ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranji Trophy 2026-27: ಕರುಣ್‌ ನಾಯರ್‌ ಶತಕ, ಆಂಧ್ರ vs ಕರ್ನಾಟಕ ಪಂದ್ಯ ಡ್ರಾ!

ಕರ್ನಾಟಕ ಹಾಗೂ ಆಂಧ್ರ ತಂಡಗಳ ನಡುವಣ 2026-27ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಎಲೈಟ್‌ ಬಿ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನ ಕರುಣ್‌ ನಾಯರ್‌ ಶತಕ ಸಿಡಿಸಿದ್ದು ವಿಶೇಷವಾದರೂ, ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದರ ಪರಿಣಾಮ ಕರ್ನಾಟಕ ತಂಡ ಡ್ರಾಗೆ ತೃಪ್ತಿಪಟ್ಟು ಕೇವಲ ಒಂದು ಅಂಕವನ್ನು ಪಡೆಯಿತು.

ಕರ್ನಾಟಕ vs ಆಂಧ್ರ ನಡುವಣ ರಣಜಿ ಪಂದ್ಯ ಡ್ರಾ.

ವಿಜಯವಾಡ: ಕರುಣ್‌ ನಾಯರ್‌ (Karun Nair) ಅವರ ಭರ್ಜರಿ ಶತಕದ ಹೊರತಾಗಿಯೂ ಕರ್ನಾಟಕ ಹಾಗೂ ಆಂಧ್ರ (KAR vs AP) ನಡುವಣ 2026-27ರ ರಣಜಿ ಟ್ರೋಫಿ (Ranji Trophy 2026-27) ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಪ್ರಥಮ ಇನಿಂಗ್ಸ್‌ನಲ್ಲಿ ಹಿನ್ನಡೆಯನ್ನು ಅನುಭವಿಸಿದ ಕಾರಣ ಸ್ಮರಣ್‌ ರವಿಚಂದ್ರನ್‌ ನಾಯಕತ್ವದ ಕರ್ನಾಟಕಕ್ಕೆ ಕೇವಲ ಒಂದು ಅಂಕ ಲಭಿಸಿದರೆ, ಆತಿಥೇಯ ಆಂಧ್ರ ತಂಡದ ಖಾತೆಗೆ ಎರಡು ಅಂಕಗಳು ಲಭಿಸಿದವು. ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನ ಕರುಣ್‌ ನಾಯರ್‌ ಅವರ ಬ್ಯಾಟಿಂಗ್‌ ಎಲ್ಲರ ಗಮನವನ್ನು ಸೆಳೆಯಿತು.

ಬುಧವಾರ ಇಲ್ಲಿನ ಡಾ ಗೋಕರಾಜು ಮೈದಾನದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 176 ರನ್‌ಗಳಿಂದ ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ ಕರ್ನಾಟಕ ಪರ ಕ್ರೀಸ್‌ಗೆ ಬಂದ ಕರುಣ್‌ ನಾಯರ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 8 ರನ್‌ಗೆ ವಿಕೆಟ್‌ ಒಪ್ಪಿಸಿದ್ದ ಕರುಣ್‌, ದ್ವಿತೀಯ ಇನಿಂಗ್ಸ್‌ನಲ್ಲಿ ಸ್ಮರಣೀಯ ಇನಿಂಗ್ಸ್‌ ಆಡಿದರು. 21 ರನ್‌ ಗಳಿಸಿ ನಾಲ್ಕನೇ ದಿನ ಕ್ರೀಸ್‌ಗೆ ಬಂದಿದ್ದ ನಾಯಕ ಸ್ಮರಣ್‌ ರವಿಚಂದ್ರನ್‌ ಬೇಗ ವಿಕೆಟ್‌ ಒಪ್ಪಿಸಿದರು. ಇವರು ಪ್ರಥಮ ಇನಿಂಗ್ಸ್‌ನಲ್ಲಿ ಶತಕವನ್ನು ಬಾರಿಸಿದ್ದರು.

Ranji Trophy 2026-27: ಆಂಧ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ ಕರುಣ್‌ ನಾಯರ್‌!

ಕೆ ಶ್ರೀಜಿತ್‌ (19 ರನ್‌) ಹಾಗೂ ಮಾಧವ್‌ ಬಜಾಜ್‌ (27 ರನ್‌) ಹಾಗೂ ರಿತೇಶ್‌ ಭಟ್ಕಳ್‌ (23ರನ್‌) ಅವರು ನಾಲ್ಕನೇ ದಿನ ಕೆಲ ಕಾಲ ಕರುಣ್‌ ನಾಯರ್‌ಗೆ ಸಾಥ್‌ ನೀಡಿದ್ದರು. ಆದರೆ, ಒಂದು ತುದಿಯಲ್ಲಿ ನಿಂತು ದೀರ್ಘಾವಧಿ ಬ್ಯಾಟ್‌ ಮಾಡಿದ್ದ ಕರುಣ್‌, 242 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 155 ರನ್‌ಗಳನ್ನು ಗಳಿಸಿದರು. ಆ ಮೂಲಕ ಈ ಸೀಸನ್‌ನ ಮೊದಲ ಪಂದ್ಯದಲ್ಲಿ ಕರುಣ್‌ ದೊಡ್ಡ ಇನಿಂಗ್ಸ್‌ ಆಡಿದರು. ಕರ್ನಾಟಕ ತಂಡ 9 ವಿಕೆಟ್‌ ಕಳೆದುಕೊಂಡು 337 ರನ್‌ ಗಳಿಸಿದ ಬಳಿಕ ಡಿಕ್ಲೆರ್‌ ಘೋಷಿಸಿತು. ಆ ಮೂಲಕ ಎದುರಾಳಿ ಆಂಧ್ರ ತಂಡಕ್ಕೆ 194 ರನ್‌ಗಳ ಗುರಿಯನ್ನು ನೀಡಿತು.

ಆಂಧ್ರ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಲಲಿತ್‌ ಮೋಹನ್‌ 5 ವಿಕೆಟ್‌ ಕಿತ್ತರೆ, ಸೌರಭ್‌ ಕುಮಾರ್‌ 3 ವಿಕೆಟ್‌ ಕಬಳಿಸಿದರು.

ಬಳಿಕ 194 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಂಧ್ರ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮಾರಮ್‌ರೆಡ್ಡಿ ಹೇಮಂತ್‌ ರೆಡ್ಡಿ ಡಕ್‌ಔಟ್‌ ಆದರು. ಶೈಕ್‌ ರಶೀದ್‌ ಅವರು ಕೇವಲ 7 ರನ್‌ಗೆ ಔಟ್‌ ಆದರು. ನಾಯಕ ರಿಕಿ ಭುಯಿ ಕೇವಲ 12 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅಭಿಷೇಕ್‌ ರೆಡ್ಡಿ 29 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ಅವರನ್ನು ಮಾಧವ್‌ ಬಜಾಜ್‌ ಔಟ್‌ ಮಾಡಿದರು.

ಇಶಾನ್‌ ಕಿಶನ್‌ ನಿಮ್ಮನ್ನು ಹಿಂದಿಕ್ಕುತ್ತಿದ್ದಾರೆ ಹುಷಾರ್‌...! ರಿಷಭ್‌ ಪಂತ್‌ಗೆ ವಾಸೀಮ್‌ ಜಾಫರ್‌ ವಾರ್ನಿಂಗ್‌!

ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಸೀರಾಮ್‌ ವೆಂಕಟ ರಾಹುಲ್‌, ದ್ವಿತೀಯ ಇನಿಂಗ್ಸ್‌ನಲ್ಲಿಯೂ ಭರವಸೆ ಮೂಡಿಸಿದರು. ಅವರು ಆಡಿದ 80 ಎಸೆತಗಳಲ್ಲಿ ಅಜೇಯ 35 ರನ್‌ಗಳನ್ನು ಕಲೆ ಹಾಕಿದರು. ಇವರ ಜೊತೆ ಮತ್ತೊಂದು ತುದಿಯಲ್ಲಿ ಬ್ಯಾಟ್‌ ಮಾಡಿದ್ದ ರೇವಂತ್‌ ರೆಡ್ಡಿ 52 ಎಸೆತಗಳಲ್ಲಿ ಅಜೇಯ 20 ರನ್‌ ಗಳಿಸಿದರು. ಅಂತಿಮವಾಗಿ ನಾಲ್ಕನೇ ದಿನ ಕೊನೆಯಾಗಯವ ವೇಳೆಗೆ ಆಂಧ್ರ, 44 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 104 ರನ್‌ ಗಳಿಸಿತು.

ಅಂದ ಹಾಗೆ ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 274 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಪ್ರಥಮ ಇನಿಂಗ್ಸ್‌ ಆಡಿದ್ದ ಆಂಧ್ರ ತಂಡ, ಸೀರಾಮ್‌ ವೆಂಕಟ ರಾಹುಲ್‌ ಶತಕ ಹಾಗೂ ರೇವಂತ್‌ ರೆಡ್ಡಿ ಅರ್ಧಶತಕದ ಬಲದಿಂದ 418 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ 144 ರನ್‌ಗಳ ಮುನ್ನಡೆಯನ್ನು ಪಡೆದಿತ್ತು.

ಪ್ರಸ್ತುತ ಭಾರತದ ಅತ್ಯುತ್ತಮ ಟಿ20 ಆಟಗಾರನನ್ನು ಹೆಸರಿಸಿದ ಚೇತೇಶ್ವರ್‌ ಪೂಜಾರ!

ಸ್ಕೋರ್‌ ವಿವರ

ಕರ್ನಾಟಕ

ಪ್ರಥಮ ಇನಿಂಗ್ಸ್‌: 274-10 ( ಸ್ಮರಣ್‌ ರವಿಚಂದ್ರನ್‌ 126 ರನ್‌, ಕೆ ಶ್ರೀಜಿತ್‌ 58 ರನ್‌; ಸೌರಭ್‌ ಕುಮಾರ್‌ 69 ಕ್ಕೆ 3)

ದ್ವಿತೀಯ ಇನಿಂಗ್ಸ್:‌ 103 ಓವರ್‌ಗಳಿಗೆ 339-9 ( ಕರುಣ್‌ ನಾಯರ್‌ 155* ರನ್‌, ಮನ್ವಂತ್‌ ಕುಮಾರ್‌ ಎಲ್‌ 44 ರನ್‌; ಲಲಿತ್‌ ಮೋಹನ್‌ 117ಕ್ಕೆ 5, ಸೌರಭ್‌ ಕುಮಾರ್‌ 85ಕ್ಕೆ 3)

ಆಂಧ್ರ

ಪ್ರಥಮ ಇನಿಂಗ್ಸ್‌: 418-10 ( ಸೀರಾಮ್‌ ವೆಂಕಟ ರಾಹುಲ್‌ 119, ರೇವಂತ್‌ ರೆಡ್ಡಿ 97; ಶಿಖರ್‌ ಶೆಟ್ಟಿ 115 ಕ್ಕೆ 6)

ದ್ವಿತೀಯ ಇನಿಂಗ್ಸ್‌: 44 ಓವರ್‌ಗಳಲ್ಲಿ 104-4 (ಸೀರಾಮ್‌ ವೆಂಕಟ ರಾಹುಲ್‌ 35 ರನ್‌, ರೇವಂತ್‌ ರೆಡ್ಡಿ 20* ರನ್‌; ಸೌರಭ್‌ ಕುಮಾರ್‌ 32 ಕ್ಕೆ 2)