ಡರ್ಬನ್: ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಮ್ಯಾಥ್ಯೂ ಬ್ರೀಟ್ಜ್ಕೆ ಏಕದಿನ ಕ್ರಿಕೆಟ್‌ನಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ಗುರುವಾರ (ಸೆಪ್ಟೆಂಬರ್ 24) ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 67 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು, ಈ ಪಂದ್ಯದಲ್ಲಿ ಬ್ರೀಟ್ಜ್ಕೆ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಬ್ರೀಟ್ಜ್ಕೆ 106 ಎಸೆತಗಳಲ್ಲಿ 112 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದರು. ಅವರ ಇನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ ವೃತ್ತಿಜೀವನದ ಎರಡನೇ ಶತಕವಾಗಿದೆ. ಬ್ರೀಟ್ಜ್ಕೆ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ 150 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. 2025ರಲ್ಲಿ ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯದಲ್ಲಿ ಅವರು ವಿಶ್ವದಾಖಲೆ ನಿರ್ಮಿಸಿದ್ದರು.
ಮ್ಯಾಥ್ಯೂ ಬ್ರೀಟ್ಜ್ಕೆ ಶತಕದ ಅಬ್ಬರ: ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾಗೆ 67 ರನ್‌ಗಳ ಜಯ!
14 ಇನಿಂಗ್ಸ್‌ಗಳಲ್ಲಿ 800 ರನ್ ಬಾರಿಸಿ ಬ್ರೀಟ್ಜ್ಕೆ ದಾಖಲೆ
ಬ್ರೀಟ್ಜ್ಕೆ ಇದುವರೆಗೆ 14 ಏಕದಿನ ಇನಿಂಗ್ಸ್‌ಗಳಲ್ಲಿ ಎರಡು ಶತಕ ಹಾಗೂ ಆರು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ ಏಕದಿನ ಕ್ರಿಕೆಟ್‌ನಲ್ಲಿ ಅವರು 63.23ರ ಸರಾಸರಿಯಲ್ಲಿ ಒಟ್ಟು 822 ರನ್ ಗಳಿಸಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್ ವೃತ್ತಿಜೀವನದ ಮೊದಲ 14 ಇನಿಂಗ್ಸ್‌ಗಳಲ್ಲಿ 800 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ 27 ವರ್ಷದ ಬ್ರೀಟ್ಜ್ಕೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಇಮಾಮ್-ಉಲ್-ಹಕ್ ಅವರ ಹೆಸರಿನಲ್ಲಿತ್ತು.
14 ಏಕದಿನ ಇನಿಂಗ್ಸ್‌ಗಳ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
ಮ್ಯಾಥ್ಯೂ ಬ್ರೀಟ್ಜ್ಕೆ-ದಕ್ಷಿಣ ಆಫ್ರಿಕಾ-822
ಇಮಾಮ್-ಉಲ್-ಹಕ್-ಪಾಕಿಸ್ತಾನ-769
ಜಾನ್ನೆಮನ್ ಮಲಾನ್-ದಕ್ಷಿಣ ಆಫ್ರಿಕಾ -763
ಇಬ್ರಾಹಿಂ ಜದ್ರಾನ್-ಅಫ್ಘಾನಿಸ್ತಾನ -749
ಅಕೀಬ್ ಇಲ್ಯಾಸ್-ಓಮನ್-744
ಸಿಧು ದಾಖಲೆಯನ್ನೂ ಸರಿಗಟ್ಟಿದ ಬ್ರೀಟ್ಜ್ಕೆ
ಬ್ರೀಟ್ಜ್ಕೆ ಮತ್ತೊಂದು ದಾಖಲೆಯನ್ನೂ ಸರಿಗಟ್ಟಿದ್ದಾರೆ. 14 ಏಕದಿನ ಇನಿಂಗ್ಸ್‌ಗಳಲ್ಲಿ ಎಂಟು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ ಇದೀಗ ಬ್ರೀಟ್ಜ್ಕೆ ಹಾಗೂ ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಹೆಸರಿನಲ್ಲಿದೆ.
ಸಿಧು ಕೂಡ ತಮ್ಮ ಮೊದಲ 14 ಏಕದಿನ ಇನಿಂಗ್ಸ್‌ಗಳಲ್ಲಿ ಎಂಟು ಬಾರಿ 50+ ಸ್ಕೋರ್ ಮಾಡಿದ್ದರು. 1987-88ರ ಅವಧಿಯಲ್ಲಿ ಅವರು ಒಟ್ಟು 555 ರನ್ ಗಳಿಸಿದ್ದರು. ಆದರೆ ಆ ಎಂಟು ಇನಿಂಗ್ಸ್‌ಗಳಲ್ಲೊಂದನ್ನೂ ಶತಕವಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಬ್ರೀಟ್ಜ್ಕೆ ಈಗಾಗಲೇ ಎರಡು ಶತಕಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧವೂ ವಿಶೇಷ ಸಾಧನೆ
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್‌ನ ಮೊದಲ ಮೂರು ಇನಿಂಗ್ಸ್‌ಗಳಲ್ಲೂ ಬ್ರೀಟ್ಜ್ಕೆ ಅರ್ಧಶತಕ ಗಳಿಸಿದ್ದಾರೆ. ಕಳೆದ ವರ್ಷ ಕೈರ್ನ್ಸ್‌ನಲ್ಲಿ 57 ರನ್ ಹಾಗೂ ಮ್ಯಾಕೆಯಲ್ಲಿ 88 ರನ್ ಗಳಿಸಿದ್ದ ಅವರು, ಇದೀಗ ಡರ್ಬನ್‌ನಲ್ಲಿ 112 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಮೊದಲ ಮೂರು ಏಕದಿನ ಇನಿಂಗ್ಸ್‌ಗಳಲ್ಲೂ 50+ ಸ್ಕೋರ್ ಮಾಡಿದ ಸಾಧನೆ ಮಾಡಿದ್ದಾರೆ.
ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಲ್ಲೂ ಅರ್ಧಶತಕ ಗಳಿಸಿದ ಏಕೈಕ ಆಟಗಾರನಾಗಿ ಇದುವರೆಗೆ ನ್ಯೂಜಿಲೆಂಡ್‌ನ ಜಾನ್ ರೈಟ್ ಇದ್ದರು. 1980-81ರಲ್ಲಿ ಅವರು ಕ್ರಮವಾಗಿ 60, 57 ಮತ್ತು 58 ರನ್ ಗಳಿಸಿದ್ದರು. ಇದೀಗ ಬ್ರೀಟ್ಜ್ಕೆ ಕೂಡ ಈ ಅಪರೂಪದ ಸಾಧನೆಯನ್ನು ಸರಿಗಟ್ಟಿದ್ದಾರೆ.