ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ (M Chinnaswamy Stadium) ಕ್ರೀಡಾಂಗಣಕ್ಕೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಹಾಗೂ ಪ್ಲೇಆಫ್ಸ್ ಪಂದ್ಯಗಳ ಆತಿಥ್ಯ ಕೈತಪ್ಪಿದೆ. ಎಂಎಲ್‌ಎಗಳಿಗೆ ಉಚಿತ ಟಿಕೆಟ್ ವಿತರಣೆ ವ್ಯಾಮೋಹದಿಂದಾಗಿ ಬೆಂಗಳೂರಿಗೆ ಫೈನಲ್ ಪಂದ್ಯದ ಆತಿಥ್ಯ ಕೈತಪ್ಪಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಐಪಿ ಪಾಸ್‌ಗಳ ಹಪಾಹಪಿ ಹಾಗೂ ಶಾಸಕರ ಉಚಿತ ಟಿಕೆಟ್ ವ್ಯಾಮೋಹದಿಂದಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ಗುಜರಾತ್‌ನ ಅಹಮದಾಬಾದ್ ಪಾಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಮ್ಮ ರಾಜ್ಯದ ನಾಯಕರಿಗೆ 'ಅಭಿನಂದನೆಗಳು'! ಕೇವಲ ತಮ್ಮ ವಿವಿಐಪಿ ಪಾಸ್‌ಗಳ ಹಪಾಹಪಿಯಿಂದಾಗಿ, ನಮ್ಮೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಉಡುಗೊರೆಯಾಗಿ ನೀಡಿದ್ದೀರಿ, ಎಂದು ಅವರು ವ್ಯಂಗ್ಯವಾಡಿದರು.
IPL 2026: ಬೆಂಗಳೂರಿಗೆ ಫೈನಲ್ ಪಂದ್ಯದ ಆತಿಥ್ಯ ಕೈ ತಪ್ಪಿದ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ!
ನಾನು ಅಂದೇ ಹೇಳಿದ್ದೆ, ಇಂದೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ, ಕ್ರೀಡಾಂಗಣವಿರುವುದು ಕ್ರಿಕೆಟ್ ಅಭಿಮಾನಿಗಳಿಗಾಗಿ ಹೊರತು ವಿಐಪಿಗಳಿಗಾಗಿ ಅಲ್ಲ. ನಮ್ಮ ಕೆಲವು ಶಾಸಕರ ಉಚಿತ ಟಿಕೆಟ್ ವ್ಯಾಮೋಹದಿಂದಾಗಿ ಇಂದು ಐಪಿಎಲ್ ಫೈನಲ್ ಬೆಂಗಳೂರಿನಿಂದ ಕೈತಪ್ಪಿ ಹೋಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬಿಸಿಸಿಐನ ನಿರ್ಧಾರವನ್ನು ಉಲ್ಲೇಖಿಸಿದ ನಿಖಿಲ್ ಕುಮಾರಸ್ವಾಮಿ ಅವರು ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರ ನಮ್ಮ ಸರ್ಕಾರಕ್ಕೆ ಒಂದು ಎಚ್ಚರಿಕೆ ಗಂಟೆಯಾಗಲಿ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಮ್ಮ ವೈಯಕ್ತಿಕ ಟಿಕೆಟ್ ಕೌಂಟರ್ ಮಾಡಿಕೊಂಡವರ ಬೇಜವಾಬ್ದಾರಿ ವರ್ತನೆಯಿಂದಾಗಿ, ಇಂದು ನಾವು ಕೇವಲ ಒಂದು ಪಂದ್ಯವನ್ನಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಘನತೆಯನ್ನೂ ಕಳೆದುಕೊಂಡಿದ್ದೇವೆ, ಎಂದು ಆಕ್ರೋಶ ಹೊರಹಾಕಿದರು.
ಕ್ರಿಕೆಟ್ ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿರುವ ಸರ್ಕಾರದ ನಡೆಯನ್ನು ನಿಖಿಲ್ ಕುಮಾರಸ್ವಾಮಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಎಂ ಚಿನ್ನಸ್ವಾಮಿ ಬದಲು ನರೇಂದ್ರ ಮೋದಿ ಸ್ಟೇಡಿಯಂ ಆಯ್ಕೆ ಯಾಕೆ?
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,30,000 ಆಸನಗಳ ವ್ಯವಸ್ಥೆ ಹೊಂದಿದೆ. ಹಾಗಾಗಿ ಹೆಚ್ಚಿನ ಜನಸಂದಣಿಯನ್ನು ನಿರ್ವಹಿಸಲು ಸುಲಭವಾಗುವುದು ಹಾಗೂ ಭದ್ರತಾ ವ್ಯವಸ್ಥೆಯನ್ನು ಸುಗಮಗೊಳಿಸಲು ಸಾಧ್ಯವಾಗುವುದು ಈ ನಿರ್ಧಾರದ ಪ್ರಮುಖ ಕಾರಣಗಳಾಗಿವೆ ಎಂದು ಅಂದಾಜಿಸಬಹುದು. ಇನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಆಸನಗಳ ಸಾಮರ್ಥ್ಯ ಸೀಮಿತವಾಗಿದ್ದು, ಭಾರಿ ಬೇಡಿಕೆಯನ್ನು ಪೂರೈಸಲು ಅಸಾಧ್ಯವಾಗಿತ್ತು. ಇಲ್ಲಿ 30,000 ಆಸನಗಳು ಮಾತ್ರ ಇವೆ.