ನವದೆಹಲಿ: ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ನಿಲ್ಲುವ ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯ್ಸನ್ (Kane Williamson) ಅವರು ಜೂನ್ 12 ರಂದು ಶುಕ್ರವಾರ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಅವರು ತಕ್ಷಣ ಜಾರಿಗೆ ಬರುವಂತೆ ನಿವೃತ್ತಿ ಘೋಷಿಸಿದ್ದು, ಇಂಗ್ಲೆಂಡ್ ವಿರುದ್ಧ ಪ್ರಸ್ತುತ ಸಾಗುತ್ತಿರುವ ಟೆಸ್ಟ್ ಸರಣಿಯ ಇನ್ನುಳಿದ ಭಾಗದಲ್ಲಿ ಮುಂದುವರಿಯುವುದಿಲ್ಲ. ಈ ವಿಷಯನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ (New Zealand Cricket Board), ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಷಯವನ್ನು ಪ್ರಕಟಿಸಿದೆ.
ಈ ಮಹತ್ವದ ನಿರ್ಧಾರದಿಂದ ನ್ಯೂಜಿಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ನ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯವಾಗಿದೆ. ಅವರು ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೂ ಅವರು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಅವರು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಯ ವೇಳೆ ತೆಗೆದುಕೊಂಡ ಈ ನಿರ್ಧಾರ ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದೆ.
ಕಳೆದ ವಾರ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಎದುರು ಅನುಭವಿಸಿದ ಭಾರೀ ಸೋಲಿನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆಯ ನಿರ್ಧಾರಕ್ಕೆ ಸ್ಪಷ್ಟ ರೂಪ ಪಡೆದುಕೊಂಡಿತು ಎಂದು 35ರ ಬ್ಯಾಟ್ಸ್‌ಮನ್ ಒಪ್ಪಿಕೊಂಡಿದ್ದಾರೆ. ಆ ಪಂದ್ಯದಲ್ಲಿ ಎದುರಾದ ನಿರಾಸಾದಾಯಕ ಫಲಿತಾಂಶದ ನಂತರ ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದಾಗಿ ತಿಳಿಸಿದ್ದಾರೆ. ಲಾರ್ಡ್ಸ್ ಟೆಸ್ಟ್‌ನ ಸೋಲು ತಮ್ಮ ವೃತ್ತಿಜೀವನದ ಮುಂದಿನ ಹಂತದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲು ಕಾರಣವಾಯಿತು ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.
ಕೇನ್ ವಿಲಿಯಮ್ಸನ್ ಹೇಳಿಕೆ
“ಈ ನಿರ್ಧಾರದ ಬಗ್ಗೆ ನಾನು ಸಾಕಷ್ಟು ಸಮಯದಿಂದ ಯೋಚಿಸುತ್ತಿದ್ದೆ. ಆದರೆ ಕಳೆದ ಕೆಲವು ದಿನಗಳಲ್ಲಿ ಇದಕ್ಕೆ ಈಗಲೇ ಸರಿಯಾದ ಸಮಯ ಎಂಬುದು ನನಗೆ ಸ್ಪಷ್ಟವಾಗಿತ್ತು,” ಎಂದು ಕೇನ್ ವಿಲಿಯಮ್ಸನ್ ಅವರು ನ್ಯೂಜಿಲೆಂಡ್ ಕ್ರಿಕೆಟ್ ಬಿಡುಗಡೆ ಮಾಡಿದ ಭಾವನಾತ್ಮಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಅಂತಾರಾಷ್ಟ್ರೀಯ ಕ್ರಿಕೆಟ್ ಬಗ್ಗೆ ನನಗೆ ಯಾವಾಗಲೂ ಅಪಾರ ಉತ್ಸಾಹ ಮತ್ತು ಹಸಿವು ಇತ್ತು. ನ್ಯೂಜಿಲೆಂಡ್ ಪರ ನಾನು ಆಡಿದ ಪ್ರತಿಯೊಂದು ಪಂದ್ಯದಲ್ಲೂ ನನ್ನಿಂದ ಸಾಧ್ಯವಾದಷ್ಟು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದೇನೆ ಎಂಬ ಹೆಮ್ಮೆ ನನಗಿದೆ. ಅದಕ್ಕಿಂತ ಕಡಿಮೆ ಸಮರ್ಪಣೆಯೊಂದಿಗೆ ಮುಂದುವರಿಯುವುದು ಸರಿಯಲ್ಲ. ನನ್ನದೇ ಷರತ್ತುಗಳ ಮೇಲೆ ಈ ಹಂತದಲ್ಲಿ ವಿದಾಯ ಹೇಳುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19,346 ರನ್
ಕೇನ್ ವಿಲಿಯಮ್ಸನ್ ಅವರು ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದ ಅತ್ಯಂತ ಶ್ರೇಷ್ಠ ಹಾಗೂ ಜನಪ್ರಿಯ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೊದಲು ಅವರು ನ್ಯೂಜಿಲೆಂಡ್ ಪರ 110 ಟೆಸ್ಟ್, 175 ಏಕದಿನ ಹಾಗೂ 93 ಟಿ20ಐ ಪಂದ್ಯಗಳನ್ನು ಆಡಿದ್ದರು.
ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅವರು ಒಟ್ಟು 19,346 ರನ್‌ಗಳನ್ನು ತಮ್ಮ ಖಾತೆಯಲ್ಲಿ ದಾಖಲಿಸಿಕೊಂಡಿದ್ದಾರೆ. 2010ರ ಆಗಸ್ಟ್‌ನಲ್ಲಿ ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, ಬಳಿಕ ನ್ಯೂಜಿಲೆಂಡ್ ಕ್ರಿಕೆಟ್‌ನ ಪ್ರಮುಖ ಸ್ತಂಭವಾಗಿ ಬೆಳೆದು ಅನೇಕ ಐತಿಹಾಸಿಕ ಸಾಧನೆಗಳನ್ನು ನಿರ್ಮಿಸಿದರು.
ಶಾಂತ ಸ್ವಭಾವ, ಸ್ಥಿರ ಪ್ರದರ್ಶನ ಮತ್ತು ಅಸಾಧಾರಣ ನಾಯಕತ್ವದ ಮೂಲಕ ವಿಲಿಯಮ್ಸನ್ ವಿಶ್ವ ಕ್ರಿಕೆಟ್‌ನಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದು, ಅವರ ವಿದಾಯ ನ್ಯೂಜಿಲೆಂಡ್ ಕ್ರಿಕೆಟ್‌ಗೆ ಒಂದು ಮಹತ್ವದ ಯುಗದ ಅಂತ್ಯವೆಂದು ಪರಿಗಣಿಸಲಾಗುತ್ತಿದೆ.
ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ ಹೊಂದಿರುವ ದಾಖಲೆಗಳ ಪಟ್ಟಿ
ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್‌ಗಳು (19,346)
ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳು (48)
ಅತಿ ಹೆಚ್ಚು ಅಂತಾರಾಷ್ಟ್ರೀಯ ದ್ವಿಶತಕಗಳು (6)
ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆರನೇ ಸ್ಥಾನ (378)
ಅತಿ ಹೆಚ್ಚು ಟೆಸ್ಟ್ ರನ್‌ಗಳು (9,515)
ಅತಿ ಹೆಚ್ಚು ಟೆಸ್ಟ್ ಶತಕಗಳು (33)
ಮೂರನೇ ಅತಿ ಹೆಚ್ಚು ಟೆಸ್ಟ್ ಪಂದ್ಯಗಳು (110)
ನಾಲ್ಕನೇ ಅತಿ ಹೆಚ್ಚು ಏಕದಿನ ರನ್‌ಗಳು (7,256)
ನಾಲ್ಕನೇ ಅತಿ ಹೆಚ್ಚು ಏಕದಿನ ಶತಕಗಳು (14)
ಎರಡನೇ ಅತಿ ಹೆಚ್ಚು ಟಿ20ಐ ರನ್‌ಗಳು (2575)
ಅತಿ ಹೆಚ್ಚು ಟೆಸ್ಟ್ ಸರಾಸರಿ 54.06 (ಕನಿಷ್ಠ 20 ಪಂದ್ಯಗಳು)
ಎರಡನೇ ಅತಿ ಹೆಚ್ಚು ಒಡಿಐ ಸರಾಸರಿ 48.69 (ಕನಿಷ್ಠ 20 ಪಂದ್ಯಗಳು)
ಮೂರನೇ ಅತಿ ಹೆಚ್ಚು ಟಿ20ಐ ಸರಾಸರಿ 33 (ಕನಿಷ್ಠ 5 ಪಂದ್ಯಗಳು)
ನಾಲ್ಕನೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಕ್ಯಾಚ್‌ಗಳು (217)
ಟಾಮ್ ಲೇಥಮ್ ಮತ್ತು ಟಿಮ್ ಸೌಥಿ ಅವರೊಂದಿಗೆ ಸಮಾನವಾದ ಅತಿ ಹೆಚ್ಚು ಟೆಸ್ಟ್ ಗೆಲುವುಗಳು (47)
ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದ ಮೊದಲಿಗ