ನವದೆಹಲಿ: ಗಾಯಕ್ಕೆ ತುತ್ತಾಗಿರುವ ಕಾರಣ ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ (Mitchell Santner) ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಅವರ ಬದಲಿಗೆ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ (Keshav Maharaj) ಅವರಿಗೆ ಐದು ಬಾರಿ ಚಾಂಪಿಯನ್ಸ್ ತಂಡದಲ್ಲಿ ಸ್ಯಾಂಟ್ನರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಅವರು ತಮ್ಮ ಎಡಭುಜದ ಗಾಯಕ್ಕೆ ತುತ್ತಾಗಿದ್ದರು . ಕೇಶವ್ ಮಹಾರಾಜ್ ಮೂಲ ಬೆಲೆ 75 ಲಕ್ಷ ರು. ಗಳಿಗೆ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹಿಂದಿನ ಪಂದ್ಯದ ಸಮಯದಲ್ಲಿ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸುವಾಗ ಸ್ಯಾಂಟ್ನರ್ ಭುಜದ ಗಾಯಕ್ಕೆ ಒಳಗಾಗಿದ್ದರು.
"ಮಿಚೆಲ್ ಸ್ಯಾಂಟ್ನರ್ ಬದಲಿಗೆ ಮುಂಬೈ ಇಂಡಿಯನ್ಸ್ ತಂಡ, ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅವರಿಂದ ಸಹಿ ಮಾಡಿಸಿಕೊಂಡಿದೆ. ಎಡ ಭುಜದ ಗಾಯದಿಂದಾಗಿ ಸ್ಯಾಂಟ್ನರ್ 2026ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್‌ನ ಹಿಂದಿನ ತವರು ಪಂದ್ಯದ ವೇಳೆ ಬೌಂಡರಿಯ ಬಳಿ ಕ್ಯಾಚ್ ಪಡೆಯಲು ಪ್ರಯತ್ನಿಸುವಾಗ ಸ್ಯಾಂಟ್ನರ್ ಗಾಯಗೊಂಡಿದ್ದರು. ಮಹಾರಾಜ್ ಒಬ್ಬ ಅನುಭವಿ ಎಡಗೈ ಸ್ಪಿನ್ನರ್ ಆಗಿದ್ದು, ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದರು. ಅವರು ಈ ಹಿಂದೆ ಎರಡು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, 2024 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 75 ಲಕ್ಷಕ್ಕೆ ಎಂಐ ತಂಡವನ್ನು ಸೇರಿದ್ದಾರೆ," ಎಂದು ಐಪಿಎಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ʻಪಂಜಾಬ್ ಪರ ಇನಿಂಗ್ಸ್ ಆರಂಭಿಸುತ್ತೇನೆʼ: ಪ್ರೀತಿ ಜಿಂಟಾಗೆ ಯುಜ್ವೇಂದ್ರ ಚಹಲ್ ಮನವಿ!
ಕೇಶವ್ ಮಹಾರಾಜ್ ದಕ್ಷಿಣ ಆಫ್ರಿಕಾದ ಎಲ್ಲಾ ಮಾದರಿಗಳಲ್ಲಿ ಅತ್ಯಂತ ಅನುಭವಿ ಸ್ಪಿನ್ನರ್‌ಗಳಲ್ಲಿ ಒಬ್ಬರು. ನಿಖರವಾದ ನಿಯಂತ್ರಣ ಮತ್ತು ನಿರಂತರವಾಗಿ ಒತ್ತಡವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಎಡಗೈ ಬೌಲರ್, 2016 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಹರಿಣ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಒಂದೇ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡದಿದ್ದರೂ, 2021 ರ ಟಿ20 ವಿಶ್ವಕಪ್ ಟೂರ್ನಿಗಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಕೇಶವ್ ಮಹಾರಾಜ್ ಅವರನ್ನು ಆಯ್ಕೆ ಮಾಡಲಾಗಿತ್ತು. ಶ್ರೀಲಂಕಾ ವಿರುದ್ಧ ನಾಯಕನಾಗಿ ಅವರು ಈ ಸ್ವರೂಪಕ್ಕೆ ಪದಾರ್ಪಣೆ ಮಾಡಿದ್ದರು ಮತ್ತು ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದರು.
ಕೇಶವ್ ಮಹಾರಾಜ್ ಅವರ ದಾಖಲೆ ಏನು?
36ರ ವಯಸ್ಸಿನ ಕೇಶವ್ ಮಹಾರಾಜ್ 62 ಟೆಸ್ಟ್ ಪಂದ್ಯಗಳಲ್ಲಿ 218 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಆದರೆ 56 ಏಕದಿನ ಪಂದ್ಯಗಳಲ್ಲಿ 73 ವಿಕೆಟ್‌ಗಳನ್ನು ಪಡೆದಿದ್ದಾರೆ. ಮಹಾರಾಜ್ 54 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 55 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಐಪಿಎಲ್ 2024ರಲ್ಲಿ ರಾಜಸ್ಥಾನ ರಾಯಲ್ಸ್ ಪರ 2 ಪಂದ್ಯಗಳನ್ನು ಆಡಿದ್ದರು ಹಾಗೂ 2 ವಿಕೆಟ್‌ಗಳನ್ನು ಗಳಿಸಿದ್ದಾರೆ. ಐಪಿಎಲ್ ಜೊತೆಗೆ, ಕೇಶವ್ ಮಹಾರಾಜ್ SA20, ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡಿದ್ದಾರೆ. ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ, ತನ್ನ 7 ಪಂದ್ಯಗಳಲ್ಲಿ 5 ರಲ್ಲಿ ಸೋತಿದೆ. ಪ್ಲೇಆಫ್‌ಗೆ ಸ್ಪರ್ಧೆಯಲ್ಲಿ ಉಳಿಯಲು, ಮುಂಬೈ ತಮ್ಮ ಮುಂಬರುವ ಪಂದ್ಯಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಬೇಕಾಗುತ್ತದೆ.