ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಸಾಲಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಬ್ಯಾಟ್ ಮಾಡಲು ಕನ್ನಡಿಗ ಮನೀಷ್ ಪಾಂಡೆ (Manish Pandey) ಅವಕಾಶ ಲಭಿಸಿತು. ಮುಂಬೈ ಇಂಡಿಯನ್ಸ್ ಎದುರಿನ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಚೇಸಿಂಗ್ ವೇಳೆ ಒತ್ತಡದ ಸನ್ನಿವೇಶದಲ್ಲಿ ಮನೀಷ್ ಪಾಂಡೆ ನಿರ್ಣಾಯಕ ಬ್ಯಾಟಿಂಗ್ ನಡೆಸಿ ತಮ್ಮ ತಂಡವನ್ನು ಗೆಲ್ಲಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ ಹಾಗೂ ಕೆಕೆಆರ್ ನನ್ನನ್ನು ಬೆಂಬಲಿಸಿ ಅವಕಾಶ ನೀಡಿದ್ದಕ್ಕೆ ನಾನು ಈ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
2026ರ ಐಪಿಎಲ್ ಟೂರ್ನಿಯಲ್ಲಿ ಮನೀಷ್ ಪಾಂಡೆ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ಪ್ಲೇಯಿಂಗ್ XIನಲ್ಲಿ ಅವಕಾಶ ಪಡೆದಿದ್ದರೂ ಬ್ಯಾಟಿಂಗ್‌ಗೆ ಅವಕಾಶ ಸಿಕ್ಕಿರಲಿಲ್ಲ, ಆದರೆ ಟಿಮ್ ಡೇವಿಡ್ ಅವರ ಕ್ಯಾಚ್ ಅನ್ನು ಪಾಯಿಂಟ್‌ನಲ್ಲಿ ಅದ್ಭುತವಾಗಿ ಪಡೆಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ನಾನ್‌ಸ್ಟ್ರೈಕ್ ಎಂಡ್‌ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಕೂಡ, ತಮ್ಮ ಮಾಜಿ ಸಹ ಆಟಗಾರ ಫೀಲ್ಡಿಂಗ್ ಕೌಶಲವನ್ನು ನೋಡಿ ದಂಗಾಗಿದ್ದರು. ಈ ಪಂದ್ಯದಲ್ಲಿ ಕೆಕೆಆರ್, ಆರ್‌ಸಿಬಿ ಎದುರು ಸೋತಿತ್ತು.
IPL 2026: ಎಸ್‌ಆರ್‌ಎಸ್ ಎದುರು ಸೋತರೆ ಅಗ್ರ ಸ್ಥಾನವನ್ನು ಕಳೆದುಕೊಳ್ಳುತ್ತಾ ಆರ್‌ಸಿಬಿ?
ಬುಧವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ 147 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಕೆಕೆಆರ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮನೀಷ್ ಪಾಂಡೆ 33 ಎಸೆತಗಳಲ್ಲಿ 45 ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ಅಜಿಂಕ್ಯ ರಹಾನೆ ಜೊತೆ 38 ರನ್ ಹಾಗೂ ರೊವ್ಮನ್ ಪೊವೆಲ್ ಅವರ ಜೊತೆ 64 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಮನೀಷ್ ಪಾಂಡೆ, ಈ ಸೀಸನ್‌ನಲ್ಲಿ ಇದೇ ಮೊದಲ ಬಾರಿ ಸಂಪೂರ್ಣವಾಗಿ ಬ್ಯಾಟ್ ಮಾಡಲು ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ. "ಹೌದು, ಇದೇ ಕಾರಣದಿಂದಲೇ ನಾನು ಇನ್ನೂ ಇಲ್ಲಿದ್ದೇನೆ. ಇದರಿಂದ ನನಗೆ ತುಂಬಾ ಅದ್ಭುತ ಭಾವನೆಗಳು ಉಂಟಾಗುತ್ತಿವೆ. ನಿಸ್ಸಂಶಯವಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ನನ್ನೊಂದಿಗೆ ನಿಜವಾಗಿಯೂ ತುಂಬಾ ಒಳ್ಳೆಯ ರೀತಿಯಲ್ಲಿ ನಡೆದುಕೊಂಡಿದೆ," ಎಂದು ತಿಳಿಸಿದ್ದಾರೆ.
MI vs KKR: ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿದ ಕೋಲ್ಕತಾ ನೈಟ್ ರೈಡರ್ಸ್ ಪ್ಲೇಆಫ್ಸ್ ಆಸೆ ಜೀವಂತ!
“ಸೀಸನ್ ಆರಂಭದಿಂದ ನೋಡಿದರೆ, ನಾನು ನಿಜವಾಗಿಯೂ ಬ್ಯಾಟಿಂಗ್ ನಡೆಸಿದ ಏಕೈಕ ಪಂದ್ಯ ಇದಾಗಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿ ನಾನು ಪ್ಯಾಡ್ ಹಾಕಿಕೊಂಡೇ ಅವಕಾಶಕ್ಕಾಗಿ ಕಾಯುತ್ತಿದ್ದೆ, ಆದರೆ ಬ್ಯಾಟಗಗ ಮಾಡುವ ಅವಕಾಶ ಸಿಗಲಿಲ್ಲ. ಆದರೆ ಈ ಇನಿಂಗ್ಸ್ ವಿಶೇಷವಾಗಿತ್ತು. ನಾನು ಕ್ರೀಸ್‌ನಲ್ಲಿ ಹೆಚ್ಚು ಸಮಯ ಉಳಿದು ನಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಬೇಕು ಎಂದು ಬಯಸಿದ್ದೆ. ಕೊನೆಗೆ ಅದು ನಡೆಯಿತು," ಮನೀಷ್ ಪಾಂಡೆ ಸಂತಸ ವ್ಯಕ್ತಪಡಿಸಿದ್ದಾರೆ.
"ನಾನು ನಿಯಮಿತವಾಗಿ ಪಂದ್ಯಗಳಲ್ಲಿ ಆಡದಿದ್ದರೂ, ಈ ಸಂಪೂರ್ಣ ತಂಡದ ಭಾಗವಾಗಿರುವುದು ನನಗೆ ಇನ್ನೂ ಹೆಚ್ಚು ಮಹತ್ವದ ವಿಚಾರವಾಗಿತ್ತು. ತಂಡದಲ್ಲಿ ಯಾರಿಗಾದರೂ ನನ್ನಿಂದ ಏನಾದರೂ ಸಹಾಯ ಬೇಕಿದ್ದರೆ, ಅವರಿಗೆ ನೆರವಾಗಲು ನಾನು ಯಾವಾಗಲೂ ಸಿದ್ಧನಿದ್ದೆ. ಈ ಸಂಪೂರ್ಣ ಟೂರ್ನಿಯ ಅವಧಿಯಲ್ಲಿ ನಾನು ಅದನ್ನೇ ಮಾಡಿದ್ದೇನೆ ಎಂದು ಭಾವಿಸುತ್ತೇನೆ,” ಎಂದು ಅವರು ಸೇರಿಸಿದರು.