ದುಬೈ: ಫಖಾರ್ ಝಮಾನ್ (50 ರನ್) ಅರ್ಧಶತಕ ಹಾಗೂ ಬೌಲರ್‌ಗಳ ಪರಿಣಾಮ ಬೌಲಿಂಗ್ ಸಹಾಯದಿಂದ ಪಾಕಿಸ್ತಾನ (Pakistan) ತಂಡ, ಎದುರಾಳಿ ಯುಎಇ ವಿರುದ್ದದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ (PAK vs UAE) 41 ರನ್‌ಗಳ ಗೆಲುವು ಪಡೆದಿದೆ. ಆ ಮೂಲಕ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಎ ಗುಂಪಿನಿಂದ ಸೂಪರ್-4ಕ್ಕೆ ಪ್ರವೇಶ ಮಾಡಿತು. ಸೋಲು ಅನುಭವಿಸಿದ ಯುಎಇ ತಂಡ, ಟೂರ್ನಿಯಿಂದ ಎಲಿಮಿನೇಟ್ ಆಯಿತು. ಇದಕ್ಕೂ ಮುನ್ನ ಈ ಗುಂಪಿನಿಂದ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಸೂಪರ್-4ಕ್ಕೆ ಪ್ರವೇಶ ಮಾಡಿತ್ತು.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಪಾಕಿಸ್ತಾನ ತಂಡ 146 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಯುಎಇ ತಂಡ, 17.4 ಓವರ್‌ಗಳಿಗೆ 105 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು. ಯುಎಇ ಪರ 35 ರನ್ ಗಳಿಸಿದ ರಾಹುಲ್ ಚೋಪ್ರಾ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಧ್ರುವ್ ಪ್ರಶರ್ 20 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ವೈಯಕ್ತಿಕ 20ರ ಗಡಿ ದಾಟಲಿಲ್ಲ. ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಹಾಗೂ ಅಬ್ರಾರ್ ಅಹ್ಮದ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
Asia Cup 2025: ಪಾಕಿಸ್ತಾನದ ಬಳಿ ಕ್ಷಮೆಯಾಚಿಸಿದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್!
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಪಾಕಿಸ್ತಾನ ತಂಡ, ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಫಖಾರ್ ಝಮಾನ್ (50 ರನ್) ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 146 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಯುಎಇ ತಂಡಕ್ಕೆ ಸಾಧಾರಣ ಮೊತ್ತದ ಗುರಿಯನ್ನು ನೀಡುವಲ್ಲಿ ಶಕ್ತವಾಯಿತು.
ಪಾಕಿಸ್ತಾನದ ಬ್ಯಾಟಿಂಗ್ ವೈಫಲ್ಯ
ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೂ ಪಾಕಿಸ್ತಾನ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. ಓಪನಿಂಗ್ ಬ್ಯಾಟ್ಸ್‌ಮನ್‌ಗಳಾದ ಸಹಿಬ್ದಾಝಾ ಫರ್ಹಾನ್ ಹಾಗೂ ಸೈಮ್ ಆಯುಬ್ ಅವರನ್ನು ಜುನೈದ್ ಸಿದ್ದಿಕ್ ಔಟ್‌ಮಾಡಿದರು. ಆ ಮೂಲಕ ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಕೇವಲ 9 ರನ್‌ಗೆ ಪಾಕ್ ಆರಂಭಿಕ ಆಘಾತ ಅನುಭವಿಸಿತ್ತು. ಮೂರನೇ ವಿಕೆಟ್‌ಗೆ ಫಖಾರ್ ಝಮಾನ್ ಹಾಗೂ ಸಲ್ಮಾನ್ ಅಘಾ ಅವರು 61 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಆದರೆ, ಈ ಇಬ್ಬರನ್ನು ಹೊರತುಪಡಿಸಿ ಇನ್ನುಳಿದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ವಿಫಲರಾದರು.
ಫಖಾರ್ ಝಮಾನ್ ಅರ್ಧಶತಕ
ಪಾಕಿಸ್ತಾನ ಪರ ಫಖಾರ್ ಝಮಾನ್ ಮಾತ್ರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. ಅವರು ಆಡಿದ 36 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 50 ರನ್‌ಗಳನ್ನು ಕಲೆ ಹಾಕಿದರು. ಮೊಹಮ್ಮದ್ ಹ್ಯಾರಿಸ್ 18 ರನ್ ಗಳಿಸಿದರೆ, ಕೊನೆಯಲ್ಲಿ ಶಾಹೀನ್ ಶಾ ಅಫ್ರಿದಿ ಅವರು ಕೇವಲ 14 ಎಸೆತಗಳಲ್ಲಿ ಅಜೇಯ 29 ರನ್‌ಗಳನ್ನು ಬಾರಿಸಿದರು. ಆ ಮೂಲಕ ತಂಡದ ಮೊತ್ತವನ್ನು 140ರ ಗಡಿಯನ್ನು ದಾಟಿಸಿದರು.
ಯುಎಇ ಪರ ಜುನೈದ್ ಸಿದ್ದಿಕ್ 4 ವಿಕೆಟ್ ಕಿತ್ತರೆ, ಸಿಮ್ರಾನ್‌ಜೀತ್ ಸಿಂಗ್ 3 ವಿಕೆಟ್ ಪಡೆದರು.