ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

15 ಬಾಲ್‌ಗಳಲ್ಲಿ 42 ರನ್‌ ಸಿಡಿಸಿ ಇರ್ಫಾನ್‌ ಪಠಾಣ್‌ ದಾಖಲೆಯನ್ನು ಮುರಿದ ನಮನ್‌ ಧೀರ್‌!

ನ್ಯೂಜಿಲೆಂಡ್‌ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡಿದ ಭಾರತ ತಂಡದ ಆಲ್‌ರೌಂಡರ್‌ ನಮನ್‌ ಧೀರ್‌ ಅವರು ಕೇವಲ 15 ಎಸೆತಗಳಲ್ಲಿ ಅಜೇಯ 42 ರನ್‌ ಸಿಡಿಸಿದರು. ಆ ಮೂಲಕ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

17 ವರ್ಷಗಳ ಹಳೆಯ ದಾಖಲೆ ಮುರಿದ ನಮನ್‌ ಧೀರ್‌.

ಕ್ರೈಸ್ಟ್‌ ಚರ್ಚ್‌: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ (IND vs NZ) ಭಾರತ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಗುರುವಾರ (ಅಕ್ಟೋಬರ್ 22) ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಈ ಮೂಲಕ ಭಾರತ ತಂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಅತ್ಯಧಿಕ ಯಶಸ್ವಿ ರನ್ ಚೇಸ್ ದಾಖಲಿಸಿತು. ಈ ಗೆಲುವಿನಲ್ಲಿ ಯುವ ಆಲ್‌ರೌಂಡರ್ ನಮನ್ ಧೀರ್ (Naman Dhir) ಪ್ರಮುಖ ಪಾತ್ರ ವಹಿಸಿದರು.

ಭಾರತದ ಪರ ಕೇವಲ ಆರನೇ ಟಿ20ಐ ಪಂದ್ಯವನ್ನಾಡಿದ ನಮನ್ ಧೀರ್, ಕೇವಲ 15 ಎಸೆತಗಳಲ್ಲಿ 42 ರನ್ ಸಿಡಿಸಿದರು. ಬರೋಬ್ಬರಿ 280ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು, ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಬಾರಿಸಿ ತಂಡದ ಗೆಲುವಿಗೆ ನೆರವಾದರು.

ಅಕ್ಷರ್ ಪಟೇಲ್ ವಿಕೆಟ್ ಪತನದ ಬಳಿಕ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ನಮನ್ ಧೀರ್, ಆ ಸಂದರ್ಭದಲ್ಲಿ ಭಾರತಕ್ಕೆ 33 ಎಸೆತಗಳಲ್ಲಿ 59 ರನ್‌ಗಳ ಅಗತ್ಯವಿತ್ತು. ಒತ್ತಡದ ಪರಿಸ್ಥಿತಿಯಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ 43 ರನ್‌ಗಳ ಮಹತ್ವದ ಜೊತೆಯಾಟವಾಡಿದ ನಮನ್, ಬಳಿಕ ಗೆಲುವಿನ ರನ್ ಗಳಿಸುವ ಮೂಲಕ ಭಾರತದ ವಿಜಯವನ್ನು ಖಚಿತಪಡಿಸಿದರು.

IND vs NZ: ಸಂಜು-ನಮನ್‌ ಸ್ಪೋಟಕ ಬ್ಯಾಟಿಂಗ್‌, ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ರೋಚಕ ಜಯ!

17 ವರ್ಷಗಳ ಹಳೆಯ ದಾಖಲೆ ಮುರಿದ ನಮನ್ ಧೀರ್

ತಮ್ಮ 42 ರನ್‌ಗಳ ಮೂಲಕ ನಮನ್‌ ಧೀರ್‌, ತಂಡದ ಯಶಸ್ವಿ ಟಿ20 ರನ್ ಚೇಸ್‌ನಲ್ಲಿ ಏಳನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಸ್ಥಾನದಲ್ಲಿ ಬ್ಯಾಟ್‌ ಮಾಡಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆ ಮೂಲಕ 2009ರಲ್ಲಿ ಶ್ರೀಲಂಕಾ ವಿರುದ್ಧ ಇರ್ಫಾನ್ ಪಠಾಣ್ ಗಳಿಸಿದ್ದ 33 ರನ್‌ಗಳ ದಾಖಲೆಯನ್ನು ನಮನ್ ಮುರಿದಿದ್ದಾರೆ.

ಇದಲ್ಲದೆ, ಟಿ20ಐ ಪಂದ್ಯವೊಂದರಲ್ಲಿ ಐದನೇ ವಿಕೆಟ್ ಪತನದ ಬಳಿಕ ಕ್ರೀಸ್‌ಗೆ ಬಂದು ಭಾರತೀಯ ಆಟಗಾರ ಗಳಿಸಿದ ಎರಡನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಇದಾಗಿದೆ. ಈ ಪಟ್ಟಿಯಲ್ಲಿ ಅಕ್ಷರ್ ಪಟೇಲ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 2023ರಲ್ಲಿ ಪುಣೆಯಲ್ಲಿ ಶ್ರೀಲಂಕಾ ವಿರುದ್ಧ 66 ರನ್ ಗಳಿಸಿದ್ದರು. ಭಾರತದ ಪರ ಟಿ20ಐ ಪಂದ್ಯಗಳಲ್ಲಿ ಏಳನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಸ್ಥಾನದಲ್ಲಿ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್‌ಗಳ ಪಟ್ಟಿಯಲ್ಲಿ ನಮನ್ ಧೀರ್ ಅವರ 42 ರನ್‌ಗಳು ಐದನೇ ಸ್ಥಾನದಲ್ಲಿವೆ.



ಯಶಸ್ವಿ ರನ್ ಚೇಸ್‌ನಲ್ಲಿ ಹೊಸ ವಿಶ್ವ ದಾಖಲೆ

ನಮನ್ ಧೀರ್ ಮತ್ತೊಂದು ವಿಶೇಷ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಯಶಸ್ವಿ ರನ್ ಚೇಸ್ ವೇಳೆ 40ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಈ ದಾಖಲೆ ನಮನ್ ಅವರ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರ ವಿಲ್ ಜ್ಯಾಕ್ಸ್ ಹೆಸರಿನಲ್ಲಿತ್ತು. 2026ರ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ ತಂಡ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಅದ್ಭುತ ಗೆಲುವು ಸಾಧಿಸಿದ್ದ ಸಂದರ್ಭದಲ್ಲಿ ಜ್ಯಾಕ್ಸ್ ಈ ಸಾಧನೆ ಮಾಡಿದ್ದರು.

ದಾಖಲೆಯ ಮೊತ್ತವನ್ನು ಚೇಸ್‌ ಮಾಡಿ ಹ್ಯಾಗ್ಲಿ ಓವಲ್‌ನಲ್ಲಿ ಇತಿಹಾಸ ಬರೆದ ಭಾರತ ತಂಡ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಕೆಲವೇ ಪಂದ್ಯಗಳಲ್ಲಿ ನಮನ್ ಧೀರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಈ ಅಮೋಘ ಇನಿಂಗ್ಸ್ ಭಾರತಕ್ಕೆ ದಾಖಲೆ ಜಯ ತಂದುಕೊಟ್ಟಿದ್ದಲ್ಲದೆ, ತಂಡದ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರಿಗೆ ಉತ್ತಮ ಅವಕಾಶವನ್ನೂ ಒದಗಿಸಿದೆ.