ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2027: ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳಿಗೆ ಶಾಕ್‌, 40 ಕೋಟಿ ರು.ಗೆ ಡಿಮ್ಯಾಂಡ್‌ ಮಾಡಿದ ಸ್ಟಾರ್‌ ಆಟಗಾರರು!

2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜಿಗೂ ಮುನ್ನ ತಮ್ಮ-ತಮ್ಮ ಫ್ರಾಂಚೈಸಿಗಳಲ್ಲಿ ಉಳಿಯಲು ಹಲವು ಆಟಗಾರರು ತಮಗೆ 40 ಕೋಟಿ ರು. ಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆಂದು ವರದಿಯಾಗಿದೆ. ಈ ರಿಟೆನ್ಷನ್‌ ಸವಾಲಿನ ಪರಿಣಾಮವಾಗಿ ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳ ಪರ್ಸ್‌ 150 ಕೋಟಿ ರು. ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಐಪಿಎಲ್‌ ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳಿಗೆ ಶಾಕ್‌ ನೀಡಿದ ಆಟಗಾರರು.

ನವದೆಹಲಿ: ಮುಂದಿನ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಆಟಗಾರರ ರಿಟೆನ್ಷನ್ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದೆ. ಲೀಗ್‌ನ ಕೆಲವು ಪ್ರಮುಖ ಸ್ಟಾರ್ ಆಟಗಾರರು ತಮ್ಮನ್ನು ತಂಡದಲ್ಲೇ ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಬರೋಬ್ಬರಿ 40 ಕೋಟಿ ರು ಒಪ್ಪಂದದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಬೇಡಿಕೆಗಳು ಮುಂದುವರಿದರೆ ಫ್ರಾಂಚೈಸಿಗಳು ತಮ್ಮ ತಂಡದ ರಚನೆ ಹಾಗೂ ಹರಾಜಿನ ಯೋಜನೆಗಳನ್ನು ಮರುಪರಿಶೀಲಿಸಬೇಕಾದ ಪರಿಸ್ಥಿತಿ ಎದುರಾಗಬಹುದು.

ಕ್ರಿಕ್‌ಬಝ್‌ ವರದಿಯ ಪ್ರಕಾರ, ಕನಿಷ್ಠ ಇಬ್ಬರು ಪ್ರಮುಖ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳೊಂದಿಗೆ ರಿಟೆನ್ಷನ್ ಒಪ್ಪಂದದ ಕುರಿತು ಮಾತುಕತೆ ನಡೆಸಿದ್ದು, ತಂಡದಲ್ಲಿ ಮುಂದುವರಿಯಲು 40 ಕೋಟಿ ಪಾವತಿಸಬೇಕೆಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಇತರ ಕೆಲವು ಸ್ಟಾರ್ ಆಟಗಾರರೂ ಇದೇ ರೀತಿಯ ಬೇಡಿಕೆ ಮುಂದಿಡುವ ಸಾಧ್ಯತೆಯಿದೆ. ಹರಾಜಿನಲ್ಲಿ ಭಾಗವಹಿಸಿದರೆ ಹೆಚ್ಚಿನ ಮೊತ್ತ ಪಡೆಯಬಹುದು ಎಂಬ ಲೆಕ್ಕಾಚಾರದಿಂದ ಆಟಗಾರರು ಈ ನಿರ್ಧಾರ ತೆಗೆದುಕೊಂಡಿರಬಹುದು. ಇವರ ಪೈಕಿ ಒಬ್ಬ ಆಟಗಾರ 40 ಕೋಟಿ ಬೇಡಿಕೆಯು ನಾಯಕತ್ವದ ಜವಾಬ್ದಾರಿಗೂ ಸಂಬಂಧಿಸಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

IPL 2027: ಸಿಎಸ್‌ಕೆಗೆ ಲಿಯಾಮ್ ಲಿವಿಂಗ್‌ಸ್ಟೋನ್ ಎಂಟ್ರಿ; ಎಸ್‌ಆರ್‌ಎಚ್‌ ಜೊತೆ ಚೆನ್ನೈ ಟ್ರೇಡ್‌ ಡೀಲ್‌!

2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ತಮ್ಮ ಹಿಂದಿನ ಫ್ರಾಂಚೈಸಿಗಳಲ್ಲಿ ರಿಟೆನ್ಷನ್ ಮೂಲಕ ಮುಂದುವರಿಯಲು ನಿರ್ಧರಿಸಿರಲಿಲ್ಲ. ಹರಾಜಿನಲ್ಲಿ ಶ್ರೇಯಸ್ ಅಯ್ಯರ್ 26.75 ಕೋಟಿ ರು ಪಡೆದರೆ, ರಿಷಭ್ ಪಂತ್ 27 ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದರು. ಇದೀಗ 40 ಕೋಟಿ ರು ಬೇಡಿಕೆಯ ಸಾಧ್ಯತೆ ಐಪಿಎಲ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

2028ರ ಐಪಿಎಲ್‌ ಟೂರ್ನಿಯ ವೇಳೆಗೆ ಫ್ರಾಂಚೈಸಿಗಳ ಪರ್ಸ್ ಹೆಚ್ಚಳ ಸಾಧ್ಯತೆ

ಮುಂದಿನ ಮೆಗಾ ಹರಾಜಿನ ವೇಳೆಗೆ ಐಪಿಎಲ್ ಫ್ರಾಂಚೈಸಿಗಳ ಖರೀದಿ ಮೊತ್ತದ ಮಿತಿ ಹೆಚ್ಚಾಗುವ ನಿರೀಕ್ಷೆಯಿದೆ. 2027ರ ಆವೃತ್ತಿಗೆ ಪ್ರಸ್ತುತ ಪರ್ಸ್ ಮೊತ್ತ 130 ಕೋಟಿ ರು ಆಗಿದೆ. ಮುಂದಿನ 2028ರ ವೇಳೆಗೆ ಈ ಮೊತ್ತವನ್ನು ಸುಮಾರು 150 ಕೋಟಿ ರು.ಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಆದರೆ ಈ ಹೆಚ್ಚಳದ ಕುರಿತು ಈವರೆಗೆ ಯಾವುದೇ ಅಧಿಕೃತ ಚರ್ಚೆ ನಡೆದಿಲ್ಲ ಎನ್ನಲಾಗಿದೆ.

ಒಬ್ಬ ಆಟಗಾರನಿಗೆ 40 ಕೋಟಿ ನೀಡಿದರೆ, ಫ್ರಾಂಚೈಸಿಯ ಒಟ್ಟು 150 ಕೋಟಿ ಪರ್ಸ್‌ನ ಶೇ.25ಕ್ಕಿಂತಲೂ ಹೆಚ್ಚಿನ ಮೊತ್ತ ಖರ್ಚಾಗಲಿದೆ. ಇದರಿಂದ ತಂಡದಲ್ಲಿರುವ ಇತರ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವುದು ಫ್ರಾಂಚೈಸಿಗಳಿಗೆ ಸವಾಲಾಗಬಹುದು.

IPL 2027: ಪಂಜಾಬ್‌ ಕಿಂಗ್ಸ್‌ಗೆ ಹಾರ್ದಿಕ್‌ ಪಾಂಡ್ಯ, ಮುಂಬೈ ಇಂಡಿಯನ್ಸ್‌ಗೆ ಅರ್ಷದೀಪ್‌ ಸಿಂಗ್‌?

ರಿಟೆನ್ಷನ್ ನಿಯಮಗಳು ಕೂಡ ನಿರ್ಣಾಯಕ

ಹಿಂದಿನ ಮೆಗಾ ಹರಾಜಿನ ಸಂದರ್ಭದಲ್ಲಿ ಬಿಸಿಸಿಐ ಆಟಗಾರರ ರಿಟೆನ್ಷನ್‌ಗೆ 18 ಕೋಟಿ, 14 ಕೋಟಿ ಹಾಗೂ 11 ಕೋಟಿ ಸೇರಿದಂತೆ ವಿವಿಧ ಸ್ಲ್ಯಾಬ್‌ಗಳನ್ನು ನಿಗದಿಪಡಿಸಿತ್ತು. ಆದರೆ ಫ್ರಾಂಚೈಸಿಗಳು ಆಟಗಾರರಿಗೆ ಈ ಮೊತ್ತಕ್ಕಿಂತ ಹೆಚ್ಚಿನ ಹಣ ಪಾವತಿಸಲು ಅವಕಾಶವಿತ್ತು. ಅಂತಹ ಸಂದರ್ಭದಲ್ಲಿ ಆಟಗಾರರಿಗೆ ನೀಡಿದ ನೈಜ ಮೊತ್ತವನ್ನೇ ತಂಡದ ಪರ್ಸ್‌ನಿಂದ ಕಡಿತಗೊಳಿಸಲಾಗುತ್ತಿತ್ತು.

ಐವರು ಆಟಗಾರರನ್ನು ಉಳಿಸಿಕೊಂಡರೆ ಕನಿಷ್ಠ 75 ಕೋಟಿ ಫ್ರಾಂಚೈಸಿಯ ಪರ್ಸ್‌ನಿಂದ ಕಡಿತವಾಗುತ್ತಿತ್ತು. ಆಟಗಾರರಿಗೆ ನೀಡುವ ಒಟ್ಟು ಮೊತ್ತ ಹೆಚ್ಚಾದರೆ ಕಡಿತವೂ ಹೆಚ್ಚಾಗುತ್ತಿತ್ತು. ಇನ್ನೊಂದೆಡೆ, ನೇರ ರಿಟೆನ್ಷನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಎಲ್ಲಾ ಆಟಗಾರರನ್ನು ಉಳಿಸಿಕೊಳ್ಳಲು ರೈಟ್ ಟು ಮ್ಯಾಚ್ (RTM) ಕಾರ್ಡ್‌ಗಳನ್ನು ಮಾತ್ರ ಬಳಸುವ ಪ್ರಸ್ತಾಪವೂ ಹಿಂದಿನ ಮೆಗಾ ಹರಾಜಿಗೂ ಮುನ್ನ ಚರ್ಚೆಗೆ ಬಂದಿತ್ತು.

ಆದರೆ ಈ ವ್ಯವಸ್ಥೆಯಲ್ಲಿ ಹರಾಜಿನ ವೇಳೆ ಆಟಗಾರರ ಬೆಲೆ ಅನಗತ್ಯವಾಗಿ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿತ್ತು. ಹೀಗಾಗಿ ಮುಂದಿನ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಯಾವ ರೀತಿಯ ರಿಟೆನ್ಷನ್ ನಿಯಮಗಳನ್ನು ಜಾರಿಗೆ ತರಲಿದೆ ಎಂಬುದು ಕುತೂಹಲ ಮೂಡಿಸಿದೆ.