ಕೊಲಂಬೊ: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2206) ಟೂರ್ನಿಯ ಪಂದ್ಯದಲ್ಲಿ ಜಿಂಬಾಬ್ವೆ ತಂಡ 23 ರನ್‌ಗಳ ಗೆಲುವು ಪಡೆಯಿತು. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆದಿತ್ತು. ಇದರ ಬೆನ್ನಲ್ಲೆ ಪಾಕಿಸ್ತಾನ ತಂಡದ ಮಾಜಿ ನಾಯಕ ಮೊಹಮ್ಮದ್ ಯೂಸಫ್ (Mohammad Yousaf), ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಂದ್ಯದ ದಿನ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ನಡುವಣ ಪಂದ್ಯ ಸಾಕ್ಷಿ ಎಂದಿದ್ದಾರೆ. ಅಂದಹಾಗೆ ಸಾಂಪ್ರದಾಯಿಕ ಎದುರಾಳಿಗಳ ನಡುವಣ ಈ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 15 ರಂದು, ಕೊಲಂಬೊದಲ್ಲಿ ನಡೆಯಲಿದೆ.
ಜಿಂಬಾಬ್ವೆಯ ಗೆಲುವಿನ ನಂತರ ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಯೂಸಫ್ ಭಾರತದ ಸೋಲಿನ ಕನಸು ಕಾಣಲು ಪ್ರಾರಂಭಿಸಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. "ತನ್ನ ಅನೇಕ ಹಿರಿಯ ಸ್ಟಾರ್ ಆಟಗಾರರ ಕೊರತೆಯಿರುವ ಮತ್ತು ತುಂಬಾ ಯುವ ತಂಡವನ್ನು ಕಣಕ್ಕಿಳಿಸಿದ ಆಸ್ಟ್ರೇಲಿಯಾ ತಂಡವನ್ನು ಜಿಂಬಾಬ್ವೆ ಮಣಿಸಿದೆ. ಆತ್ಮವಿಶ್ವಾಸ ಮತ್ತು ಸರಿಯಾದ ಪ್ರದರ್ಶನದೊಂದಿಗೆ, ಉನ್ನತ ತಂಡಗಳನ್ನು ಸಹ ಸೋಲಿಸಬಹುದು ಎಂದು ಇದು ಸಾಬೀತುಪಡಿಸುತ್ತದೆ. ಪಾಕಿಸ್ತಾನವು ಅದೇ ಉತ್ಸಾಹವನ್ನು ತೋರಿಸಿ ಭಾರತವನ್ನು ಸೋಲಿಸಬಹುದೇ? ಕಾಗದದ ಮೇಲಿನ ಅಂಕಿಅಂಶಗಳ ಆಧಾರದ ಮೇಲೆ ಪಂದ್ಯವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ; ಅವುಗಳನ್ನು ಮೈದಾನದಲ್ಲಿ ಅಂದಿನ ದಿನ ಗೆಲ್ಲಬೇಕು," ಎಂದು ಮೊಹಮ್ಮದ್ ಯೂಸಫ್ ಪೋಸ್ಟ್ ಹಾಕಿ ಭಾರತ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
IND vs PAK: ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಖ್‌ಗೆ ಕೌಂಟರ್ ನೀಡುವುದೇಗೆಂದು ಸಲಹೆ ನೀಡಿದ ಆರ್ ಅಶ್ವಿನ್!
ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ, ಭಾರತ ತಂಡವನ್ನು ಒಮ್ಮೆ ಮಾತ್ರ ಸೋಲಿಸಿದೆ. 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಪಾಕ್ ಸೋಲಿಸಿತ್ತು. ಪಾಕಿಸ್ತಾನ ಕೊನೆಯ ಬಾರಿ 2022ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತವನ್ನು ಮಣಿಸಿತ್ತು. ಅಂದಿನಿಂದ, ಎರಡೂ ತಂಡಗಳು ಒಂಬತ್ತು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಎಂಟು ಪಂದ್ಯಗಳನ್ನು ಗೆದ್ದರೆ, ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಈ ಎಂಟು ಪಂದ್ಯಗಳಲ್ಲಿ ಐದು ಟಿ20ಐ ಪಂದ್ಯಗಳಾಗಿವೆ. ಕಳೆದ ವರ್ಷ, ಭಾರತ, ಏಷ್ಯಾಕಪ್ ಟೂರ್ನಿಯಲ್ಲಿ ಮೂರು ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು.
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಉತ್ತಮ ಆರಂಭವನ್ನು ಪಡೆದಿವೆ. ಭಾರತ ತನ್ನ ಎರಡೂ ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೂಡ ತನ್ನ ಎರಡೂ ಪಂದ್ಯಗಳನ್ನು ಗೆದ್ದಿದೆ. ಆದಾಗ್ಯೂ, ಈ ವಿಶ್ವಕಪ್ ತಂಡಗಳ ನಡುವೆ ತೀವ್ರ ಪೈಪೋಟಿಗೆ ಸಾಕ್ಷಿಯಾಗುತ್ತಿದೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ
ಇಶಾನ್ ಕಿಶನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ, ಕುಲ್‌ದೀಪ್ ಯಾದವ್, ಸಂಜು ಸಂದರ್, ವಾಷಿಂಗ್ಟನ್, ವಾಷಿಂಗ್ಟನ್ ಸುಂದರ್