ಮುಂಬೈ: ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 13000 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ(Virat Kohli) ಬರೆದಿದ್ದಾರೆ. ಸೋಮವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ 20ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್ ಬೇಗ ವಿಕೆಟ್ ಒಪ್ಪಿಸಿದ ಬಳಿಕ ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟಿಂಗ್ ಕೈ ಹಾಕಿ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಆರ್‌ಸಿಬಿಗೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು.
ಆರ್‌ಸಿಬಿ ಹಾಗೂ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಈ ಸಾಧಕರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. 2019ರಲ್ಲಿ ಬಾರ್ಬಡೋಸ್ ಟ್ರೈಡೆಂಟ್ಸ್ ವಿರುದ್ದ ಕೆರಿಬಿಯನ್ ಪ್ರೀಮಿಯರ್ ಲೀಗ್(CPL 2029) ಟೂರ್ನಿಯ ಪಂದ್ಯದಲ್ಲಿ ಕ್ರಿಸ್ ಗೇಲ್ ಈ ದಾಖಲೆಯನ್ನು ಬರೆದಿದ್ದರು. ಅವರು ಈ ವೇಳೆ ಜಮೈಕಾ ತಲ್ಲಾವಾಸ್ ಪರ ಆಡಿದ್ದರು. ಇದೀಗ 13000 ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಅಲೆಕ್ಸ್ ಹೇಲ್ಸ್ ಹಾಗೂ ಕೈರೊನ್ ಪೊಲಾರ್ಡ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ.
RCB vs MI: ಮುಂಬೈ ಇಂಡಿಯನ್ಸ್ ಎದುರು ಟಾಸ್ ಸೋತ ಆರ್‌ಸಿಬಿ ಮೊದಲ ಬ್ಯಾಟಿಂಗ್!
ವೇಗವಾಗಿ 13000 ಟಿ20 ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳು
ಕ್ರಿಸ್ ಗೇಲ್ - 389 ಪಂದ್ಯಗಳಿಂದ 381 ಇನಿಂಗ್ಸ್ (ಬಾರ್ಬಡೋಸ್ ಟ್ರೈಡೆಂಟ್ಸ್ ವಿರುದ್ಧ - ಸೆಪ್ಟೆಂಬರ್ 2019)
ವಿರಾಟ್ ಕೊಹ್ಲಿ - 403 ಪಂದ್ಯಗಳಿಂದ 386 ಇನಿಂಗ್ಸ್ - (ಮುಂಬೈ ಇಂಡಿಯನ್ಸ್ ವಿರುದ್ಧ - ಏಪ್ರಿಲ್ 2025)
ಅಲೆಕ್ಸ್ ಹೇಲ್ಸ್ - 478 ಪಂದ್ಯಗಳಿಂದ 474 ಇನಿಂಗ್ಸ್ (ಫಾರ್ಚೂನ್ ಬಾರಿಶಾಲ್ ವಿರುದ್ಧ - ಜನವರಿ 2025)
ಶೋಯೆಬ್ ಮಲಿಕ್ - 526 ಪಂದ್ಯಗಳಿಂದ 487 ಇನಿಂಗ್ಸ್ (ರಂಗ್ಪುರ್ ರೈಡರ್ಸ್ ವಿರುದ್ಧ - ಜನವರಿ 2024)
ಕೈರೊನ್ ಪೊಲಾರ್ಡ್ - 668 ಪಂದ್ಯಗಳಿಂದ 594 ಇನಿಂಗ್ಸ್ (ನಾರ್ಥೆರ್ನ್ ಸೂಪರ್ ರ್ಚಾರ್ಜರ್ಸ್ ವಿರುದ್ಧ - ಜುಲೈ 2024)
67 ರನ್ ಗಳಿಸಿದ ವಿರಾಟ್ ಕೊಹ್ಲಿ
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ಅರ್ಧಶತಕವನ್ನು ಸಿಡಿಸಿದರು. ಅವರು ಆಡಿದ 42 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 67 ರನ್‌ಗಳನ್ನು ಗಳಿಸಿದರು. ಆದರೆ, ಅತ್ಯುತ್ತಮ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಬೌಲಿಂಗ್ ವಿಕೆಟ್ ಒಪ್ಪಿಸಿದರು. ಅದರಲ್ಲಿಯೂ ವಿಶೇಷವಾಗಿ 159ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿ ಗಮನ ಸೆಳೆದರು.
ಅತ್ಯುತ್ತಮ ಲಯದಲ್ಲಿ ವಿರಾಟ್ ಕೊಹ್ಲಿ
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ ನಾಲ್ಕು ಇನಿಂಗ್ಸ್‌ಗಳಿಂದ 164 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಈ ಬಾರಿಯೂ ರನ್ ಹೊಳೆ ಹರಿಸುವ ಮುನ್ಸೂಚನೆಯನ್ನು ನೀಡಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧತನ್ನ ಮೊದಲನೇ ಪಂದ್ಯದಲ್ಲಿ 36 ಎಸೆತಗಳಲ್ಲಿ ಅಜೇಯ 59 ರನ್‌ಗಳನ್ನು ಬಾರಿಸಿದ್ದರು. ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಕೊಹ್ಲಿ 31 ರನ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳಿಂದ ಗೆದ್ದು ಬೀಗಿತ್ತು. ನಂತರ ಗುಜರಾತ್ ಟೈಟನ್ಸ್ ವಿರುದ್ಧ ತನ್ನ ಮೂರನೇ ಪಂದ್ಯದಲ್ಲಿ ಕೊಹ್ಲಿ ಕೇವಕ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದೀಗ ಮುಂಬೈ ವಿರುದ್ಧ ವಿರಾಟ್ ಕೊಹ್ಲಿ 67 ರನ್‌ಗಳನ್ನು ಸಿಡಿಸಿದ್ದರು.