ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs IRE: ವೈಭವ್‌ ಸೂರ್ಯವಂಶಿಗೆ ಈಗಲೇ ಪ್ಲೇಯಿಂಗ್‌ Xiನಲ್ಲಿ ಅವಕಾಶ ನೀಡಬೇಡಿ ಎಂದ ಅಶ್ವಿನ್!

ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಐರ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಭಾರತದ ಹಿರಿಯ ತಂಡದಲ್ಲಿ ಪದಾರ್ಪಣೆ ಮಾಡುವ ಅವಕಾಶ ನೀಡದ ತಂಡದ ನಿರ್ವಹಣೆಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಅವರು ಇನ್ನಷ್ಟು ದಿನಗಳ ಕಾಲ ಬೆಂಚ್‌ ಕಾಯಲಿ ಎಂದು ಸಲಹೆ ನೀಡಿದ್ದಾರೆ.

ವೈಭವ್‌ಗೆ ಈಗಲೇ ಚಾನ್ಸ್‌ ನೀಡಬೇಡಿ ಎಂದ ಅಶ್ವಿನ್‌.

ನವದೆಹಲಿ: ಐರ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ (IND vs IRE) ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರಿಗೆ ಪದಾರ್ಪಣೆ ಮಾಡುವ ಅವಕಾಶ ನೀಡದ ಟೀಮ್‌ ಮ್ಯಾನೇಜ್‌ಮೆಂಟ್‌ ನಿರ್ಧಾರವನ್ನು ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಬೆಂಬಲಿಸಿದ್ದಾರೆ. ವೈಭವ್ ಅವರನ್ನು ತಂಡದಲ್ಲಿ ಸೇರಿಸಬೇಕೆಂಬ ಚರ್ಚೆಗಳು ಜೋರಾಗಿದ್ದರೂ, ಭಾರತ ತಂಡ, ಆರಂಭಿಕ ಬ್ಯಾಟರ್‌ಗಳಾಗಿ ಎಂದಿನಂತೆ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರನ್ನೇ ಕಣಕ್ಕಿಳಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಅಶ್ವಿನ್, ಅಭಿಮಾನಿಗಳು ವೈಭವ್ ಅವರ ಬೆಳವಣಿಗೆಯ ಬಗ್ಗೆ ತಾಳ್ಮೆ ವಹಿಸಬೇಕು ಎಂದು ಸಲಹೆ ನೀಡಿದರು. ಯುವ ಆಟಗಾರರನ್ನು ಆತುರದಲ್ಲಿ ಅಂತಿಮ ಹನ್ನೊಂದರಲ್ಲಿ ಸೇರಿಸುವ ಬದಲು, ಕೆಲ ಕಾಲ ತಂಡದೊಂದಿಗೆ ಇದ್ದು ಹಿರಿಯ ಆಟಗಾರರಿಂದ ಕಲಿಯಲು ಅವಕಾಶ ನೀಡುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟರು.

ತಂಡದೊಂದಿಗೆ ಪ್ರಯಾಣಿಸುವುದು, ಅಭ್ಯಾಸ ಮಾಡುವುದು ಮತ್ತು ಡ್ರೆಸ್ಸಿಂಗ್ ರೂಮ್‌ನ ವಾತಾವರಣವನ್ನು ಅನುಭವಿಸುವುದು ವೈಭವ್ ಅವರಂತಹ ಯುವ ಆಟಗಾರನ ಬೆಳವಣಿಗೆಗೆ ಬಹಳ ಸಹಕಾರಿಯಾಗಲಿದೆ. ಸೂಕ್ತ ಸಮಯ ಬಂದಾಗ ಅವರು ಭಾರತ ಪರ ಪದಾರ್ಪಣೆ ಮಾಡುವ ಅವಕಾಶ ಖಂಡಿತ ಪಡೆಯುತ್ತಾರೆ ಎಂದು ಅಶ್ವಿನ್ ವಿಶ್ವಾಸ ವ್ಯಕ್ತಪಡಿಸಿದರು.

IND vs IRE: ಮೊದಲನೇ ಪಂದ್ಯದಲ್ಲಿ ವಾಷಿಂಗ್ಟನ್‌ ಸುಂದರ್‌ ಪಾತ್ರವನ್ನು ಪ್ರಶ್ನಿಸಿದ ಆಕಾಶ್‌ ಚೋಪ್ರಾ!

ತಮ್ಮ ಯೂಟ್ಯೂಬ್ ಚಾನೆಲ್ 'ಆಶ್ ಕಿ ಬಾತ್'ನಲ್ಲಿ ಮಾತನಾಡಿದ ಅಶ್ವಿನ್, "ದಯವಿಟ್ಟು ಎಲ್ಲರೂ ಕ್ರಿಕೆಟ್ ಅನ್ನು ಸ್ವಲ್ಪ ವಿವೇಕದಿಂದ ನೋಡಿ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕ ಬ್ಯಾಟರ್‌ಗಳಾಗಿ ಆಡುತ್ತಿದ್ದಾರೆ. ಸಂಜು ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಇವರಲ್ಲಿ ಒಬ್ಬರನ್ನು ಕೈಬಿಟ್ಟರೆ, ಅದನ್ನು ತಂಡದ ಆಟ ಎಂದು ಹೇಗೆ ಕರೆಯಬಹುದೇ?" ಎಂದು ಪ್ರಶ್ನಿಸಿದರು.

"ವೈಭವ್ ಆಡಬೇಕು ಎಂಬ ಆಸೆ ನಮ್ಮೆಲ್ಲರಿಗೂ ಇದೆ. ನಾವೆಲ್ಲರೂ ಅವರ ಅಭಿಮಾನಿಗಳು. ಅವರು ಅದ್ಭುತ ಪ್ರತಿಭೆ ಮತ್ತು ಮನರಂಜನಾತ್ಮಕ ಆಟಗಾರ. ಆದರೆ ಅದಕ್ಕಾಗಿ ಯಾವುದೇ ಬೆಲೆ ತೆರಬೇಕಾಗಿಲ್ಲ. ಕೆಲ ಕಾಲ ತಂಡದ ಹೊರಗೆ ಕುಳಿತು ಪಂದ್ಯವನ್ನು ನೋಡುವುದಕ್ಕೂ ತನ್ನದೇ ಆದ ಮಹತ್ವವಿದೆ. ಅವರು ತಂಡಕ್ಕೆ ಸಹಾಯ ಮಾಡಲಿ, ಅಗತ್ಯವಿದ್ದರೆ ನೀರು ತರುವ ಕೆಲಸವನ್ನೂ ಮಾಡಲಿ. ಆ ಅನುಭವದಿಂದಲೂ ಸಾಕಷ್ಟು ಕಲಿಯಬಹುದು." ಎಂದು ಹೇಳಿದ್ದಾರೆ.

IND vs IRE: ಎರಡನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!

"ಒಬ್ಬ ಶ್ರೇಷ್ಠ ಆಟಗಾರ ಒಂದೇ ದಿನದಲ್ಲಿ ರೂಪುಗೊಳ್ಳುವುದಿಲ್ಲ. ವೈಭವ್ ಒಮ್ಮೆ ಆಡುವುದನ್ನು ಆರಂಭಿಸಿದರೆ, ಸಚಿನ್ ತೆಂಡೂಲ್ಕರ್ ಅವರಂತೆ ಮತ್ತೆ ತಂಡದಿಂದ ಹೊರಗುಳಿಯದ ಪರಿಸ್ಥಿತಿಯೂ ಬರಬಹುದು. ಆದರೆ ಅದಕ್ಕೂ ಮೊದಲು ಕೆಲವು ಪಂದ್ಯಗಳನ್ನು ಹೊರಗಿನಿಂದ ಗಮನಿಸಿದರೆ, ತಂಡದ ವಾತಾವರಣವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ಅವರ ಮುಂದೆ ಇನ್ನೂ ದೀರ್ಘ ಮತ್ತು ಯಶಸ್ವಿ ಕ್ರಿಕೆಟ್ ಜೀವನವಿದೆ. ಅಂತಿಮ ಹನ್ನೊಂದರ ಹೊರಗೆ ಕುಳಿತುಕೊಳ್ಳುವುದೂ ತಂಡದಲ್ಲಿ ಒಂದು ಪಾತ್ರವೇ ಆಗಿದೆ," ಎಂದು ಅಶ್ವಿನ್ ತಿಳಿಸಿದ್ದಾರೆ.