ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಪ್ಲೇಆಫ್ಸ್‌ಗೆ ತಲುಪಲು ಎದುರು ನೋಡುತ್ತಿರುವ ತಂಡಗಳಿಗೆ ಎಚ್ಚರಿಕೆ ನೀಡಿದ ಮೊಹಮ್ಮದ್‌ ಕೈಫ್‌!

ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದ್ದು, ಎಂಟು ತಂಡಗಳ ನಡುವೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಕೈಫ್‌, ಅಂತಿಮ ನಾಲ್ಕರ ರೇಸ್‌ನಲ್ಲಿರುವ ತಂಡಗಳ ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ಲೇಆಫ್ಸ್‌ ಮೇಲೆ ಕಣ್ಣಿಟ್ಟಿರುವ ತಂಡಗಳಿಗೆ ಕೈಫ್‌ ವಾನಿಂಗ್‌.

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ (Mohammad Kaif) ಅವರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪ್ಲೇಆಫ್ಸ್‌ ಪೈಪೋಟಿ ಅತ್ಯಂತ ಕಠಿಣವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದ್ದರೂ ತಂಡಗಳಿಗೂ ಇನ್ನೂ ನೆಮ್ಮದಿ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಲೀಗ್ ಹಂತದಲ್ಲಿ ಇನ್ನೂ ಕೇವಲ 14 ಪಂದ್ಯಗಳು ಮಾತ್ರ ಬಾಕಿ ಇದ್ದರೂ, ಯಾವುದೇ ತಂಡ ಇನ್ನೂ ಅಧಿಕೃತವಾಗಿ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿಲ್ಲ. ಇದೇ ವೇಳೆ, ಕೇವಲ ಎರಡು ತಂಡಗಳು ಮಾತ್ರ ಟೂರ್ನಿಯಿಂದ ಹೊರಬಿದ್ದಿವೆ.

ಅಹಮದಾಬಾದ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಭರ್ಜರಿ ಜಯ ಸಾಧಿಸಿದ ಗುಜರಾತ್‌ ಟೈಟನ್ಸ್‌ ತಂಡ ನಾಕೌಟ್ ಹಂತದತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಈ ಗೆಲುವಿನೊಂದಿಗೆ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್ 16 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಆದರೂ ಜಿಟಿ ತಂಡದ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಪ್ಲೇಆಫ್ ಸ್ಥಾನ ಖಚಿತವಾಗುವುದಿಲ್ಲ. ಏಕೆಂದರೆ ಇನ್ನೂ ಹಲವು ತಂಡಗಳು 18 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವ ಅವಕಾಶವನ್ನು ಹೊಂದಿವೆ.

IPL 2026: ವಿರಾಟ್‌ ಕೊಹ್ಲಿ ಅಲ್ಲವೇ ಅಲ್ಲ, ಈ ಸಲ ಆರೆಂಜ್‌ ಕ್ಯಾಪ್‌ ಗೆಲ್ಲಬಲ್ಲ ಬ್ಯಾಟರ್‌ ಆರಿಸಿದ ಗ್ರೇಮ್‌ ಸ್ಮಿತ್‌!

ಕೆಕೆಆರ್‌ ಪ್ಲೇಆಫ್ಸ್‌ ರೇಸ್‌ನಲ್ಲಿದೆ ಎಂದ ಕೈಫ್‌

ಭಾರತದ ಮಾಜಿ ಬ್ಯಾಟರ್ ಕೈಫ್‌ ಗುಜರಾತ್‌ ಟೈಟನ್ಸ್ ಪ್ಲೇಆಫ್‌ಗೆ ಪ್ರವೇಶ ಬಹಳ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಆದರೆ ಉಳಿದ ಮೂರು ಸ್ಥಾನಗಳಿಗಾಗಿ ಭಾರೀ ಪೈಪೋಟಿ ನಡೆಯುತ್ತಿದ್ದು, ಕೋಲ್ಕತಾ ನೈಟ್‌ ರೈಡರ್ಸ್‌ ಕೂಡ ಇನ್ನೂ ನಾಕೌಟ್ ಹಂತ ತಲುಪುವ ಅವಕಾಶ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಗುಜರಾತ್ ಟೈಟನ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ; ಅದು ಬಹುತೇಕ ಖಚಿತ. ಆದರೆ ಆರ್‌ಸಿಬಿ ವಿರುದ್ಧದ ಪಂದ್ಯದ ಬಳಿಕ ಜಿಟಿ ಎದುರಿಸಲಿರುವ ಕೆಕೆಆರ್ ತಂಡ ಇನ್ನೂ ಕೇವಲ 10 ಪಂದ್ಯಗಳನ್ನೇ ಆಡಿದ್ದು, ಉತ್ತಮ ಫಾರ್ಮ್‌ನಲ್ಲಿದೆ. ಕೆಕೆಆರ್‌ ಅಥವಾ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಇನ್ನೂ ಸ್ಪರ್ಧೆಯಿಂದ ಹೊರಗುಳಿದಂತೆ ಪರಿಗಣಿಸಬೇಡಿ. ಮುಂದಿನ ಕೆಲವು ದಿನಗಳಲ್ಲಿ ಟಾಪ್-4 ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಗುಜರಾತ್ ಮುಂದಿನ ಹಂತ ತಲುಪುವ ಸಾಧ್ಯತೆ ಹೆಚ್ಚು. ಆದರೆ ಎರಡನೇ, ಮೂರನೇ ಮತ್ತು ನಾಲ್ಕನೇ ಸ್ಥಾನಗಳನ್ನು ಊಹಿಸುವುದು ಕಷ್ಟ. ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿಯಿದೆ. ಆ ಗುಂಪಿನ ಯಾವುದೇ ತಂಡವೂ ಈ ಕ್ಷಣದಲ್ಲಿ ಸುರಕ್ಷಿತ ಎಂದು ಭಾವಿಸಲು ಸಾಧ್ಯವಿಲ್ಲ,” ಎಂದು ಕೈಫ್ ಜಿಯೊ ಸ್ಟಾರ್‌ನಲ್ಲಿ ಹೇಳಿದ್ದಾರೆ.

‌IPL 2026: 500 ರನ್‌ಗಳ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಸಾಯಿ ಸುದರ್ಶನ್!

ಎಸ್‌ಆರ್‌ಎಚ್‌ ಹಾದಿ ಅತ್ಯಂತ ಕಠಿಣವಾಗಿದೆ

ಇದರ ನಡುವೆ, ಮೊಹಮ್ಮದ್‌ ಕೈಫ್‌ ಅವರು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಮುಂದಿನ ಪಯಣ ಕಠಿಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಚೆಪಾಕ್‌ನಲ್ಲಿ ಕಮ್‌ಬ್ಯಾಕ್‌ ಮಾಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಲೇಬೇಕು ಎಂದು ಹೇಳಿದ್ದಾರೆ.

“ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಆಡುವುದು ಎಸ್‌ಆರ್‌ಎಚ್‌ಗೆ ಕಠಿಣ ಪರೀಕ್ಷೆಯಾಗಲಿದೆ. ಈ ಟೂರ್ನಿಯಲ್ಲಿ ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಬಹಳ ಮುಖ್ಯ. ಆದರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಎಸ್‌ಆರ್‌ಎಚ್ ಪರಿಸ್ಥಿತಿಗಳಿಗೆ ಹೊಂದಿಕೊಂಡು ಆಡುವ ವಿಷಯದಲ್ಲಿ ವಿಫಲವಾಯಿತು. ಇದು ಈಗ ಅವರ ಡ್ರೆಸ್ಸಿಂಗ್ ರೂಮ್‌ನಲ್ಲಿ ಚರ್ಚೆಯ ವಿಷಯವಾಗಿರಬಹುದು. ಇನ್ನೂ ಆತಂಕ ಪಡುವ ಅಗತ್ಯವಿಲ್ಲ, ಆದರೆ ಈ ಸಮಸ್ಯೆಯನ್ನು ಅವರು ಸರಿಪಡಿಸಬೇಕಾಗಿದೆ. ಬಳಿಕ ಅವರು ಪಂಜಾಬ್ ವಿರುದ್ಧ ತವರಿನಲ್ಲಿ ಆಡಲಿದ್ದಾರೆ, ಅಲ್ಲಿ ಪರಿಸ್ಥಿತಿಗಳ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ ಮತ್ತು ಅವರು ಹೆಚ್ಚು ಆರಾಮವಾಗಿರುತ್ತಾರೆ. ಆದರೆ ಟಾಪ್-2 ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾದರೆ, ಚೆನ್ನೈ ವಿರುದ್ಧ ಹೊರಾಂಗಣ ಪಂದ್ಯದಲ್ಲಿ ಗೆಲ್ಲಲೇಬೇಕು. ಸಿಎಸ್‌ಕೆ ಈಗ ಉತ್ತಮ ಲಯದಲ್ಲಿದೆ. ಹೀಗಾಗಿ ಉಳಿದ ಎರಡು ಪಂದ್ಯಗಳಲ್ಲಿ ಎಸ್‌ಆರ್‌ಎಚ್‌ಗೆ ಕಠಿಣ ಸವಾಲು ಎದುರಿದೆ,” ಎಂದು ಕೈಫ್ ತಿಳಿಸಿದ್ದಾರೆ.