ನವದೆಹಲಿ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರುವ ಮೂಲಕ ಭಾರತ ಮಹಿಳಾ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ(INDW vs ENGW) ಇಂಗ್ಲೆಂಡ್ ಎದುರು 38 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಮಹಿಳಾ ಟಿ20ಐ ಸರಣಿಯಲ್ಲಿ ಪ್ರವಾಸಿ ಭಾರತ ತಂಡ 1-0 ಮುನ್ನಡೆಯನ್ನು ಪಡೆದಿದೆ. ಇದರ ಶ್ರೇಯ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ ಜೆಮಿಮಾ ರೊಡ್ರಿಗಸ್ (Jemimah Rodrigues) ಹಾಗೂ ಯಾಸ್ತಿಕಾ ಭಾಟಿಯಾ ಮತ್ತು ಬೌಲಿಂಗ್ ಗಮನ ಸೆಳೆದ ನಂದಿನಿ ಶರ್ಮಾ (Nandni Sharma) ಅವರಿಗೆ ಸಲ್ಲಬೇಕು.
ಚೆಲ್ಮ್ಸ್‌ಫೋರ್ಡ್‌ನ ಕೌಟಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ, ಜೆಮಿಮಾ ರೊಡ್ರಿಗಸ್ ಹಾಗೂ ಯಾಸ್ತಿಕಾ ಭಾಟಿಯಾ ಅವರ 126 ರನ್‌ಗಳ ಭರ್ಜರಿ ಜೊತೆಯಾಟದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 188 ರನ್‌ಗಳನ್ನು ಕಲೆ ಹಾಕಿತು. ಅಂದ ಹಾಗೆ ಪ್ರವಾಸಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಪಂದ್ಯದ ಮೊದಲನೇ ಓವರ್‌ನಲ್ಲಿ ಲಾರೆನ್ ಬೆಲ್ ಅವರು ತಮ್ಮ ಮಾರಕ ಬೌಲಿಂಗ್ ಮೂಲಕ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನಾ ಅವರನ್ನು ಔಟ್ ಮಾಡಿದ್ದರು. ಆದರೆ, ಎರಡನೇ ಓವರ್‌ನಲ್ಲಿ ಯಾಸ್ತಿಕಾ ಭಾಟಿಯಾ ಅವರು ಇಸ್ಸಿ ವಾಂಗ್‌ಗೆ 27 ರನ್ ಸಿಡಿಸುವ ಮೂಲಕ ಭಾರತ ತಂಡದ ಕಮ್‌ಬ್ಯಾಕ್‌ಗೆ ನೆರವು ನೀಡಿದರು.
ದೇಶಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕರ್ನಾಟಕದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್
ಅದರಲ್ಲಿಯೂ ವಿಶೇಷವಾಗಿ ಜೆಮಿಮಾ ರೊಡ್ರಿಗಸ್ ಅವರು ಗುಣಮಟ್ಟದ ಇನಿಂಗ್ಸ್ ಆಡಿದರು. ಅವರು 40 ಎಸೆತಗಳಲ್ಲಿ 69 ರನ್‌ಗಳನ್ನು ಗಳಿಸಿದರು ಹಾಗೂ ತಮ್ಮ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಹಾಗೂ 10 ಮನಮೋಹಕ ಬೌಂಡರಿಗಳನ್ನು ಬಾರಿಸಿದರು. ಎರಡು ವರ್ಷಗಳ ಬಳಿಕ ಟಿ20ಐ ಕ್ರಿಕೆಟ್‌ಗೆ ಮರಳಿದ ಯಾಸ್ತಿಕಾ, 40 ಎಸೆತಗಳಲ್ಲಿ 54 ರನ್ ಗಳಿಸಿದರು. ಕೊನೆಯ ಹಂತದಲ್ಲಿ ದೀಪ್ತಿ ಶರ್ಮಾ 13 ಎಸೆತಗಳಲ್ಲಿ 22 ರನ್ ಗಳಿಸಿ ತಂಡದ ಮೊತ್ತವನ್ನು 190ಕ್ಕೆ ತಲುಪಿಸಿದರು.
ಲಾರೆನ್ ಬೆಲ್ ಹಾಗೂ ಸೋಫಿ ಡಿವೈನ್ ಒಳಗೊಂಡ ಇಂಗ್ಲೆಂಡ್ ಬೌಲಿಂಗ್ ದಾಳಿ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದರೂ ಮಧ್ಯಮ ಕ್ರಮಾಂಕದಲ್ಲಿ ರೊಡ್ರಿಗಸ್ ಹಾಗೂ ಯಾಸ್ತಿಕಾ ಅವರನ್ನು ಕಟ್ಟಿ ಹಾಕಲು ಸಾಧ್ಯವಾಗಿಲ್ಲ. ಅದರಲ್ಲಿಯೂ ಫೀಲ್ಡಿಂಗ್ ವೈಫಲ್ಯತೆಯಿಂದಾಗಿ ಪ್ರವಾಸಿ ತಂಡಕ್ಕೆ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿತು.
GT vs RR; ಇಂದಿನ ಐಪಿಎಲ್ ಕ್ವಾಲಿಫೈಯರ್ 2 ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ?
ಬೌಲಿಂಗ್‌ನಲ್ಲಿ ಮಿಂಚಿದ ನಂದಿನಿ ಶರ್ಮಾ
ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡ ಸಕಾರಾತ್ಮಕವಾಗಿ ಆರಂಭ ಪಡೆದರೂ ಭಾರತದ ಬೌಲರ್‌ಗಳ ನಿರಂತರ ಒತ್ತಡದಿಂದ ಆವೇಗವನ್ನು ಕಳೆದುಕೊಂಡಿತು. ಡೆಬ್ಯೂಟಂಟ್ ನಂದಿನಿ ಶರ್ಮಾ ಬೌಲಿಂಗ್‌ನಲ್ಲಿ ಗಮನ ಸೆಳೆದು (4-0-32-3) ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗವನ್ನು ಕಟ್ಟಿ ಹಾಕಿದರು. ಆ ಮೂಲಕ ಭಾರತದ ಪರ ಟಿ20ಐ ಮಹಿಳಾ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಮಾಡಿದ ದಾಖಲೆಯನ್ನು ಬರೆದರು.
ಇಂಗ್ಲೆಂಡ್ ಪರ ಒಂದು ಹಂತದಲ್ಲಿ ಗಟ್ಟಿಯಾಗಿ ನಿಂತು 67 ರನ್ ಗಳಿಸಿದ ಎಮಿ ಜೋನ್ಸ್‌ಗೆ ಮತ್ತೊಂದು ತುದಿಯಲ್ಲಿ ಯಾರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಜೊತೆಯಾಟವಾಡುವಲ್ಲಿ ಇಂಗ್ಲೆಂಡ್ ವೈಫಲ್ಯ ಅನುಭವಿಸಿತು ಹಾಗೂ ಮಧ್ಯಮ ಓವರ್‌ಗಳಲ್ಲಿ ಭಾರತೀಯ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದರು. ಮಾಜಿ ನಾಯಕಿ ಹೀದರ್ ನೈಟ್ 24 ಎಸೆತಗಳಲ್ಲಿ 21 ರನ್ ಗಳಿಸಿದ ಬಳಿಕ ಶ್ರೀ ಚರಣಿಗೆ ವಿಕೆಟ್ ಒಪ್ಪಿಸಿದರು. ಶ್ರೀ ಚರಣಿ 4 ಓವರ್‌ಗಳಿಗೆ 25 ರನ್ ನೀಡಿ ಒಂದು ವಿಕೆಟ್ ಕಿತ್ತರು. ಕ್ರಾಂತಿ ಗೌಡ್ ಅವರು ಎರಡು ವಿಕೆಟ್ ಕಿತ್ತರೆ, ದೀಪ್ತಿ ಶರ್ಮಾ ಒಂದು ವಿಕೆಟ್ ಕಬಳಿಸಿದರು. ಆತಿಥೇಯರು 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್ ನಷ್ಟಕ್ಕೆ 150 ರನ್‌ಗಳಿಗೆ ಸೀಮಿತರಾದರು.