ಧರ್ಮಶಾಲಾ: ಶಾರ್ದುಲ್ ಠಾಕೂರ್ (Shardul Thakur) ಮಾರಕ ಬೌಲಿಂಗ್ ಹಾಗೂ ತಿಲಕ್ ವರ್ಮಾ (Tilak Verma) ಸ್ಪೋಟಕ ಅರ್ಧಶತಕದ ಬಲದಿಂದ ಮುಂಬೈ ಇಂಡಿಯನ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಸತತ ಐದನೇ ಸೋಲು ಅನುಭವಿಸಿದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡದ ಪ್ಲೇಆಫ್ಸ್ ಹಾದಿ ಇನ್ನಷ್ಟು ಕಠಿಣವಾಗಿದೆ. ಇನ್ನುಳಿದ ಎರಡೂ ಪಂದ್ಯಗಳಲಿ ಪಿಬಿಕೆಎಸ್ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಆದರೆ, ಈಗಾಗಲೇ ಪ್ಲೇಆಫ್ಸ್ ರೇಸ್‌ನಿಂದ ಹೊರಬಿದ್ದಿರುವ ಐದು ಬಾರಿ ಚಾಂಪಿಯನ್ಸ್‌ಗೆ ಈ ಗೆಲುವು ಸ್ವಲ್ಪ ಸಮಾಧಾನವನ್ನು ತಂದಿದೆ.
ಗುರುವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 201 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ 61 ರನ್‌ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ತಂದುಕೊಟ್ಟರು. 23 ಎಸೆತಗಳಲ್ಲಿ 48 ರನ್ ಗಳಿಸಿದ ಬಳಿಕ ರಿಕೆಲ್ಟನ್ ಔಟ್ ಆದರು. ಆದರೆ, ರೋಹಿತ್ ಶರ್ಮಾ 25 ರನ್‌ಗೆ ಔಟ್ ಆದರು. ನಮನ್ ಧಿರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.
IPL 2027: ʻನಮಗೆ ನೀವು ಥ್ಯಾಂಕ್ಸ್ ಹೇಳಬೇಕುʼ-ಆರ್‌ಸಿಬಿ ಸಕ್ಸಸ್‌ಗೆ ನಾವೇ ಕಾರಣ ಎಂದ ಅಂಬಾಟಿ ರಾಯುಡು!
ಸ್ಪೋಟಕ ಅರ್ಧಶತಕ ಸಿಡಿಸಿದ ತಿಲಕ್ ವರ್ಮಾ
88 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ವೇಳೆ ಕ್ರೀಸ್‌ಗೆ ಬಂದ ತಿಲಕ್ ವರ್ಮಾ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ಅವರು, ಶರ್ಫೆನ್ ಋದರ್‌ಫೋರ್ಡ್ ಜೊತೆಗೆ 42 ಎಸೆತಗಳಲ್ಲಿ 61 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. 20 ರನ್ ಗಳಿಸಿದ ಶೆರ್ಫೆನ್ ಔಟ್ ಆದರು. ಆದರೆ ಒಂದು ತುದಿಯಲ್ಲಿ ನಿಂತು ಬ್ಯಾಟ್ ಮಾಡಿದ ತಿಲಕ್, ಕೇವಲ 33 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 75 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲ್ಲಿಸಿದರು. ಕೊನೆಯಲ್ಲಿ ತಿಲಕ್ ಜೊತೆ 56 ರನ್‌ಗಳ ಜೊತೆಯಾಟವನ್ನು ಆಡಿದ ವಿಲ್ ಜ್ಯಾಕ್ಸ್ 10 ಎಸೆತಗಳಲ್ಲಿ ಅಜೇಯ 25 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ಮುಂಬೈ ತಂಡ, 19.5 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಗೆದ್ದು ಬೀಗಿತು.
200 ರನ್ ಕಲೆ ಹಾಕಿದ ಪಂಜಾಬ್ ಕಿಂಗ್ಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಪಂಜಾಬ್ ಕಿಂಗ್ಸ್ ತಂಡ, ಶಾರ್ದುಲ್ ಠಾಕೂರ್ ಅವರ ಮಾರಕ ಬೌಲಿಂಗ್ ಹೊರತಾಗಿಯೂ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಅಝಮತ್‌ವುಲ್ಲಾ ಒಮರ್ಜಾಯ್ ಅವರ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 200 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ 201 ರನ್‌ಗಳ ಗುರಿಯನ್ನು ನೀಡಿತು.
ಪಂಜಾಬ್‌ಗೆ ಉತ್ತಮ ಆರಂಭ
ಇನಿಂಗ್ಸ್ ಆರಂಭಿಸಿದ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 50 ರನ್‌ಗಳನ್ನು ಕಲೆ ಹಾಕಿತು. 17 ಎಸೆತಗಳಲ್ಲಿ 22 ರನ್ ಗಳಿಸಿ ಆಡುತ್ತಿದ್ದ ಪ್ರಿಯಾಂಶ್ ಆರ್ಯ ಅವರನ್ನು ದೀಪಕ್ ಚಹರ್ ಬೌಲ್ಡ್ ಮಾಡಿದರು. ನಂತರ ಕೂಪರ್ ಕನೋಲಿ 21 ರನ್ ಗಳಿಸಿದ ಜೊತೆಗೆ ಪ್ರಭ್‌ಸಿಮ್ರನ್ ಜೊತೆಗೆ 57 ರನ್ ಗಳಿಸಿದರು. ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಪ್ರಭ್‌ಸಿಮ್ರನ್ 32 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 57 ರನ್ ಗಳಿಸಿದ ಬಳಿಕ ಶಾರ್ದುಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಾಂಶ್ ಶೆಡ್ಗೆ ಅವರನ್ನು ಶಾರ್ದುಲ್ ಠಾಕೂರ್ ಔಟ್ ಮಾಡಿದರು. ಶಶಾಂಕ್ ಸಿಂಗ್ ಅವರನ್ನು ಕೂಪರ್ ಕನೋಲಿ ಔಟ್ ಮಾಡಿದರು. ಅಝಮತ್‌ವುಲ್ಲಾ ಒಮರ್ಜಾಯ್ ಅವರು ಕೊನೆಯಲ್ಲಿ ಅಬ್ಬರಿಸಿದರು ಹಾಗೂ 17 ಎಸೆತಗಳಲ್ಲಿ 38 ರನ್‌ಗಳನ್ನು ಗಳಿಸಿದರು. ವಿಷ್ಣು ವಿನೋದ್ ಹಾಗೂ ಕ್ಸಿವಿಯರ್ ಬಾರ್ಲೆಟ್ ಅವರು ಕ್ರಮವಾಗಿ 15 ರನ್ ಹಾಗೂ 18 ರನ್‌ಗಳನ್ನು ಕಲೆ ಹಾಕಿದರು. ಮುಂಬೈ ಪರ ಶಾರ್ದುಲ್ ಠಾಕೂರ್ 4 ವಿಕೆಟ್ ಕಿತ್ತರೆ, ದೀಪಕ್ ಚಹರ್ ಅವರು ಎರಡು ವಿಕೆಟ್ ಕಬಳಿಸಿದರು.