಲ್ಲಿ ಕ್ಯಾಚ್ ಡ್ರಾಪ್ ಮಾಡಿದರೆ, ಇದಕ್ಕೆ ಖಂಡಿತವಾಗಿಯೂ ಬೆಲೆ ಕಟ್ಟಬೇಕಾಗುತ್ತದೆ. ಕೊಹ್ಲಿ ಮಾಡಿದ್ದು ಕೂಡ ಇದೇ. ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದುದ್ದಕ್ಕೂ ಆಡಿದ ರೀತಿಯಲ್ಲಿ ಬ್ಯಾಟ್ ಮಾಡಿದರೆ, ದೊಡ್ಡ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಬಹುದು," ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
ತಂಡ ಬದಲಾದರೂ ಬದಲಾಗದ ಕೊಹ್ಲಿ-ಸಿರಾಜ್ ನಡುವಿನ ಸ್ನೇಹ ಬಾಂಧವ್ಯ; ಹೃದಯಸ್ಪರ್ಶಿ ಕ್ಷಣದ ವಿಡಿಯೊ ವೈರಲ್
ದೇವದತ್ ಪಡಿಕ್ಕಲ್‌ಗೆ ಗವಾಸ್ಕರ್ ಮೆಚ್ಚುಗೆ
ವಿರಾಟ್ ಕೊಹ್ಲಿ ಜೊತೆಗೆ 115 ರನ್‌ಗಳ ಜೊತೆಯಾಟವನ್ನು ಆಡಿದ್ದ ದೇವದತ್ ಪಡಿಕ್ಕಲ್ ಕೂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಕೂಡ 55 ರನ್‌ಗಳನ್ನು ಬಾರಿಸಿದ್ದರು. ಹಾಗಾಗಿ ಕನ್ನಡಿಗನನ್ನು ಕೂಡ ಬ್ಯಾಟಿಂಗ್ ದಿಗ್ಗಜ ಶ್ಲಾಘಿಸಿದ್ದಾರೆ.
"ದೇವದತ್ ಪಡಿಕ್ಕಲ್ ಅವರು ಕೂಡ ಅದ್ಭುತ ಇನಿಂಗ್ಸ್ ಆಡಿದ್ದಾರೆ. ಪಡಿಕ್ಕಲ್ ಅದ್ಭುತ ಹೊಡೆತಗಳನ್ನು ಆಡಿದ್ದಾರೆಂದು ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಉಲ್ಲೇಖ ಮಾಡಿದ್ದರು. ಈ ಹಿಂದೆ ಪಡಿಕ್ಕಲ್ ಅವರನ್ನು ಆಫ್ ಸೈಡ್ ಆಟಗಾರ ಎಂದು ಪರಿಗಣಿಸಲಾಗಿತ್ತು. ಅವರು ರನ್ ಗಳಿಸುವ ಜಾಗ ಮಿಡ್ ಆಫ್ ಹಾಗೂ ಕವರ್ಸ್. ಆನ್ ಸೈಡ್‌ನಲಿ ಅವರು ತೊಂದರೆ ಅನುಭವಿಸುತ್ತಿದ್ದರು, ಆದರೆ ಈಗ ಅವರು ಅದನ್ನು ಮೆಟ್ಟಿ ನಿಂತಿದ್ದಾರೆ," ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
IPL 2026: 34 ಪಂದ್ಯಗಳು ಮುಕ್ತಾಯ; ತಂಡಗಳ ಪ್ಲೇ ಆಪ್ ಲೆಕ್ಕಾಚಾರ ಹೇಗಿದೆ?
“ಅವರು ಸ್ಕ್ವೇರ್ ಹಿಂದಿನ ಭಾಗದಲ್ಲಿಯೂ ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ಹೊಡೆಯುತ್ತಿದ್ದಾರೆ. ಇದು ಆರ್‌ಸಿಬಿಯ ಬ್ಯಾಟಿಂಗ್ ಶಕ್ತಿಗೆ ಮತ್ತಷ್ಟು ಬಲ ನೀಡುತ್ತಿದೆ. ಅವರ ಬಳಿ ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ನಾಯಕ ರಜತ್ ಪಾಟಿದಾರ್ ಇದ್ದಾರೆ. ಇಬ್ಬರೂ ಮೊದಲ ಎಸೆತದಿಂದಲೇ ಸಿಕ್ಸರ್‌ಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಇದು ಈಗ ಆರ್‌ಸಿಬಿಗೆ ದೊಡ್ಡ ಮಟ್ಟದ ವ್ಯತ್ಯಾಸವನ್ನು ಉಂಟುಮಾಡುತ್ತಿದೆ.” ಎಂದಿದ್ದಾರೆ ಸುನೀಲ್ ಗವಾಸ್ಕರ್.