ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಟೂರ್ನಿಯ (IPL 2027 Mini Auction) ಆಟಗಾರರ ರಿಟೆನ್ಷನ್ ಪ್ರಕಟಣೆಗೂ ಮುನ್ನ ರಾಜಸ್ಥಾನ್ ರಾಯಲ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ತಂಡಗಳ ನಡುವೆ ಮೂರು ಆಟಗಾರರ ನಡುವೆ ಟ್ರೇಡ್ ಡೀಲ್ ನಡೆದಿದೆ. ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ (Mohammed Shami) ಅವರನ್ನು ಲಖನೌ ತಂಡದಿಂದ ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ. ಮತ್ತೊಂದೆಡೆ, ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ (Sam Curran) ರಾಜಸ್ಥಾನ್ ತಂಡದಿಂದ ಲಖನೌ ತಂಡಕ್ಕೆ ವರ್ಗಾವಣೆಯಾಗಿದ್ದಾರೆ.
ಈ ಒಪ್ಪಂದದ ಪ್ರಕಾರ, ಮೊಹಮ್ಮದ್ ಶಮಿ 8 ಕೋಟಿ ರು. ಮೊತ್ತಕ್ಕೆ ರಾಜಸ್ಥಾನ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಹಿಂದೆ ಲಖನೌ ತಂಡ ಅವರನ್ನು 10 ಕೋಟಿ ರು.ಗೆ ಖರೀದಿಸಿತ್ತು. ಇದೀಗ ಕಡಿಮೆ ಬೆಲೆಗೆ ರಾಜಸ್ಥಾನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 35ರ ವಯಸ್ಸಿನ ಶಮಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಏಳನೇ ಫ್ರಾಂಚೈಸಿ ಪರ ಆಡಲು ಸಜ್ಜಾಗಿದ್ದಾರೆ.
ಶಮಿ ಇದುವರೆಗೆ 132 ಐಪಿಎಲ್ ಪಂದ್ಯಗಳನ್ನಾಡಿದ್ದು, 145 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿರುವ ಅನುಭವಿ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ರಾಜಸ್ಥಾನ್ ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಂಡಿದೆ.
IPL 2027: ಯಾರಿಂದಲೂ ಮುರಿಯಲಾಗದ ಎಂಎಸ್ ಧೋನಿಯ ಸಿಎಸ್ಕೆ ನಾಯಕತ್ವದ ದಾಖಲೆಗಳು!
ಶಮಿ ಜೊತೆಗೆ ಸಿದ್ಧಾರ್ಥ್ ಕೂಡ ರಾಜಸ್ಥಾನ್ಗೆ
ಈ ಆಟಗಾರರ ವಿನಿಮಯದಲ್ಲಿ ಎಡಗೈ ಸ್ಪಿನ್ನರ್ ಎಂ. ಸಿದ್ಧಾರ್ಥ್ ಕೂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಲಿದ್ದಾರೆ. ಲಖನೌದಿಂದ ವರ್ಗಾವಣೆಯಾಗಿರುವ ಅವರು ತಮ್ಮ ಹಿಂದಿನ 75 ಲಕ್ಷ ರೂ. ಸಂಭಾವನೆಯಲ್ಲೇ ರಾಜಸ್ಥಾನ್ ಪರ ಆಡಲಿದ್ದಾರೆ.
ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು ಲಖನೌ ಸೂಪರ್ ಜಯಂಟ್ಸ್ ತಂಡ ಪಡೆದುಕೊಂಡಿದೆ. ಕರನ್ ಕೂಡ ತಮ್ಮ ಹಿಂದಿನ 2.4 ಕೋಟಿ ರೂ. ಸಂಭಾವನೆಯಲ್ಲೇ ಲಖನೌ ತಂಡದ ಪರ ಆಡಲಿದ್ದಾರೆ.
2026ರ ಐಪಿಎಲ್ ಟೂರ್ನಿಯಲ್ಲಿ ಆಡದಿದ್ದ ಕರನ್
ಸ್ಯಾಮ್ ಕರನ್ ಅವರ ವರ್ಗಾವಣೆ ಕೂಡ ಸಾಕಷ್ಟು ಗಮನ ಸೆಳೆದಿದೆ. 2026ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ತಂಡ ಅವರನ್ನು 2.4 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ತೊಡೆಸಂದು ಗಾಯದ ಕಾರಣ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದರು. ಅವರ ಬದಲಿಗೆ ಶ್ರೀಲಂಕಾದ ದಸೂನ್ ಶಣಕ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ, ಐಪಿಎಲ್ ಟೂರ್ನಿ ಮುಗಿಯುವ ಮೊದಲೇ ಕರನ್ ಸರ್ರೆ ತಂಡದ ಪರ ವೈಟಾಲಿಟಿ ಬ್ಲಾಸ್ಟ್ ಟೂರ್ನಿಯಲ್ಲಿ ಆಡಲು ಮರಳಿದ್ದು ರಾಜಸ್ಥಾನ್ ತಂಡದ ಅಸಮಾಧಾನಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜಸ್ಥಾನ್ ತಂಡದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ, "ಸ್ಯಾಮ್ ಕರನ್ ಅವರಿಗೆ ಋತುವಿನ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂಬ ಮಾಹಿತಿ ನಮಗೆ ನೀಡಲಾಗಿತ್ತು. ಆದರೆ ಅವರು ಸರ್ರೆ ಪರ ಎರಡು ಅಥವಾ ಮೂರು ಪಂದ್ಯಗಳನ್ನು ಆಡಿದ್ದನ್ನು ನಾನು ನೋಡಿದೆ. ಇದು ನಿರಾಶಾದಾಯಕವಾಗಿತ್ತು. ಅವರು ನಮ್ಮ ತಂಡದ ಪರ ಆಡಬೇಕೆಂದು ನಾವು ಬಯಸಿದ್ದೆವು," ಎಂದು ಹೇಳಿದ್ದರು.
ಕರನ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 997 ರನ್ ಗಳಿಸಿದ್ದು, 59 ವಿಕೆಟ್ಗಳನ್ನು ಪಡೆದಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರುವ ಅವರು ಲಕ್ನೋ ತಂಡಕ್ಕೆ ಉಪಯುಕ್ತ ಆಟಗಾರನಾಗಲಿದ್ದಾರೆ.