ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ 64 ರನ್‌ಗಳ ಭರ್ಜರಿ ಗೆಲುವು ಪಡೆಯುವ ಮೂಲಕ 2026ರ ಐಸಿಸಿ ಮಹಿಳಾ ವಿಶ್ವಕಪ್ ( Women's T20 World Cup 2026) ಟೂರ್ನಿಯಲ್ಲಿ ಭಾರತ ಮಹಿಳಾ ತಂಡ (India women team) ಶುಭಾರಂಭ ಪಡೆದಿದೆ. ಇದರ ಹೊರತಾಗಿಯೂ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡದ ಬಗ್ಗೆ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ನಿರಾಶಾದಾಯಕ ಹೇಳಿಕೆ ನೀಡಿದ್ದಾರೆ. ಆರಂಭಿಕ ಪಂದ್ಯವನ್ನು ಗೆದ್ದ ಹೊರತಾಗಿಯೂ ಭಾರತ ಮಹಿಳಾ ತಂಡ ಈ ಟೂರ್ನಿಯಲ್ಲಿ ಹೆಚ್ಚು ದೂರ ಸಾಗುವುದಿಲ್ಲ. ಏಕೆಂದರೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ರೀತಿ ಹೆಚ್ಚಿನ ಡೆಪ್ತ್ ಹೊಂದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ʻಆಶ್ ಕಿ ಬಾತ್ʼ ಎಂಬ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್, "ಭಾರತ ಮಹಿಳಾ ತಂಡ ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ದೂರ ಸಾಗಲಿದೆ ಎಂದು ನನಗೆ ಖಚಿತವಿಲ್ಲ, ಏಕೆಂದರೆ ಈ ತಂಡದ ಲೈನ್ ಅಪ್ ಅಷ್ಟೊಂದು ಬಲಶಾಲಿಯಾಗಿಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸ್ಪಿನ್ ಬೌಲಿಂಗ್ ಅತ್ಯಂತ ಪ್ರಾಬಲ್ಯವನ್ನು ಮೆರೆದಿತ್ತು. ಆದರೂ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳಷ್ಟು ಭಾರತ ಎಲ್ಲಾ ವಿಭಾಗಗಳಲ್ಲಿ ಶಕ್ತಿಯುತವಾಗಿಲ್ಲ," ಎಂದು ಹೇಳಿದ್ದಾರೆ.
ಡೈವಿಂಗ್ ಕ್ಯಾಚ್ ಹಿಡಿದ ಶ್ರೇಯಾಂಕ ಪಾಟೀಲ್; ವಿಡಿಯೊ ವೈರಲ್
"ಭಾರತ ತಂಡದ ಸಂಯೋಜನೆಯಲ್ಲಿ ಬಲಿಷ್ಠ ಪವರ್-ಹಿಟ್ಟಿಂಗ್ ಆಟಗಾರ್ತಿಯರ ಕೊರತೆ ಸ್ವಲ್ಪ ಮಟ್ಟಿಗೆ ಕಂಡುಬರುತ್ತಿದೆ. ಬಲಿಷ್ಠ ಎದುರಾಳಿಗಳ ವಿರುದ್ಧದ ಕಠಿಣ ಪಂದ್ಯಗಳಲ್ಲಿ ಇದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ಗಳೊಂದಿಗೆ ಹೋಲಿಸಿದರೆ, ಭಾರತದ ತಂಡದ ಒಟ್ಟಾರೆ ಡೆಪ್ತ್ ಇನ್ನೂ ಕಳವಳಕಾರಿಯಾಗಿದೆ. ವಿಶೇಷವಾಗಿ ಮಧ್ಯಮ ಕ್ರಮಾಂಕ ಮತ್ತು ಫಿನಿಷರ್‌ಗಳ ವಿಭಾಗದಲ್ಲಿ ಭಾರತ ಇನ್ನಷ್ಟು ಬಲಿಷ್ಠ ಆಯ್ಕೆಗಳನ್ನು ಹೊಂದಬೇಕಾದ ಅಗತ್ಯವಿದೆ," ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
ಪಾಕಿಸ್ತಾನವನ್ನು 64 ರನ್‌ಗಳಿಂದ ಮಣಿಸಿದ್ದ ಭಾರತ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಮಹಿಳಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್‌ಗಳನ್ನು ಕಲೆಹಾಕಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ 68 ರನ್‌ಗಳ ಅಮೂಲ್ಯ ಇನಿಂಗ್ಸ್ ಆಡಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 36 ರನ್‌ಗಳ ಕೊಡುಗೆ ನೀಡಿದರು. ಇನ್ನು ರಿಚಾ ಘೋಷ್ ಕೇವಲ 17 ಎಸೆತಗಳಲ್ಲಿ 34 ರನ್‌ಗಳ ಸಿಡಿಲಬ್ಬರದ ಇನಿಂಗ್ಸ್ ಆಡಿದರು. ಆ ಮೂಲಕ ಭಾರತ ತಂಡ ಸ್ಪರ್ಧಾತ್ಮಕ ಮೊತ್ತ ತಲುಪಲು ನೆರವಾದರು.
ಮಹಿಳಾ ಟಿ20 ವಿಶ್ವಕಪ್; ಪಾಕ್ ಮಣಿಸಿ ಭಾರತ ಗೆಲುವಿನ ಶುಭಾರಂಭ
171 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಉತ್ತಮ ಆರಂಭ ಪಡೆದರೂ, ಬಳಿಕ ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿ 106 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ದೀಪ್ತಿ ಶರ್ಮಾ ಐದು ವಿಕೆಟ್‌ಗಳನ್ನು ಕಬಳಿಸಿ ಪಂದ್ಯದ ಹೀರೋ ಆಗಿ ಹೊರಹೊಮ್ಮಿದರು. ಈ ಐದು ವಿಕೆಟ್ ಸಾಧನೆಯೊಂದಿಗೆ ದೀಪ್ತಿ ಶರ್ಮಾ ಮಹಿಳೆಯರ ಟಿ20 ಅಂರಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಭಾರತ ತಂಡ ಇದೀಗ ಎರಡು ಅಂಕಗಳೊಂದಿಗೆ ಗುಂಪು 'ಎ'ನಲ್ಲಿ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇದರ್ಲೆಂಡ್ಸ್, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳು ಕೂಡ ಇದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತದ ಮುಂದಿನ ಪಂದ್ಯ ಜೂನ್ 17ರಂದು ನೆದರ್ಲೆಂಡ್ ವಿರುದ್ಧ ನಡೆಯಲಿದೆ.