ಚೆನ್ನೈ: ಪ್ರಸಿಧ್ ಕೃಷ್ಣPrasdh Krishna) ಅವರ ಮಾರಕ ಬೌಲಿಂಗ್ ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಶತಕದ ಬಲದಿಂದ ಭಾರತ ತಂಡ, ಮೂರನೇ ಪಂದ್ಯದಲ್ಲಿಯೂ (IND vs AFG) ಅಫ್ಘಾನಿಸ್ತಾನ ಎದುರು 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇನ್ನು ಕೊನೆಯ ಪಂದ್ಯವನ್ನೂ ಸೋಲುವ ಮೂಲಕ ಪ್ರವಾಸಿ ಆಫ್ಘನ್ ತಂಡಕ್ಕೆ ಭಾರಿ ನಿರಾಶೆ ಅನುಭವಿಸಿತು.
ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿದ್ದ ಭಾರತ ತಂಡ, ಮೂರನೇ ಪಂದ್ಯದಲ್ಲಿಯೇ ಆಫ್ಘನ್ ತಂಡದ ಎದುರು ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿತು. ಶನಿವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬೌಲಿಂಗ್ ಮಾಡಬೇಕಾದ ಸನ್ನಿವೇಶ ಎದುರಾದರೂ ಭಾರತ ತಂಡದ ಬೌಲರ್‌ಗಳು ಅಚ್ಚುಕಟ್ಟಾಗಿ ತಮ್ಮ ಕಾರ್ಯವನ್ನು ಮುಗಿಸಿದರು. ಆ ಮೂಲಕ ಎದುರಾಳಿ ತಂಡವನ್ನು 218 ರನ್‌ಗಳಿಗೆ ಆಲ್‌ಔಟ್ ಮಾಡಿತು.
IND vs AFG: ಭಾರತ ಎದುರು ಚೊಚ್ಚಲ ಒಡಿಐ ಶತಕ ಬಾರಿಸಿದ ಹಷ್ಮತ್‌ವುಲ್ಲಾ ಶಾಹಿಡಿ!
ಇದರ ಶ್ರೇಯ ಕನ್ನಡಿಗ ಪ್ರಸಿಧ್ ಕೃಷ್ಣಗೆ ಸಲ್ಲಬೇಕು. ಇವರು ಹೊಸ ಚೆಂಡಿನಲ್ಲಿಯೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಒಟ್ಟಾರೆ ಇವರು ಬೌಲ್ ಮಾಡಿದ 8.2 ಓವರ್‌ಗಳಿಗೆ ಕೇವಲ 23 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರಿಗೆ ಸಾಥ್ ನೀಡಿದ ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್ ಹಾಗೂ ಹರ್ಷ್ ದುಬೇ ತಲಾ ಒಂದೊಂದು ವಿಕೆಟ್ ಕಿತ್ತರು.
ಹಷ್ಮತ್‌ವುಲ್ಲಾ ಶಾಹಿದಿ ಚೊಚ್ಚಲ ಶತಕ
ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ನಾಯಕ ಹಷ್ಮತ್‌ವುಲ್ಲಾ ಶಾಹಿದಿ ಕೊನೆಯವರೆಗೂ ಬ್ಯಾಟ್ ಮಾಡಿ ತಮ್ಮ ತಂಡಕ್ಕೆ ಗೌರವ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು. ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಆಡಿದ ಅವರು 131 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ ತಮ್ಮ ಒಡಿಐ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದರು.
ಇವರ ಜೊತೆಗೆ 105 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದ ಅಝ್ಮತ್‌ವುಲ್ಲಾ ಒಮರ್ಜಾಯ್ ಅವರು 50 ರನ್‌ಗಳನ್ನು ಕೊಡುಗೆಯನ್ನು ನೀಡಿದ್ದರು. ಇವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್, ನಾಯಕನಿಗೆ ಸಾಥ್ ನೀಡಲಿಲ್ಲ. ಮೊಹಮ್ಮದ್ ನಬಿ (21) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾದರೂ ನಾಯಕ ಶಾಹಿದಿ ಜೊತೆಗೆ 57 ರನ್‌ಗಳ ಜೊತೆಯಾಟವನ್ನು ಆಡಿದ್ದರು.
ರೋಹಿತ್-ಜೈಸ್ವಾಲ್ ಜುಗಲ್‌ಬಂದಿ
219 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ 170 ರನ್‌ಗಳ ಬೃಹತ್ ಜೊತೆಯಾಟವನ್ನು ಆಡಿ, ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಕಳೆದ ಎರಡು ಪಂದ್ಯಗಳಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾಗಿದ್ದ ಮಾಜಿ ನಾಯಕ ರೋಹಿತ್ ಶರ್ಮಾ, 69 ಎಸೆತಗಳಲ್ಲಿ 79 ರನ್‌ಗಳನ್ನು ಸಿಡಿಸಿ, ತಂಡವನ್ನು ಗೆಲುವಿನ ಸಮೀಪ ತಂದು ಔಟ್ ಆದರು.
ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
ಕಳೆದ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಕೈ ಚೆಲ್ಲಿಕೊಂಡಿದ್ದ ಯಶಸ್ವಿ ಜೈಸ್ವಾಲ್, ಮೂರನೇ ಪಂದ್ಯದಲ್ಲಿ ತಮ್ಮ ತಪ್ಪನ್ನು ತಿದ್ದಿಕೊಂಡರು. ಯಾವುದೇ ತಪ್ಪುಹೊಡೆತಗಳಿಗೆ ಕೈ ಹಾಕದ ಅವರು ಕೊನೆಯವರೆಗೂ ಬ್ಯಾಟ್ ಮಾಡಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರು ಆಡಿದ 86 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ ಅಜೇಯ 110 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತಂಡವನ್ನು28.4 ಓವರ್‌ಗಳಲ್ಲಿಯೇ ಗೆಲುವು ತಂದುಕೊಟ್ಟರು. ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಅಜೇಯ 20 ರನ್ ಗಳಿಸಿದರು.