ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಪಂದ್ಯಗಳು ಸದಾ ಹೈವೋಲ್ಟೇಜ್‌ನಿಂದ ಕೂಡಿರುತ್ತವೆ. ಆದರೆ ಇತ್ತೀಚಿಗೆ ಮಹಿಳಾ ಏಷ್ಯಾ ಕಪ್ (Women's Asia Cup 2026) ಪಂದ್ಯದಲ್ಲಿ ನಡೆದ ಹೊಸ ವಿವಾದವೊಂದು ಮೈದಾನದ ಗಡಿಯನ್ನು ದಾಟಿದೆ. ಭಾರತ ಭರ್ಜರಿ ಗೆಲುವು ಸಾಧಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಏಕಾಏಕಿ ಒಂದು ವಿಡಿಯೊ ವೈರಲ್ ಆಗಿದ್ದು, ಪಂದ್ಯಕ್ಕಿಂತಲೂ ಈ ವಿಡಿಯೊ ಅಭಿಮಾನಿಗಳ ಗಮನ ಸೆಳೆದಿದೆ. ವಿಡಿಯೊದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಭಾರತೀಯ ಆಟಗಾರ್ತಿ ಕ್ರಾಂತಿ ಗೌಡ್ ಅವರನ್ನು ಗುರಿಯಾಗಿಸಿ ವೈಯಕ್ತಿಕ ಹಾಗೂ ಲಿಂಗಭೇದದ ಆಕ್ಷೇಪಾರ್ಹ ಟೀಕೆಗಳನ್ನು ಮಾಡುತ್ತಿರುವುದು ಕೇಳಿಬಂದಿದೆ.
ಮಹಿಳಾ ಕ್ರೀಡಾಪಟುಗಳ ನೋಟ, ದೇಹದ ವಿನ್ಯಾಸ ಅಥವಾ ಲಿಂಗದ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಕ್ರೀಡಾ ಕ್ಷೇತ್ರದಲ್ಲಿ ಬಹಳ ಹಿಂದಿನಿಂದಲೂ ಕಂಡುಬರುವ ಸಮಸ್ಯೆಯಾಗಿದೆ. ವೈರಲ್ ಕ್ಲಿಪ್‌ನಲ್ಲಿ ಕೆಲ ಪ್ರೇಕ್ಷಕರು ಕ್ರಾಂತಿ ಗೌಡ್ ಅವರ ದೈಹಿಕ ವಿನ್ಯಾಸವನ್ನು ಅವಹೇಳನ ಮಾಡುವ ರೀತಿಯಲ್ಲಿ, “ಇವರು ಮಹಿಳೆಯಲ್ಲ, ಪುರುಷ ಆಟಗಾರ” ಎಂಬಂತಹ ಕೆಟ್ಟ ಹಾಗೂ ಆಕ್ಷೇಪಾರ್ಹ ಟೀಕೆಗಳನ್ನು ಮಾಡುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.
ಒಬ್ಬ ಕ್ರೀಡಾಪಟುವಿನ ಹಲವು ವರ್ಷಗಳ ಪರಿಶ್ರಮ, ಹೋರಾಟ ಮತ್ತು ಪ್ರತಿಭೆಯನ್ನು ಆಕೆಯ ಲಿಂಗದ ಆಧಾರದ ಮೇಲೆ ಅಳೆಯುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ವರ್ತನೆ ಕೇವಲ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿರುವುದಷ್ಟೇ ಅಲ್ಲದೆ, ಆಟಗಾರ್ತಿಯ ಆತ್ಮಗೌರವದ ಮೇಲಿನ ನೇರ ದಾಳಿಯಾಗಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳ ಆಕ್ರೋಶ ಸ್ಫೋಟಗೊಂಡಿದೆ. ಆಟ ಎಂದರೆ ಯಾವುದೇ ಆಟಗಾರನ ಗೌರವಕ್ಕೆ ಧಕ್ಕೆ ತರುವುದು ಖಂಡಿತವಾಗಿಯೂ ಅಲ್ಲ ಎಂದು ಕ್ರೀಡಾಭಿಮಾನಿಗಳು ಸ್ಪಷ್ಟವಾಗಿ ಹೇಳಿದ್ದಾರೆ.
ಕ್ರೀಡಾಂಗಣಕ್ಕೆ ಬಂದು ತಮ್ಮ ತಂಡವನ್ನು ಬೆಂಬಲಿಸುವುದು ಸರಿಯಾದರೂ ಯಾವುದೇ ಕ್ರೀಡಾಪಟುವಿನ ಲಿಂಗ ಗುರುತಿನ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಮಾಡುವುದು ಕ್ರೀಡಾ ಸ್ಫೂರ್ತಿಯ ಸಂಪೂರ್ಣ ಅವಮಾನ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ವಿವಾದವು ಮಹಿಳಾ ಕ್ರೀಡಾಪಟುಗಳು ಇಂದಿಗೂ ಮೈದಾನದ ಒಳಗೆ ಮತ್ತು ಹೊರಗೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಮತ್ತೊಮ್ಮೆ ತೋರಿಸಿದೆ.
ಭಾರತ ತಂಡಕ್ಕೆ ಭರ್ಜರಿ ಗೆಲುವು
ಮೈದಾನದ ಹೊರಗೆ ಈ ವಿವಾದ ಸದ್ದು ಮಾಡುತ್ತಿದ್ದರೆ, ಪಂದ್ಯದ ವಿಚಾರಕ್ಕೆ ಬಂದಾಗ ಭಾರತೀಯ ಬೌಲರ್‌ಗಳ ಪ್ರಾಬಲ್ಯ ಸ್ಪಷ್ಟವಾಗಿ ಕಾಣಿಸಿತು. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತ ತಂಡ, ಪಾಕಿಸ್ತಾನವನ್ನು ಕೇವಲ 55 ರನ್‌ಗಳಿಗೆ ಆಲೌಟ್ ಮಾಡಿತು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಇದುವರೆಗಿನ ಕನಿಷ್ಠ ಮೊತ್ತವಾಗಿದೆ. ಈ ಹೀನಾಯ ಸೋಲಿಗೆ ಪ್ರಮುಖ ಕಾರಣ ಭಾರತೀಯ ಸ್ಪಿನ್ನರ್‌ಗಳ ಸ್ಪಿನ್ ಮೋಡಿ. ಅವರು ಪಾಕಿಸ್ತಾನದ ಬ್ಯಾಟಿಂಗ್ ಕ್ರಮಾಂಕವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದರು.
ಯುವ ಸ್ಪಿನ್ನರ್‌ಗಳಾದ ಶ್ರೀ ಚರಣಿ ಮತ್ತು ಪ್ರೇಮಾ ರಾವತ್ ತಲಾ 3 ವಿಕೆಟ್ ಪಡೆದು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಚರಣಿ ತಮ್ಮ 4 ಓವರ್‌ಗಳಲ್ಲಿ ಕೇವಲ 7 ರನ್ ನೀಡಿದರೆ, ಪ್ರೇಮಾ ರಾವತ್ ಕೂಡ 4 ಓವರ್‌ಗಳಲ್ಲಿ ಕೇವಲ 9 ರನ್ ನೀಡಿ ಪಾಕಿಸ್ತಾನಿ ಬ್ಯಾಟರ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸಿದರು. 56 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ಯಾವುದೇ ಆತುರವಿಲ್ಲದೆ ಕೇವಲ 8.4 ಓವರ್‌ಗಳಲ್ಲಿ ಗುರಿ ತಲುಪಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.