ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಜು ಇನ್‌, ವೈಭವ್‌ ಔಟ್‌! ಐರ್ಲೆಂಡ್‌ ವಿರುದ್ಧ ಮೊದಲ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಮುಗಿಸಿಕೊಂಡಿರುವ ಭಾರತ ತಂಡ ಇದೀಗ ಐರ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಗೆ ಸಜ್ಜಾಗುತ್ತಿದೆ. ಜೂನ್‌ 26 ರಂದು ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಯನ್ನು ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡ ಆಡಲಿದೆ. ಮೊದಲನೇ ಟಿ20ಐಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ಇಲ್ಲಿ ವಿವರಿಸಲಾಗಿದೆ.

ಐರ್ಲೆಂಡ್‌ ವಿರುದ್ಧ ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ನವದೆಹಲಿ: ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ(ICC T20 World Cup 2026) ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ ಇದೇ ಮೊದಲ ಬಾರಿ ಭಾರತ ತಂಡ, ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಯನ್ನು (IND vs IRE) ಆಡಲು ಸಜ್ಜಾಗುತ್ತಿದೆ. ಜೂನ್‌ 26 ರಂದು ಬೆಲ್‌ಫಾಸ್ಟ್‌ನ ಸಿವಿಲ್‌ ಸರ್ವೀಸ್‌ ಕ್ರಿಕೆಟ್‌ ಕ್ಲಬ್‌ ಮೈದಾನದಲ್ಲಿ ನಡೆಯುವ ಮೊದಲನೇ ಟಿ20ಐ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ. ಟಿ20 ವಿಶ್ವಕಪ್‌ ಗೆದ್ದಿದ್ದ ಸೂರ್ಯಕುಮಾರ್‌ ಯಾದವ್‌ ಅವರನ್ನು ಕೈ ಬಿಡಲಾಗಿದ್ದು, ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತ ತಂಡ, ಐರ್ಲೆಂಡ್‌ನಲ್ಲಿ ಟಿ20ಐ ಸರಣಿಯನ್ನು ಆಡಲಿದೆ.

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 776 ರನ್‌ಗಳ ಮೂಲಕ ಆರೆಂಜ್‌ ಕ್ಯಾಪ್‌ ಗೆದ್ದಿದ್ದ ವೈಭವ್‌ ಸೂರ್ಯವಂಶಿಗೆ ಅಂತಾರಾಷ್ಟೀಯ ಕ್ರಿಕೆಟ್‌ ಪದಾರ್ಪಣೆಯನ್ನು ಕಣ್ತುಂಬಿಸಿಕೊಳ್ಳಲು ಎಲ್ಲರೂ ಎದುರು ನೋಡುತ್ತಿದ್ದಾರೆ. 15ನೇ ವಯಸ್ಸಿನ ಆಟಗಾರ ಒಂದು ವೇಳೆ ಮೊದಲನೇ ಪಂದ್ಯದಲ್ಲಿ ಆಡಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ, ಆ ಮೂಲಕ ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಲಿದ್ದಾರೆ. ಸಚಿನ್‌ 16ನೇ ವಯಸ್ಸಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ʻವೈಭವ್‌ ಸೂರ್ಯವಂಶಿ ಎಲ್ಲರನ್ನೂ ಮುಜುಗರಕ್ಕೀಡು ಮಾಡುತ್ತಿದ್ದಾರೆʼ: ಆಕಾಶ್‌ ಚೋಪ್ರಾ!

ಆದರೆ, ಮೊದಲನೇ ಟಿ20ಐ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಆಡುವುದು ಅನುಮಾನ. ಏಕೆಂದರೆ ಭಾರತ ತಂಡದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ಟಿ20 ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಇನಿಂಗ್ಸ್‌ ಆರಂಭಿಸಲಿದ್ದು, ಮೂರನೇ ಕ್ರಮಾಂಕದಲ್ಲಿ ಇನ್‌ಫಾರ್ಮ್‌ ಇಶಾನ್‌ ಕಿಶನ್‌ ಆಡಲಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ ಅವರು ಬ್ಯಾಟ್‌ ಮಾಡಲಿದ್ದಾರೆ. ಆ ಮೂಲಕ ಮಾಜಿ ನಾಯಕ ಸೂರ್ಯಕುಮಾರ್‌ ಅವರ ಸ್ಥಾನವನ್ನು ತುಂಬಲಿದ್ದಾರೆ. 2023ರ ಡಿಸೆಂಬರ್‌ ಬಳಿಕ ಇದೇ ಮೊದಲ ಬಾರಿ ಶ್ರೇಯಸ್‌ ಅಯ್ಯರ್‌, ಟಿ20ಐ ಪಂದ್ಯವನ್ನು ಆಡಲಿದ್ದಾರೆ. ಐದನೇ ಕ್ರಮಾಂಕದಲ್ಲಿ ತಿಲಕ್‌ ವರ್ಮಾ ಆಡಲಿದ್ದು, ಆಲ್‌ರೌಂಡರ್‌ಗಳ ಸ್ಥಾನದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ, ಶಿವಂ ದುಬೇ ಹಾಗೂ ಅಕ್ಷರ್‌ ಪಟೇಲ್‌ ಆಡಲಿದ್ದಾರೆ.

IND vs ENG ಒಡಿಐ ಸರಣಿಗೆ ಆಯ್ಕೆಯಾಗದ ಭಾರತದ ಟಾಪ್‌ 5 ಆಟಗಾರರು!

ಗಾಯದಿಂದಾಗಿ ವರುಣ್‌ ಚಕ್ರವರ್ತಿ ಅವರು ಟಿ20ಐ ಸರಣಿಯಿಂದ ಹೊರ ನಡೆದಿದ್ದಾರೆ ಹಾಗೂ ಕುಲ್ದೀಪ್‌ ಯಾದವ್‌ ಅವರನ್ನು ಕೂಡ ಟಿ20ಐ ತಂಡಕ್ಕೆ ಸೇರಿಸಿಲ್ಲ. ಹಾಗಾಗಿ ರವಿ ಬಿಷ್ಣೋಯ್‌ ಅವರಿಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ. ವೇಗದ ಬೌಲರ್‌ ಅರ್ಷದೀಪ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾ ಅವರು ವಿಶೇಷ ವೇಗಿಗಳಾಗಿ ಆಡಲಿದ್ದಾರೆ. ವೈಭವ್‌ ಸೂರ್ಯವಂಶಿ ಅವರ ಜೊತೆಗೆ ಪ್ರಿನ್ಸ್‌ ಯಾದವ್‌ ಅವರು ಕೂಡ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ.

ಐರ್ಲೆಂಡ್‌ ವಿರುದ್ಧ ಮೊದಲನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI: ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌ (ನಾಯಕ), ತಿಲಕ್‌ ವರ್ಮಾ, ಶಿವಂ ದುಬೇ, ಅಕ್ಷರ್‌ ಪಟೇಲ್‌, ನಿತೀಶ್‌ ಕುಮಾರ್‌ ರೆಡ್ಡಿ, ಹರ್ಷಿತ್‌ ರಾಣಾ, ರವಿ ಬಿಷ್ಣೋಯ್‌, ಅರ್ಷದೀಪ್‌ ಸಿಂಗ್‌