ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻ20ನೇ ಆವೃತ್ತಿಗೆ ನಾನು ರೆಡಿʼ: ಮುಂಬೈ ಇಂಡಿಯನ್ಸ್‌ ನಾಯಕತ್ವಕ್ಕೆ ಮರಳಿದ ಬಳಿಕ ರೋಹಿತ್‌ ಶರ್ಮಾ ಹೇಳಿದ್ದಿದು!

ಸತತ ಮೂರು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್‌ ನಾಯಕತ್ವದಿಂದ ದೂರ ಉಳಿದಿದ್ದ ಹಿರಿಯ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ, ಇದೀಗ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಐದು ಬಾರಿ ಚಾಂಪಿಯನ್ಸ್‌ ತಂಡದ ನಾಯಕತ್ವಕ್ಕೆ ಮರಳಿದ್ದಾರೆ. ಈ ಬಗ್ಗೆ ಮುಂಬೈ ಫ್ರಾಂಚೈಸಿ ತನ್ನ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಮಾಹಿತಿ ನೀಡಿದೆ.

ಮುಂಬೈ ಇಂಡಿಯನ್ಸ್‌ ನಾಯಕತ್ವಕ್ಕೆ ಮರಳಿದ ಬಳಿಕ ರೋಹಿತ್‌ ಶರ್ಮಾ ಹೇಳಿಕೆ.

ನವದೆಹಲಿ: ಮುಂಬರುವ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಯ ನಿಮಿತ್ತ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವಕ್ಕೆ ರೋಹಿತ್‌ ಶರ್ಮಾ (Rohit Sharma) ಮರಳಿದ್ದಾರೆ. ಈ ಬಗ್ಗೆ ಮುಂಬೈ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದೆ. ಇದರ ಬೆನ್ನಲ್ಲೆ ಮೂರು ವರ್ಷಗಳ ಬಳಿಕ ನಾಯಕತ್ವಕ್ಕೆ ಮರಳಿದ ರೋಹಿತ್‌ ಶರ್ಮಾ, ಇಪ್ಪತ್ತನೇ ಆವೃತ್ತಿಯಲ್ಲಿ ಐದು ಬಾರಿ ಚಾಂಪಿಯನ್ಸ್‌ ತಂಡವನ್ನು ಮುನ್ನಡೆಸಲು ತಾನು ಸಿದ್ದ ಎಂದು ಹೇಳಿದ್ದಾರೆ. ಅಲ್ಲದೆ ಇನ್ನೂ ಹಲವು ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ.

2023ರ ಐಪಿಎಲ್‌ ಟೂರ್ನಿಯ ಬಳಿಕ ಮುಂಬೈ ಇಂಡಿಯನ್ಸ್‌ ನಾಯಕತ್ವದಿಂದ ರೋಹಿತ್‌ ಶರ್ಮಾ ಅವರನ್ನು ತೆಗೆದು, ಗುಜರಾತ್‌ ಟೈಟನ್ಸ್‌ನಿಂದ ಕರೆಸಿಕೊಂಡಿದ್ದ ಹಾರ್ದಿಕ್‌ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿತ್ತು. 2024, 2025 ಹಾಗೂ 2026ರ ಟೂರ್ನಿಗಳಲ್ಲಿ ಮುಂಬೈ ಇಂಡಿಯನ್ಸ್‌, ಹಾರ್ದಿಕ್‌ ಸಾರಥ್ಯದಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿವ ವಿಫಲವಾಗಿತ್ತು. ಹಾಗಾಗಿ ಪಂಜಾಬ್‌ ಕಿಂಗ್ಸ್‌ ಜತೆ ಟ್ರೇಡ್‌ ಡೀಲ್‌ ಮೂಲಕ ಮುಂಬೈ ಫ್ರಾಂಚೈಸಿ, ಹಾರ್ದಿಕ್‌ ಪಾಂಡ್ಯ ಅವರನ್ನು ಕೊಟ್ಟು, ಯುವ ವೇಗಿ ಅರ್ಷದೀಪ್‌ ಸಿಂಗ್‌ ಅವರನ್ನು ಕರೆಸಿಕೊಂಡಿತು.

IPL 2027: ಮುಂಬೈ ಇಂಡಿಯನ್ಸ್‌ ನಾಯಕತ್ವಕ್ಕೆ ಮರಳಿದ ರೋಹಿತ್‌ ಶರ್ಮಾ, ಖಚಿತಪಡಿಸಿದ ಫ್ರಾಂಚೈಸಿ!

ರೋಹಿತ್‌ ಶರ್ಮಾ ಹೇಳಿದ್ದೇನು?

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವಕ್ಕೆ ಮರಳಿರುವ ಬಗ್ಗೆ ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ತಂಡದೊಂದಿಗಿನ ತಮ್ಮ ಬಾಂಧವ್ಯ ಹಾಗೂ ನಾಯಕತ್ವದ ಜವಾಬ್ದಾರಿಯ ಬಗ್ಗೆ ಮಾತನಾಡಿರುವ ಅವರು, ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ತಂಡದ ಯಶಸ್ಸಿಗಾಗಿ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



"ಮುಂಬೈ ಇಂಡಿಯನ್ಸ್ ನನ್ನ ಜೀವನದ ಬಹುದೊಡ್ಡ ಭಾಗವಾಗಿದೆ. ಈ ತಂಡವನ್ನು ಮುನ್ನಡೆಸುವುದು ಯಾವಾಗಲೂ ನನಗೆ ಹೆಮ್ಮೆಯ ಸಂಗತಿಯಾಗಿದೆ. ಮುಂಬರುವ ಆವೃತ್ತಿಯ ಕುರಿತು ನೀತಾ ಭಾಭಿ ಮತ್ತು ಆಕಾಶ್ ಅವರೊಂದಿಗೆ ನಡೆಸಿದ ಮಾತುಕತೆಗಳು ಉತ್ಸಾಹ ಮೂಡಿಸಿವೆ. ನಾವು ಏನನ್ನು ಸಾಧಿಸಬಹುದು ಎಂಬುದರ ಬಗ್ಗೆ ನನಗೆ ಸಾಕಷ್ಟು ವಿಶ್ವಾಸವಿದೆ," ಎಂದು ರೋಹಿತ್ ಹೇಳಿಕೆ ನೀಡಿದ್ದಾರೆ.

"ಐಪಿಎಲ್‌ನ 20ನೇ ಆವೃತ್ತಿಗೆ ನಾನು ಸಿದ್ಧನಾಗಿದ್ದೇನೆ. ಮುಂದಿರುವ ಸವಾಲುಗಳನ್ನು ಎದುರಿಸಲು ಉತ್ಸುಕನಾಗಿದ್ದೇನೆ. ನಮ್ಮ ಅಭಿಮಾನಿಗಳಾದ 'ಪಲ್ಟನ್' ಸಂಭ್ರಮಿಸುವಂತಹ ಹಲವು ಕ್ಷಣಗಳನ್ನು ನೀಡುವುದು ನನ್ನ ಗುರಿಯಾಗಿದೆ. ನಮ್ಮದೇ ಶೈಲಿಯ ಕ್ರಿಕೆಟ್ ಆಡುವುದು, ತಂಡವಾಗಿ ಒಗ್ಗಟ್ಟಿನಿಂದ ಸ್ಪರ್ಧಿಸುವುದು ಮತ್ತು ಆಟವನ್ನು ಆನಂದಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿರಲಿದೆ," ಎಂದು ಅವರು ತಿಳಿಸಿದ್ದಾರೆ.



ರೋಹಿತ್ ನಾಯಕತ್ವಕ್ಕೆ ಮರಳಿರುವುದಕ್ಕೆ ಆಕಾಶ್ ಅಂಬಾನಿ ಸಂತಸ

ಐಪಿಎಲ್‌ನ 20ನೇ ಆವೃತ್ತಿಗೂ ಮುನ್ನ ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿರುವುದಕ್ಕೆ ಫ್ರಾಂಚೈಸಿಯ ಮಾಲೀಕ ಆಕಾಶ್ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ. ರೋಹಿತ್ ಅವರ ಅನುಭವ ಮತ್ತು ನಾಯಕತ್ವದ ಗುಣಗಳು ತಂಡಕ್ಕೆ ಮತ್ತಷ್ಟು ಬಲ ನೀಡಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಆಕಾಶ್ ಅಂಬಾನಿ, “ಮುಂಬೈ ಇಂಡಿಯನ್ಸ್‌ನ ಐತಿಹಾಸಿಕ 20ನೇ ಆವೃತ್ತಿಯಲ್ಲಿ ಬ್ಲೂ ಆ್ಯಂಡ್ ಗೋಲ್ಡ್ ತಂಡವನ್ನು ರೋಹಿತ್ ಮುನ್ನಡೆಸಲಿರುವುದು ನನಗೆ ಬಹಳ ಸಂತಸ ತಂದಿದೆ. ರೋಹಿತ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಬಾಂಧವ್ಯ ನಿಜಕ್ಕೂ ವಿಶೇಷವಾದದ್ದು. ಮುಂಬರುವ ಆವೃತ್ತಿಯ ಕುರಿತು ನಾವು ನಡೆಸಿದ ಮಾತುಕತೆಗಳಲ್ಲಿ ಒಟ್ಟಾಗಿ ಸಾಧಿಸಬಹುದಾದ ಗುರಿಗಳ ಬಗ್ಗೆ ಉತ್ಸಾಹ ಮತ್ತು ಮಹತ್ವಾಕಾಂಕ್ಷೆ ಎರಡೂ ವ್ಯಕ್ತವಾಗಿವೆ,” ಎಂದಿದ್ದಾರೆ.

“ರೋಹಿತ್ ಅವರ ಅನುಭವ ಮತ್ತು ನಾಯಕತ್ವದ ಜೊತೆಗೆ ನಾವು ರೂಪಿಸುತ್ತಿರುವ ಬಲಿಷ್ಠ ತಂಡದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ನಮ್ಮ ಪಲ್ಟನ್ ಅಭಿಮಾನಿಗಳು ಹೆಮ್ಮೆಪಡುವಂತಹ ಕ್ರಿಕೆಟ್ ಆಡಬೇಕು ಮತ್ತು ಅವರೊಂದಿಗೆ ಇನ್ನಷ್ಟು ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಬೇಕು ಎಂಬುದು ನಮ್ಮ ಆಶಯ,” ಎಂದು ಅವರು ತಿಳಿಸಿದ್ದಾರೆ.