ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) 2027ರ ಆವೃತ್ತಿಗೂ ಮುನ್ನ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದೊಂದಿಗೆ ನಾಲ್ಕು ಆಟಗಾರರ ವಿನಿಮಯ ಒಪ್ಪಂದವನ್ನು ಪೂರ್ಣಗೊಳಿಸಿದೆ.
ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಆಸ್ಟ್ರೇಲಿಯಾದ ಆಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಸಿಎಸ್‌ಕೆ ತಂಡವನ್ನು ಸೇರಿಕೊಂಡಿದ್ದಾರೆ. ಮತ್ತೊಂದೆಡೆ, ಸಿಎಸ್‌ಕೆಯ ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ವೇಗಿ ನೇಥನ್ ಎಲ್ಲಿಸ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ವರ್ಗಾವಣೆಯಾಗಿದ್ದಾರೆ. ಐಪಿಎಲ್ ಆಡಳಿತ ಮಂಡಳಿಯೇ ನವೆಂಬರ್ 5ರಂದು ಈ ನಾಲ್ಕು ಆಟಗಾರರ ವರ್ಗಾವಣೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.
IPL 2027: ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್‌ಗೆ ಅರ್ಷದೀಪ್ ಸಿಂಗ್?
ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರ್ಪಡೆ
ಲಿಯಾಮ್ ಲಿವಿಂಗ್‌ಸ್ಟೋನ್
ಇಂಗ್ಲೆಂಡ್ | ಆಲ್‌ರೌಂಡರ್
6 ಕೋಟಿ ರು.
ಜಾಕ್ ಎಡ್ವರ್ಡ್ಸ್
ಆಸ್ಟ್ರೇಲಿಯಾ | ಆಲ್‌ರೌಂಡರ್
3 ಕೋಟಿ ರು.
ಸನ್‌ರೈಸರ್ಸ್ ಹೈದರಾಬಾದ್‌ಗೆ ಸೇರ್ಪಡೆ
ಖಲೀಲ್ ಅಹ್ಮದ್
ಭಾರತ | ಎಡಗೈ ವೇಗಿ
4.8 ಕೋಟಿ ರು
ನೇಥನ್ ಎಲ್ಲಿಸ್
ಆಸ್ಟ್ರೇಲಿಯಾ | ವೇಗದ ಬೌಲರ್
2 ಕೋಟಿ ರು.
ಲಿವಿಂಗ್‌ಸ್ಟೋನ್‌ಗೆ ಸಿಎಸ್‌ಕೆಯಲ್ಲಿ ಚೊಚ್ಚಲ ಅವಕಾಶ
ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು 2027ರ ಐಪಿಎಲ್ ಹರಾಜಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡ 13 ಕೋಟಿ ರು. ಗಳಿಗೆ ಖರೀದಿಸಿತ್ತು. ಇದೀಗ ಅವರನ್ನು 6 ಕೋಟಿ ರು. ಗಳ ಪರಿಷ್ಕೃತ ಶುಲ್ಕದೊಂದಿಗೆ ಸಿಎಸ್‌ಕೆ ತಂಡಕ್ಕೆ ವರ್ಗಾವಣೆ ಮಾಡಲಾಗಿದೆ. 2026ರ ಐಪಿಎಲ್ ಟೂರ್ನಿಯಲ್ಲಿ ಲಿವಿಂಗ್‌ಸ್ಟೋನ್ ಕೇವಲ ಎರಡು ಪಂದ್ಯಗಳನ್ನಾಡಿ 15 ರನ್ ಗಳಿಸಿದ್ದರು. ಬಳಿಕ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಅವರ ಸ್ಪೋಟಕ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ಸಾಮರ್ಥ್ಯ ಸಿಎಸ್‌ಕೆ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ಬಲ ನೀಡುವ ನಿರೀಕ್ಷೆಯಿದೆ.
ಜ್ಯಾಕ್ ಎಡ್ವರ್ಡ್ಸ್ ಕೂಡ ಸಿಎಸ್‌ಕೆ ಪಾಲು
ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಆಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಅವರನ್ನು 3 ಕೋಟಿ ರು. ಗಳ ಒಪ್ಪಂದದೊಂದಿಗೆ ಸಿಎಸ್‌ಕೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಎಸ್‌ಆರ್‌ಎಚ್ ತಂಡ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದಕ್ಕೂ ಮುನ್ನ ಖರೀದಿಸಿತ್ತು. ಆದರೆ ಕಾಲಿನ ಗಾಯದ ಕಾರಣ 2026ರ ಐಪಿಎಲ್‌ನಲ್ಲಿ ಒಂದೂ ಪಂದ್ಯ ಆಡಲು ಸಾಧ್ಯವಾಗಿರಲಿಲ್ಲ.
ಎಸ್‌ಆರ್‌ಎಚ್‌ಗೆ ಮರಳಿದ ಖಲೀಲ್ ಅಹ್ಮದ್
ಖಲೀಲ್ ಅಹ್ಮದ್ 2018ರಿಂದ 2021ರವರೆಗೆ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ಬಳಿಕ ಸಿಎಸ್‌ಕೆ ತಂಡವನ್ನು ಸೇರಿಕೊಂಡಿದ್ದರು. 2025ರ ಐಪಿಎಲ್‌ನಲ್ಲಿ 14 ಪಂದ್ಯಗಳಿಂದ 15 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಆದರೆ 2026ರ ಆವೃತ್ತಿಯಲ್ಲಿ ಐದು ಪಂದ್ಯಗಳನ್ನಾಡಿದ ಬಳಿಕ ಬಲ ತೊಡೆಯ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ 4.8 ಕೋಟಿ ರೂಪಾಯಿಗಳ ಒಪ್ಪಂದದೊಂದಿಗೆ ಮತ್ತೆ ಹೈದರಾಬಾದ್ ತಂಡಕ್ಕೆ ಮರಳಿದ್ದಾರೆ.
ನೇಥನ್ ಎಲ್ಲಿಸ್ ಕೂಡ ಎಸ್‌ಆರ್‌ಎಚ್‌ಗೆ
ಆಸ್ಟ್ರೇಲಿಯಾದ ವೇಗಿ ನೇಥನ್ ಎಲ್ಲಿಸ್ 2 ಕೋಟಿ ರು. ಗಳ ಒಪ್ಪಂದದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದಾರೆ. ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿಯಾಗಿ ಬೌಲ್ ಮಾಡುವ ಸಾಮರ್ಥ್ಯ ಹೊಂದಿರುವ ಅವರು ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಸ್ನಾಯು ಸೆಳೆತದ ಗಾಯ ಉಲ್ಬಣಗೊಂಡಿದ್ದರಿಂದ ಅವರು 2026ರ ಐಪಿಎಲ್ ನಲ್ಲಿ ಆಡಿರಲಿಲ್ಲ.
ವಿರಾಟ್ ಕೊಹ್ಲಿಯನ್ನು ಹೊರಗಿಟ್ಟು ಸಾರ್ವಕಾಲಿಕ ಶ್ರೇಷ್ಠ ಐವರು ಒಡಿಐ ಕ್ರಿಕೆಟಿಗರನ್ನು ಆರಿಸಿದ ಎಸ್ ಬದ್ರಿನಾಥ್!
ಸಿಎಸ್‌ಕೆ ತಂಡದಲ್ಲಿ ಮಹತ್ವದ ಬದಲಾವಣೆ
2026ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ತಂಡ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. 14 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಎಂಟನೇ ಸ್ಥಾನ ಪಡೆದಿತ್ತು. ಹೀಗಾಗಿ 2027ರ ಆವೃತ್ತಿಗೂ ಮುನ್ನ ತಂಡದ ಸಂಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ನಾಲ್ಕು ಆಟಗಾರರ ವಿನಿಮಯದ ಮೂಲಕ ಸಿಎಸ್‌ಕೆ ತನ್ನ ಆಲ್‌ರೌಂಡರ್ ವಿಭಾಗವನ್ನು ಬಲಪಡಿಸಲು ಮುಂದಾಗಿದೆ. ಮತ್ತೊಂದೆಡೆ, ಎಸ್‌ಆರ್‌ಎಚ್ ತನ್ನ ವೇಗದ ಬೌಲಿಂಗ್ ವಿಭಾಗಕ್ಕೆ ಖಲೀಲ್ ಮತ್ತು ಎಲ್ಲಿಸ್ ಅವರನ್ನು ಸೇರಿಸಿಕೊಂಡಿದೆ.