ಚಂಡೀಗಢ: ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ನಾಯಕ ಇಶಾನ್ ಕಿಶನ್ (Ishan Kishan) ಬೇಸರ ವ್ಯಕ್ತಪಡಿಸಿದರು ಹಾಗೂ ನಾವು 250 ರನ್‌ಗಳನ್ನು ಕಲೆ ಹಾಕಬಹುದಾದ ಅವಕಾಶವನ್ನು ಕಳೆದುಕೊಂಡೆವು ಎಂದು ಹೇಳಿದ್ದಾರೆ. ಅಲ್ಲದೆ ನಮಗೆ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುಲ್ಲಿ ವಿಫಲವಾಗಿದ್ದೇವೆ ಎಂದು ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡ 6 ವಿಕೆಟ್‌ಗಳ ಗೆಲುವು ಪಡೆಯುವ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.
ಶನಿವಾರ ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಚನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಪವರ್‌ಪ್ಲೇನಲ್ಲಿ 105 ರನ್‌ಗಳನ್ನು ಕಲೆ ಹಾಕಿತ್ತು. ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಹೈದರಾಬಾದ್ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, ಈ ಇಬ್ಬರೂ ವಿಕೆಟ್ ಒಪ್ಪಿಸಿದ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲವಾದ ಕಾರಣ, ಎಸ್‌ಆರ್‌ಎಚ್ ತಂಡ, 219 ರನ್‌ಗಳಿಗೆ ಸೀಮಿತವಾಗಿತ್ತು. ಇದರ ಶ್ರೇಯ ಪಂಜಾಬ್ ಕಿಂಗ್ಸ್ ಬೌಲರ್‌ಗಳಿಗೆ ಸಲ್ಲಬೇಕು.
PBKS vs SRH: ಶ್ರೇಯಸ್ ಅಯ್ಯರ್ ನಾಯಕನ ಆಟದಿಂದ ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್!
ಬಳಿಕ ಗುರಿಯನ್ನು ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತಂಡ, ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರನ್ ಹಾಗೂ ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ಬಲದಿಂದ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗೆದ್ದು ಬೀಗಿತು. ಅಂದ ಹಾಗೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಇದು ಮೂರನೇ ಸೋಲಾಯಿತು. ಪಂದ್ಯದ ಬಳಿಕ ಇಶಾನ್ ಕಿಶನ್, ಎಸ್‌ಆರ್‌ಎಚ್ ಸೋಲಿಗೆ ಪ್ರಮುಖ ಕಾರಣವೇನೆಂದು ರಿವೀಲ್ ಮಾಡಿದ್ದಾರೆ.
ಎಸ್‌ಆರ್‌ಎಚ್ ಸೋಲಿನ ಬಗ್ಗೆ ಇಶಾನ್ ಕಿಶನ್ ಹೇಳಿದ್ದೇನು?
“ನಾವು ಪಡೆದ ಆರಂಭವನ್ನು ಗಮನಿಸಿದರೆ, ಮಧ್ಯದ ಓವರ್‌ಗಳಲ್ಲಿ ಕನಿಷ್ಠ 250 ರನ್‌ಗಳಷ್ಟು ಮೊತ್ತವನ್ನು ತಲುಪಬಹುದಿತ್ತು. ಆದರೆ ಕೆಲವೊಮ್ಮೆ ವಿಷಯಗಳು ನಮ್ಮ ಪರ ನಡೆಯುವುದಿಲ್ಲ. ಅಂತಿಮವಾಗಿ ಆ ರನ್‌ಗಳನ್ನು ನಾವು ಗಳಿಸಲಿಲ್ಲ,” ಎಂದು ಇಶಾನ್ ಕಿಶನ್ ಪಂದ್ಯದನಂತರ ಹೇಳಿದ್ದಾರೆ.
ಗಾಯದಿಂದ ಗುಣಮುಖರಾಗಿ ಐಪಿಎಲ್‌ಗೆ ಕಮ್‌ಬ್ಯಾಕ್ ಮಾಡಿದ್ದೇಗೆಂದು ತಿಳಿಸಿದ ಟಿ ನಟರಾಜನ್!
ಸನ್‌ರೈಸರ್ಸ್ ಹೈದರಾಬಾದ್ ತಂಡ ಡೆತ್ ಓವರ್‌ಗಳಲ್ಲಿ ಕುಸಿತ ಕಂಡಿತ್ತು, ಇಲ್ಲಿ ಅವರು ಕೇವಲ 37 ರನ್ ಗಳಿಸಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದಾಗಿ ಪಂಜಾಬ್ ಕಿಂಗ್ಸ್ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಿತು.
“ನಾವು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಅಷ್ಟಾಗಿ ಉತ್ತಮವಾಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಮೊದಲು ಹೇಳಿದಂತೆ, ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಮುಖ್ಯವಾದುದು ನಿಮ್ಮ ಉತ್ತಮ ಎಸೆತಗಳನ್ನು ಸರಿಯಾಗಿ ಕಾರ್ಯಗತಗೊಳಿಸುವುದು. ಇಂದು ನಾವು ಇದನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದೇವೆ,” ಎಂದು ಇಶಾನ್ ಕಿಶನ್ ಬೇಸರ ವ್ಯಕ್ತಪಡಿಸಿದ್ದಾರೆ.