ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ENG vs SL: 23 ಸಾವಿರ ಅಂತಾರಾಷ್ಟ್ರೀಯ ರನ್‌ಗಳ ಕ್ಲಬ್‌ಗೆ ಜೋ ರೂಟ್; ಸಚಿನ್ ದಾಖಲೆ ಮುರಿದ ಇಂಗ್ಲೆಂಡ್ ಬ್ಯಾಟರ್!

ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 23,000 ರನ್‌ಗಳ ಗಡಿ ತಲುಪಿದ್ದಾರೆ. ಆ ಮೂಲಕ ವೇಗವಾಗಿ 23 ಸಾವಿರ ರನ್‌ಗಳನ್ನು ಗಳಿಸಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ರೂಟ್ ಕೇವಲ 521 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದು, ಈ ಹಿಂದೆ ಸಚಿನ್ ತೆಂಡೂಲ್ಕರ್ ಹೊಂದಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಜೋ ರೂಟ್.

ನವದೆಹಲಿ: ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ (Joe Root) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 23,000 ರನ್‌ಗಳ ಮೈಲುಗಲ್ಲು ತಲುಪಿದ್ದಾರೆ. ಡರ್ಹಾಮ್‌ನಲ್ಲಿ ಮಂಗಳವಾರ ಶ್ರೀಲಂಕಾ ವಿರುದ್ಧ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ರೂಟ್ ಈ ಸಾಧನೆ ಮಾಡಿದ್ದಾರೆ. ರೂಟ್ 521 ಇನಿಂಗ್ಸ್‌ಗಳಲ್ಲಿ 23 ಸಾವಿರ ಅಂತಾರಾಷ್ಟ್ರೀಯ ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಈ ಸಾಧನೆ ಮಾಡಿದ ಎರಡನೇ ಅತಿ ವೇಗದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ 522 ಇನಿಂಗ್ಸ್‌ಗಳಲ್ಲಿ ದಾಖಲೆ ಬರೆದಿದ್ದ ತಲುಪಿದ್ದ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಈ ಪಟ್ಟಿಯಲ್ಲಿ ಭಾರತದ ಮತ್ತೊಬ್ಬ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಕೇವಲ 490 ಇನಿಂಗ್ಸ್‌ಗಳಲ್ಲಿ 23,000 ಅಂತಾರಾಷ್ಟ್ರೀಯ ರನ್‌ಗಳ ಗಡಿ ತಲುಪಿದ್ದರು.

ಹೇಮಂಗ್ ಬದಾನಿಯನ್ನು ಹಿಂದಿಕ್ಕಿ ಜಹೀರ್ ಖಾನ್‌ಗೆ ಸಿಎಸ್‌ಕೆ ಹೆಡ್‌ ಕೋಚ್ ಹುದ್ದೆ ನೀಡಲು ಕಾರಣವೇನು?

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 23,000 ರನ್‌ ಗಳಿಸಿದ ಬ್ಯಾಟರ್ಸ್‌

ವಿರಾಟ್‌ ಕೊಹ್ಲಿ — 490 ಇನಿಂಗ್ಸ್‌ಗಳು

ಜೋ ರೂಟ್‌ — 521 ಇನಿಂಗ್ಸ್‌ಗಳು

ಸಚಿನ್‌ ತೆಂಡೂಲ್ಕರ್— 522 ಇನಿಂಗ್ಸ್‌ಗಳು

ರಿಕಿ ಪಾಟಿಂಗ್‌ — 544 ಇನಿಂಗ್ಸ್‌ಗಳು

ಈ ಮೈಲುಗಲ್ಲು ತಲುಪಿದ ಪಂದ್ಯದಲ್ಲಿ ಜೋ ರೂಟ್ 52 ಎಸೆತಗಳಲ್ಲಿ 44 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ಐದು ಬೌಂಡರಿಗಳಿದ್ದವು. ಕ್ರೀಸ್‌ನಲ್ಲಿ ಹೆಚ್ಚು ಸಮಯ ಸಂಯಮದಿಂದ ಬ್ಯಾಟ್ ಮಾಡಿದ ರೂಟ್, ಸ್ಟ್ರೈಕ್‌ನ್ನು ಉತ್ತಮವಾಗಿ ತಿರುಗಿಸುತ್ತಾ ಅವಕಾಶ ಸಿಕ್ಕಾಗ ಬೌಂಡರಿಗಳನ್ನು ಬಾರಿಸಿದರು.

ಇದೀಗ ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 23,041 ರನ್‌ಗಳನ್ನು ಹೊಂದಿದ್ದು, ಸಾರ್ವಕಾಲಿಕ ರನ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. 7ನೇ ಸ್ಥಾನದಲ್ಲಿರುವ ರಾಹುಲ್ ದ್ರಾವಿಡ್ 24,208 ರನ್ ಗಳಿಸಿದ್ದು, ಅವರಿಗಿಂತ ರೂಟ್ 1,167 ರನ್‌ಗಳಷ್ಟು ಹಿಂದಿದ್ದಾರೆ.



ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌

ಸಚಿನ್‌ ತೆಂಡೂಲ್ಕರ್‌ (ಭಾರತ) — 34,357 ರನ್‌ಗಳು — 782 ಇನಿಂಗ್ಸ್‌ಗಳು

ವಿರಾಟ್‌ ಕೊಹ್ಲಿ (ಭಾರತ) — 28,359 ರನ್‌ಗಳು — 629 ಇನಿಂಗ್ಸ್‌ಗಳು

ಕುಮಾರ್‌ ಸಂಗಕ್ಕಾರ (ಶ್ರೀಲಂಕಾ) — 28,016 ರನ್‌ಗಳು — 666 ಇನಿಂಗ್ಸ್‌ಗಳು

ರಿಕಿ ಪಾಂಟಿಂಗ್‌ (ಆಸ್ಟ್ರೇಲಿಯಾ) — 27,483 ರನ್‌ಗಳು — 668 ಇನಿಂಗ್ಸ್‌ಗಳು

ಮಹೇಲಾ ಜಯವರ್ಧನೆ (ಶ್ರೀಲಂಕಾ) — 25,957 ರನ್‌ಗಳು — 725 ಇನಿಂಗ್ಸ್‌ಗಳು

ಜಾಕ್‌ ಕಾಲಿಸ್‌ (ದಕ್ಷಿಣ ಆಫ್ರಿಕಾ) — 25,534 ರನ್‌ಗಳು — 617 ಇನಿಂಗ್ಸ್‌ಗಳು

ರಾಹುಲ್‌ ದ್ರಾವಿಡ್‌ (ಭಾರತ) — 24,208 ರನ್‌ಗಳು — 605 ಇನಿಂಗ್ಸ್‌ಗಳು

ಜೋ ರೂಟ್‌ (ಇಂಗ್ಲೆಂಡ್‌) — 23,041 ರನ್‌ಗಳು — 521 ಇನಿಂಗ್ಸ್‌ಗಳು



ಶ್ರೀಲಂಕಾದ ವೇಗದ ಹಾಗೂ ಸ್ಪಿನ್ ಬೌಲಿಂಗ್ ದಾಳಿಯ ವಿರುದ್ಧ ಜೋ ರೂಟ್ ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟ್‌ ಮಾಡಿದರು. ಬಳಿಕ ನಿಧಾನವಾಗಿ ಲಯ ಕಂಡುಕೊಂಡ ಅವರು, ಮಿಡ್‌ವಿಕೆಟ್ ಮೂಲಕ ಅದ್ಭುತವಾಗಿ ವ್ರಿಸ್ಟ್ ಬಳಸಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ತಮ್ಮ ಖಾತೆ ತೆರೆದರು. ನಂತರ ಅಸಿತ ಫೆರ್ನಾಂಡೊ ಅವರ ಎಸೆತಗಳನ್ನು ಆಫ್‌ಸೈಡ್‌ನಲ್ಲಿ ಸುಂದರ ಡ್ರೈವ್‌ಗಳ ಮೂಲಕ ಬೌಂಡರಿಗೆ ಕಳುಹಿಸಿದರು.

ಸ್ಪಿನ್ ಬೌಲಿಂಗ್‌ಗೂ ರೂಟ್ ಉತ್ತಮವಾಗಿ ಪ್ರತಿಕ್ರಿಯಿಸಿದರು. ಸಿಂಗಲ್ಸ್ ಮೂಲಕ ಸ್ಟ್ರೈಕ್‌ನ್ನು ಬದಲಾಯಿಸುತ್ತಿದ್ದ ಅವರು, ದುನಿತ್ ವೆಲ್ಲಾಲಗೆ ವಿರುದ್ಧ ರಿವರ್ಸ್ ಸ್ವೀಪ್ ಶಾಟ್ ಕೂಡ ಆಡಿದರು. ದುಷ್ಮಂತ ಚಮೀರಾ ಅವರ ಎಸೆತದಲ್ಲಿ ಸಿಂಗಲ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು 100 ರನ್‌ಗಳ ಗಡಿ ದಾಟಿಸಲು ನೆರವಾದ ರೂಟ್, ಬಳಿಕವೂ ಇನಿಂಗ್ಸ್‌ಗೆ ಆಧಾರವಾಗಿ ನಿಂತರು.

ಡೆಬ್ಯೂ ಪಂದ್ಯವಾಡುತ್ತಿದ್ದ ಸಚಿಂದು ಕೊಲಂಬಗೆ ಜೋ ರೂಟ್ ಅವರ ಇನಿಂಗ್ಸ್‌ಗೆ ತೆರೆ ಎಳೆದರು. ತುಸು ಶಾರ್ಟ್ ಲೆನ್ತ್‌ನಲ್ಲಿ ಬಿದ್ದ ಚೆಂಡು ಪಿಚ್‌ನಿಂದ ತೀವ್ರವಾಗಿ ತಿರುಗಿದ ಪರಿಣಾಮ ರೂಟ್ ಅವರ ಬ್ಯಾಟ್‌ನ ಹೊರ ಅಂಚನ್ನು ವಂಚಿಸಿ, ಆಫ್‌ಸ್ಟಂಪ್‌ನ ಮೇಲ್ಭಾಗಕ್ಕೆ ಬಡಿದಿತು. ಈ ಮೂಲಕ ಸಚಿಂದು ಕೊಲಂಬಗೆ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ ಜೋ ರೂಟ್ ಅವರ ವಿಕೆಟ್ ಪಡೆಯುವ ಮೂಲಕ ಮೊದಲ ಏಕದಿನ ವಿಕೆಟ್ ದಾಖಲಿಸಿದರು.