ನವದೆಹಲಿ: ಮುಂದಿನ 2027ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಭಾರಿ ಆರ್ಥಿಕ ನಷ್ಟದ ಭೀತಿಯನ್ನು ಎದುರಿಸುತ್ತಿದೆ. ತವರಿನಲ್ಲಿ ಸಾಂಪ್ರದಾಯಿಕ ಆ್ಯಷಸ್ ಸರಣಿಯನ್ನು ಆಯೋಜಿಸುತ್ತಿದ್ದರೂ, ಬರೋಬ್ಬರಿ 627 ಕೋಟಿ ರೂಪಾಯಿ (50 ಮಿಲಿಯನ್ ಪೌಂಡ್) ನಷ್ಟ ಅನುಭವಿಸುವ ಸಾಧ್ಯತೆಯಿದೆ. ಇದಕ್ಕೆ ಪ್ರಮುಖ ಕಾರಣ ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಇಲ್ಲದಿರುವುದು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪ್ರಸಾರ ಹಕ್ಕುಗಳ ಆದಾಯದಲ್ಲಿ ಕಡಿತ ಮಾಡಲು ನಿರ್ಧರಿಸಿರುವುದು.
'ದಿ ಗಾರ್ಡಿಯನ್' ವರದಿಯ ಪ್ರಕಾರ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಆದಾಯದ ಮೇಲೆ ಈ ಎರಡು ಬೆಳವಣಿಗೆಗಳು ದೊಡ್ಡ ಪರಿಣಾಮ ಬೀರಲಿವೆ. ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳದಿರುವುದರಿಂದ ಪ್ರಸಾರ ಹಕ್ಕುಗಳು ಮತ್ತು ವಾಣಿಜ್ಯ ಒಪ್ಪಂದಗಳ ಮೂಲಕ ಸಿಗುವ ಆದಾಯದಲ್ಲಿ ಗಣನೀಯ ಕುಸಿತ ಉಂಟಾಗಲಿದೆ. ಭಾರತ ತಂಡದ ಪಂದ್ಯಗಳು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಅತ್ಯಂತ ಹೆಚ್ಚು ಆದಾಯ ತಂದುಕೊಡುವ ಸರಣಿಗಳಲ್ಲಿ ಒಂದಾಗಿವೆ.
IND vs NZ: ವೆಲ್ಲಿಂಗ್ಟನ್ನಲ್ಲಿ ಸೋಲುವ ದವಡೆಗೆ ಸಿಲುಕಿದ್ದ ಭಾರತ ತಂಡವನ್ನು ಗೆಲ್ಲಿಸಿದ ಮಳೆರಾಯ!
ಐಸಿಸಿಯಿಂದಲೂ ಆದಾಯ ಕಡಿತದ ಬಿಸಿ
ಇಂಗ್ಲೆಂಡ್ ಮಂಡಳಿಯ ಆರ್ಥಿಕ ಸಂಕಷ್ಟಕ್ಕೆ ಮತ್ತೊಂದು ಕಾರಣ ಐಸಿಸಿಯ ನಿರ್ಧಾರ. 2027ರಲ್ಲಿ ತನ್ನ 12 ಪೂರ್ಣ ಸದಸ್ಯ ರಾಷ್ಟ್ರಗಳಿಗೆ ಹಂಚಿಕೆ ಮಾಡಬೇಕಿದ್ದ ಪ್ರಸಾರ ಹಕ್ಕುಗಳ ಆದಾಯದ ಒಂದು ಭಾಗವನ್ನು ತಡೆಹಿಡಿಯಲು ಐಸಿಸಿ ನಿರ್ಧರಿಸಿದೆ.
2028ರಿಂದ ಆರಂಭವಾಗಲಿರುವ ಹೊಸ ಪ್ರಸಾರ ಹಕ್ಕುಗಳ ಒಪ್ಪಂದದಲ್ಲಿ ಆದಾಯ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಸದಸ್ಯ ರಾಷ್ಟ್ರಗಳಿಗೆ ಹಂಚಿಕೆಯಾಗುವ ಹಣದಲ್ಲಿ ಕಡಿತ ಮಾಡಿ, ಮುಂದಿನ ವರ್ಷಗಳಲ್ಲಿ ಉಂಟಾಗಬಹುದಾದ ಆದಾಯದ ಕುಸಿತವನ್ನು ಸರಿದೂಗಿಸಲು ಐಸಿಸಿ ಯೋಜಿಸಿದೆ. ಸಾಮಾನ್ಯವಾಗಿ 50 ಓವರ್ಗಳ ವಿಶ್ವಕಪ್ ನಡೆಯುವ ವರ್ಷದಲ್ಲಿ ಸದಸ್ಯ ರಾಷ್ಟ್ರಗಳಿಗೆ ಹೆಚ್ಚಿನ ಆದಾಯ ಹಂಚಿಕೆಯಾಗುತ್ತದೆ. ಆದರೆ 2027ರಲ್ಲಿ ಈ ಬಾರಿ ನಿರೀಕ್ಷಿತ ಮೊತ್ತಕ್ಕಿಂತ ಕಡಿಮೆ ಹಣ ಸಿಗುವ ಸಾಧ್ಯತೆಯಿದೆ.
ಆ್ಯಷಸ್ ಸರಣಿ ಇದ್ದರೂ ನಷ್ಟದ ಭೀತಿ
2027ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ ತವರಿನಲ್ಲಿ ಐದು ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗೆ ಭಾರಿ ಪ್ರೇಕ್ಷಕರ ಬೆಂಬಲ ಮತ್ತು ಟಿಕೆಟ್ ಮಾರಾಟದ ನಿರೀಕ್ಷೆಯಿದ್ದರೂ, ಭಾರತ ತಂಡದ ಪ್ರವಾಸದಿಂದ ಸಿಗುವಷ್ಟು ಪ್ರಸಾರ ಹಕ್ಕುಗಳ ಆದಾಯವನ್ನು ಆ್ಯಷಸ್ ಸರಣಿಯಿಂದ ಗಳಿಸಲು ಸಾಧ್ಯವಾಗುತ್ತಿಲ್ಲ.
2025ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಇಂಗ್ಲೆಂಡ್ ಮಂಡಳಿಯ ಆದಾಯ ಹೆಚ್ಚಾಗಿತ್ತು. ಆ ವರ್ಷ ECB 12.6 ಮಿಲಿಯನ್ ಪೌಂಡ್ (ಸುಮಾರು ₹158 ಕೋಟಿ) ಲಾಭ ದಾಖಲಿಸಿತ್ತು.
ʻಇನ್ನೂ 30 ರಿಂದ 40 ವಿಕೆಟ್ ಪಡೆಯಬಹುದಿತ್ತುʼ: ಮೊಹಮ್ಮದ್ ಶಮಿ ಟೆಸ್ಟ್ ನಿವೃತ್ತಿಗೆ ರವಿಶಾಸ್ತ್ರಿ ಬೇಸರ!
ಕೌಂಟಿ ಕ್ರಿಕೆಟ್ ಮೇಲೂ ಪರಿಣಾಮ?
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಆರ್ಥಿಕ ಸಂಕಷ್ಟ ದೇಶಿ ಕ್ರಿಕೆಟ್ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಇಂಗ್ಲೆಂಡ್ನ 18 ಪ್ರಥಮ ದರ್ಜೆ ಕೌಂಟಿಗಳ ಪೈಕಿ 10 ಕೌಂಟಿಗಳು ಇತ್ತೀಚಿನ ಹಣಕಾಸು ವರದಿಗಳಲ್ಲಿ ನಷ್ಟ ದಾಖಲಿಸಿವೆ. ಇವುಗಳಲ್ಲಿ ಬಹುತೇಕ ಕೌಂಟಿಗಳು ಇಸಿಬಿ ನೀಡುವ ಆರ್ಥಿಕ ನೆರವಿನ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಮಂಡಳಿಯ ಆದಾಯ ಕಡಿಮೆಯಾದರೆ ಕೌಂಟಿ ಕ್ರಿಕೆಟ್ ವ್ಯವಸ್ಥೆಯ ಮೇಲೂ ಒತ್ತಡ ಹೆಚ್ಚಾಗಬಹುದು.
ಆದರೆ, ಈ ನಷ್ಟವನ್ನು 50 ಮಿಲಿಯನ್ ಪೌಂಡ್ನಿಂದ 35 ಮಿಲಿಯನ್ ಪೌಂಡ್ಗೆ (ಸುಮಾರು ₹439 ಕೋಟಿ) ಇಳಿಸುವ ವಿಶ್ವಾಸವನ್ನು ಇಸಿಬಿ ಹೊಂದಿದೆ ಎನ್ನಲಾಗಿದೆ. ಐಸಿಸಿಯಿಂದ ಎಷ್ಟು ಮೊತ್ತದ ಆದಾಯವನ್ನು ತಡೆಹಿಡಿಯಲಾಗುತ್ತದೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಹೆಚ್ಚುವರಿ ವಾಣಿಜ್ಯ ಒಪ್ಪಂದಗಳು ಮತ್ತು ಕಾರ್ಯಕ್ರಮಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಮಂಡಳಿ ಪ್ರಯತ್ನಿಸುತ್ತಿದೆ.