ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಬಾಂಗ್ಲಾ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಗುಡ್‌ಬೈ!
Mushfiqur Rahim retired from ODIs: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಬಾಂಗ್ಲಾದೇಶ ತಂಡ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಂಗ್ಲಾ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಬಾಂಗ್ಲಾ ಪರ 274 ಏಕದಿನ ಪಂದ್ಯಗಳನ್ನು ಮುಷ್ಫಿಕರ್ ರಹೀಮ್ ಆಡಿದ್ದಾರೆ.

ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ಮುಷ್ಫಿಕರ್ ರಹೀಮ್.

ನವದೆಹಲಿ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಬಾಂಗ್ಲಾದೇಶ ತಂಡ ವಿಫಲವಾಗಿತ್ತು. ಇದರ ಬೆನ್ನಲ್ಲೆ ಬಾಂಗ್ಲಾ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ರಹೀಮ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಅವರು ಕೇವಲ ಎರಡು ರನ್ ಮಾತ್ರ ಗಳಿಸಿದ್ದರು. ಕಳೆದ ಎರಡು ವಾರಗಳ ಕಾಲ ಯೋಚಿಸಿದ ನಂತರ, ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆಂದು ಅವರು ತಮ್ಮ ಇನ್‌ಸ್ಟಾಮ್‌ಗ್ರಾಮ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.
ಕಳೆದ ಎರಡು ವಾರಗಳ ಕಾಲ ನಾನು ಸಾಕಷ್ಟು ಸವಾಲನ್ನು ಎದುರಿಸಿದ್ದೇನೆ ಹಾಗೂ ಸಾಕಷ್ಟು ಚಿಂತಿಸಿದ್ದೇನೆ. ಎಲ್ಲಾ ಅಂಶಗಳನ್ನು ಯೋಚಿಸದ ಬಳಿಕ ಒಡಿಐ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ನಿರ್ಧಾರಕ್ಕೆ ಬಂದಿದ್ದೇನೆಂದು ಮುಷ್ಫಿಕರ್ ರಹೀಮ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಕೂಡ ಒಡಿಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಮಂಗಳವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಸೋಲು ಅನುಭವಿಸಿದ ಬಳಿಕ ಸ್ಟೀವನ್ ಸ್ಮಿತ್ ಈ ನಿರ್ಧಾರವನ್ನು ಪ್ರಕಟಿಸಿದ್ದರು.
IND vs NZ final: ಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ
ಜಿಂಬಾಬ್ವೆ ವಿರುದ್ಧ 2005ರಲ್ಲಿ ಹರಾರೆಯಲ್ಲಿ ಮುಷ್ಫಿಕರ್ ರಹೀಮ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು 19 ವರ್ಷಗಳ ಕಾಲ ಏಕದಿನ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು. 2022ರಲ್ಲಿ ಅವರು ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ಗೂ ವಿದಾಯ ಹೇಳಿದ್ದರು. ಇದೀಗ ಅವರು ಬಾಂಗ್ಲಾದೇಶ ತಂಡದ ಪರ ಟೆಸ್ಟ್ ಕ್ರಿಕೆಟ್‌ಗೆ ಮಾತ್ರ ಲಭ್ಯರಾಗಿದ್ದಾರೆ.
ಮುಷ್ಫಿಕರ್ ರಹೀಮ್‌ರ ಏಕದಿನ ಕ್ರಿಕೆಟ್‌ನಲ್ಲಿನ ಸಾಧನೆಗಳು
- ಬಾಂಗ್ಲಾದೇಶ ಪರ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ದಾಖಲೆ ಮುಷ್ಫಿಕರ್ ರಹೀಮ್ ಹೆಸರಿನಲ್ಲಿದೆ. ಇವರು 274 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಶಕಿಬ್ ಅಲ್ ಹಸನ್ (247), ರಮಿಮ್ ಇಕ್ಬಾಲ್ (243), ಮಹ್ಮೂದುಲ್ಲಾ (239) ಹಾಗೂ ಮುಶ್ರಾಫೆ ಮೊರ್ತಜ (218) ಅವರು ಬಾಂಗ್ಲಾದೇಶ ಪರ 200ಕ್ಕೂ ಅಧಿಕ ಏಕದಿನ ಪಂದ್ಯಗಳನ್ನು ಆಡಿದ್ದಾರೆ.
- ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗುವ ಮೂಲಕ ಮುಷ್ಫಿಕರ್ ರಹೀಮ್ ವಿದಾಯ ಹೇಳಿದ್ದಾರೆ. ಅವರು 274 ಪಂದ್ಯಗಳಿಂದ 7795 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಸಾಧಕರ ಸಾಲಿನಲ್ಲಿ ತಮಿಮ್ ಇಕ್ಬಾಲ್ ಅಗ್ರ ಸ್ಥಾನದಲ್ಲಿದ್ದಾರೆ. ಇವರು 8357 ರನ್‌ಗಳನ್ನು ಕಲೆ ಹಾಕಿದ್ದಾರೆ.
- ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ ಮುಷ್ಫಿಕರ್ ರಹೀಮ್. ಇವರು ವಿಕೆಟ್ ಕೀಪರ್ ಆಗಿ 260 ಪಂದ್ಯಗಳಿಂದ 7 ಶತಕಗಳು ಹಾಗೂ 47 ಅರ್ಧಶತಕಗಳೊಂದಿಗೆ 7254 ರನ್‌ಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾ ದಿಗ್ಗಜ ಕುಮಾರ ಸಂಗಕ್ಕಾರ (13341) ಅಗ್ರ ಸ್ಥಾನದಲ್ಲಿದ್ದಾರೆ. ಇನ್ನುಳಿದ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಎಂಎಸ್ ಧೋನಿ (10773) ಹಾಗೂ ಆಡಂ ಗಿಲ್‌ಕ್ರಿಸ್ಟ್ (9410) ಇದ್ದಾರೆ.
- ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ 297 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದಿದ್ದಾರೆ. ಆ ಮೂಲಕ ಒಡಿಐನಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಕುಮಾರ್ ಸಂಗಕ್ಕಾರ (482) ಅಗ್ರ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಆಡಂ ಗಿಲ್‌ಕ್ರಿಸ್ಟ್ (472), ಎಂಎಸ್ ಧೋನಿ (444) ಹಾಗೂ ಮಾರ್ಕ್ ಬೌಷರ್ (424) ಇದ್ದಾರೆ.
- ಮುಷ್ಫಿಕರ್ ರಹೀಮ್ ಏಷ್ಯಾ ಕಪ್ ಟೂರ್ನಿಯಿ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದ ಬಾಂಗ್ಲಾ ಬ್ಯಾಟ್ಸ್‌ಮನ್ ಆಗಿದ್ದಾರೆ. ಇವರು 2018ರ ಏಷ್ಯಾಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 144 ರನ್‌ಗಳನ್ನು ಕಲೆ ಹಾಕಿದ್ದರು.
- ಮುಷ್ಫಿಕರ್ ರಹೀಮ್ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ ಮೂವರು ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಮಹ್ಮೂದುಲ್ಲಾ(3) ಹಾಗೂ ಶಕಿಬ್ ಅಲ್ ಹಸನ್ ( 2) ಇನ್ನುಳಿದ ಇಬ್ಬರು ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.