ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ (AUS vs NZ) ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು(New Zealand Test Squad) ಪ್ರಕಟಿಸಲಾಗಿದೆ. ಟಾಮ್ ಲೇಥಮ್ ನಾಯಕತ್ವದಲ್ಲಿ 16 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದ್ದು, ಏಳು ಮಂದಿ ವೇಗದ ಬೌಲರ್ಗಳಿಗೆ ಸ್ಥಾನ ನೀಡಲಾಗಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಐತಿಹಾಸಿಕ ಗುರಿಯೊಂದಿಗೆ ನ್ಯೂಜಿಲೆಂಡ್ ತಂಡ ಕಣಕ್ಕಿಳಿಯಲಿದೆ.
ವೇಗದ ಬೌಲರ್ಗಳಾದ ವಿಲ್ ಒ'ರೂರ್ಕ್, ಮ್ಯಾಟ್ ಫಿಶರ್ ಮತ್ತು ಮೈಕಲ್ ರೇ ತಂಡಕ್ಕೆ ಮರಳಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಭಾರತದ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ಟೀಮ್ ಮ್ಯಾನೇಜ್ಮೆಂಟ್ ಸಲುವಾಗಿ ವಿಶ್ರಾಂತಿ ಪಡೆದಿದ್ದ ವಿಲ್ ಒ'ರೂರ್ಕ್ ಇದೀಗ ತಂಡಕ್ಕೆ ವಾಪಸ್ಸಾಗಿದ್ದಾರೆ. ಅವರು 14 ಟೆಸ್ಟ್ ಪಂದ್ಯಗಳಿಂದ 49 ವಿಕೆಟ್ ಕಬಳಿಸಿದ್ದು, ಎರಡು ಬಾರಿ ಐದು ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಇನ್ನು ಮ್ಯಾಟ್ ಫಿಶರ್ ಮತ್ತು ಮೈಕಲ್ ರೇ ಕೂಡ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಇವರೊಂದಿಗೆ ಮ್ಯಾಟ್ ಹೆನ್ರಿ, ಜೇಕಬ್ ಡಫಿ, ಕೈಲ್ ಜೇಮಿಸನ್ ಮತ್ತು ನೇಥನ್ ಸ್ಮಿತ್ ತಂಡದ ವೇಗದ ಬೌಲಿಂಗ್ ಪಡೆಯಲ್ಲಿದ್ದಾರೆ.
IND vs NZ: ಭಾರತ ತಂಡದಲ್ಲಿ ಬೆಂಚ್ ಕಾಯುತ್ತಿರುವ ಮೊಹಮ್ಮದ್ ಸಿರಾಜ್ ಬಗ್ಗೆ ಭವಿಷ್ಯ ನುಡಿದ ಆರ್ ಅಶ್ವಿನ್!
41 ವರ್ಷಗಳ ಬಳಿಕ ಸರಣಿ ಗೆಲ್ಲುವ ತವಕ
ನ್ಯೂಜಿಲೆಂಡ್ ತಂಡ ಕೊನೆಯ ಬಾರಿಗೆ 1985ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಜೆರೆಮಿ ಕೋನಿ ನಾಯಕತ್ವದಲ್ಲಿ ನಡೆದ ಆ ಸರಣಿಯಲ್ಲಿ ನ್ಯೂಜಿಲೆಂಡ್ 2-1 ಅಂತರದಿಂದ ಐತಿಹಾಸಿಕ ಗೆಲುವು ದಾಖಲಿಸಿತ್ತು. ಅಂದಿನಿಂದ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದರೂ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ.
2011ರ ಡಿಸೆಂಬರ್ನಲ್ಲಿ ಹೋಬಾರ್ಟ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಏಳು ರನ್ಗಳ ರೋಚಕ ಗೆಲುವು ಸಾಧಿಸಿತ್ತು. ಆದರೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಮಾತ್ರ ನನಸಾಗಿಲ್ಲ. ಇದೀಗ ಟಾಮ್ ಲೇಥಮ್ ಪಡೆ ಈ ದೀರ್ಘಕಾಲದ ಕಾಯುವಿಕೆಗೆ ಅಂತ್ಯ ಹಾಡುವ ನಿರೀಕ್ಷೆಯಲ್ಲಿದೆ.
IND vs NZ: ಕ್ರೈಸ್ಟ್ಚರ್ಚ್ ಟೆಸ್ಟ್ನಲ್ಲಿ ವಿಕೆಟ್ ಪಡೆಯದೆ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಜಸ್ಪ್ರೀತ್ ಬುಮ್ರಾ!
ಟಾಮ್ ಲೇಥಮ್ಗೆ ವಿಶೇಷ ಮೈಲುಗಲ್ಲು
ಈ ಸರಣಿಯಲ್ಲಿ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಕೂಡ ವಿಶೇಷ ಸಾಧನೆ ಮಾಡುವ ನಿರೀಕ್ಷೆಯಿದೆ. ಮೆಲ್ಬೋರ್ನ್ನಲ್ಲಿ ನಡೆಯಲಿದ್ದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದರೆ 100 ಟೆಸ್ಟ್ ಪಂದ್ಯಗಳನ್ನು ಆಡಿದ ನ್ಯೂಜಿಲೆಂಡ್ನ ಏಳನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮಿಚೆಲ್ ಸ್ಯಾಂಟ್ನರ್ ಮತ್ತು ಬ್ಲೇರ್ ಟಿಕ್ನರ್ ಫಿಟ್ನೆಸ್ ಸಾಧಿಸಿದರೆ ಆಸ್ಟ್ರೇಲಿಯಾದಲ್ಲಿ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಇನ್ನು ಝ್ಯಾಕ್ ಫೌಲ್ಕ್ಸ್ ಮತ್ತು ಬೆನ್ ಸಿಯರ್ಸ್ ಗಾಯದ ಸಮಸ್ಯೆಯಿಂದಾಗಿ ಆಯ್ಕೆಗೆ ಲಭ್ಯವಿಲ್ಲ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳಾಪಟ್ಟಿ
- ಮೊದಲ ಟೆಸ್ಟ್: ಡಿಸೆಂಬರ್ 9-13, ಪರ್ತ್
- ಎರಡನೇ ಟೆಸ್ಟ್: ಡಿಸೆಂಬರ್ 17-21, ಅಡಿಲೇಡ್
- ಮೂರನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್
- ನಾಲ್ಕನೇ ಟೆಸ್ಟ್: ಜನವರಿ 4-8, ಸಿಡ್ನಿ
ನ್ಯೂಜಿಲೆಂಡ್ ಟೆಸ್ಟ್ ತಂಡ
ಟಾಮ್ ಲೇಥಮ್ (ನಾಯಕ), ಟಾಮ್ ಬ್ಲಂಡೆಲ್, ಡೆವೋನ್ ಕಾನ್ವೆ, ಜೇಕಬ್ ಡಫಿ, ಮ್ಯಾಟ್ ಫಷರ್, ಡೀನ್ ಫಾಕ್ಸ್ಕ್ರಾಫ್ಟ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ವಿಲ್ ಒ'ರೂರ್ಕ್, ಗ್ಲೆನ್ ಫಿಲಿಪ್ಸ್, ಮೈಕಲ್ ರೇ, ರಚಿನ್ ರವೀಂದ್ರ, ನೇಥನ್ ಸ್ಮಿತ್ ಮತ್ತು ವಿಲ್ ಯಂಗ್