ನವದೆಹಲಿ: ಶುಕ್ರವಾರ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಮಹಿಳಾ ಏಷ್ಯಾ ಕಪ್ (Women's Asia Cup 2026) ಟೂರ್ನಿಯ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ (Smriti Mandhana) ಅವರು 64 ಎಸೆತಗಳಲ್ಲಿ 124 ರನ್‌ಗಳನ್ನು ದಾಖಲಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳ ನಷ್ಟಕ್ಕೆ 193 ರನ್‌ಗಳನ್ನು ದಾಖಲಿಸಿತು. ಅಂತಿಮವಾಗಿ ಭಾರತ, ಎದರಾಳಿ ಹಾಂಕಾಂಗ್ ತಂಡವನ್ನು 137 ರನ್‌ಗಳಿಂದ ಮಣಿಸಿತು.
ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ 333 ಪಂದ್ಯಗಳಿಂದ ಎಲ್ಲಾ ಸ್ವರೂಪದಲ್ಲಿ ಮಿಥಾಲಿ ರಾಜ್ ಅವರು 10,868 ರನ್‌ಗಳನ್ನು ಗಳಿಸಿದ್ದಾರೆ. ಇದೀಗ ಮಂಧಾನಾ ಅವರು, ತಮ್ಮ ಮಾಜ ಸಹ ಆಟಗಾರ್ತಿಯನ್ನು ಹಿಂದಿಕ್ಕಿದ್ದಾರೆ.ಇದೀಗ ಸ್ಮೃತಿ ಮಂಧಾನಾ ಅವರು 10,880 ರನ್‌ಗಳನ್ನು ದಾಖಲಿಸುವ ಮೂಲಕ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ ಪಟ್ಟಿಯಲ್ಲಿ ಎಡಗೈ ಬ್ಯಾಟರ್ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಹಾಗಾಗಿ ಮಿಥಾಲಿ ರಾಜ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸ್ಮೃತಿ ಮಂಧಾನಾಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.
ನಕಲಿ ಜನನ ಪ್ರಮಾಣ ಪತ್ರ: ಭಾರತ ಅಂಡರ್-19 ತಂಡದ ರೋಹಿತ್ ಯಾದವ್‌ಗೆ 2 ವರ್ಷ ನಿಷೇಧ!
"ನಿಜವಾಗಲೂ ನೀವು ಅರ್ಹರಾಗಿದ್ದೀರಿ ಸ್ಮೃತಿ ಮಂಧಾನಾ! ನೀವು ಯುವ ಆಟಗಾರ್ತಿಯಾಗಿ ಬೆಳೆಯುತ್ತಿದ್ದ ದಿನಗಳಿಂದ ಭಾರತಕ್ಕೆ ಸಿಕ್ಕ ಅತ್ಯುತ್ತಮ ಆಟಗಾರ್ತಿಯವರೆಗೂ ನಾನು ನಿಮ್ಮನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ನನ್ನ ದಾಖಲೆಯನ್ನು ಹಿಂದಿಕ್ಕಿ, ಇದೀಗ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರಾಗಿರುವುದಕ್ಕೆ ನನಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ನಿಮ್ಮಿಂದ ಇನ್ನಷ್ಟು ಹೆಚ್ಚಿನ ರನ್‌ಗಳು ಹಾಗೂ ದಾಖಲೆಗಳು ಮೂಡಿಬರಲಿದೆ. ಮುಂದೆ ಇದೇ ರೀತು ಸಾಗುತ್ತಿರಿ," ಎಂದು ಮಿಥಾಲಿ ರಾಜ್ ಬರೆದುಕೊಂಡಿದ್ದಾರೆ.
ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಅವರು 14 ಬೌಂಡರಿಗಳು ಹಾಗೂ ಏಳು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್ 10,740 ರನ್‌ಗಳ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಅಂದ ಹಾಗೆ ಸ್ಮೃತಿ ಮಂಧಾನಾ ಅವರು 303 ಪಂದ್ಯಗಳಿಂದ ಈ ದಾಖಲೆ ಬರೆದಿದ್ದಾರೆ. ಮಿಥಾಲಿ ರಾಜ್ 333 ಪಂದ್ಯಗಳಿಂದ ಇಷ್ಟು ರನ್‌ಗಳನ್ನು ಗಳಿಸಿದ್ದಾರೆ.
ಚಾಮರಿ ಅಟಪಟ್ಟು ದಾಖಲೆ ಮುರಿದ ಮಂಧಾನಾ
ಮಂಧಾನಾ ಅವರು ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ 124 ರನ್‌ಗಳು ಹಾಗೂ ಇದು ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಜೊತೆಗೆ ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ದಾಖಲಾದ ಅತ್ಯಂತ ಗರಿಷ್ಠ ಮೊತ್ತವಾಗಿದೆ. ಶ್ರೀಲಂಕಾದ ಚಾಮರಿ ಅಟಪಟ್ಟು ಅವರು 2024ರಲ್ಲಿ ಮಲೇಷ್ಯಾ ಎದುರು ಈ ಹಿಂದೆ 119 ರನ್‌ಗಳನ್ನು ಗಳಿಸಿದ್ದರು. ಇದೀಗ ಸ್ಮೃತಿ ಮಂಧಾನಾ ಈ ದಾಖಲೆಯನ್ನು ಮುರಿದಿದ್ದಾರೆ.