ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತೀಕಾ ರಾವಲ್ ಅಬ್ಬರದ ಶತಕಕ್ಕೆ ಮಣಿದ ಜಿಂಬಾಬ್ವೆ, ಭಾರತ ವನಿತೆಯರಿಗೆ 9 ವಿಕೆಟ್‌ಗಳ ಭರ್ಜರಿ ಜಯ!

ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪ್ರತೀಕಾ ರಾವಲ್ ಅಜೇಯ 100 ರನ್ ಗಳಿಸಿ ಭಾರತಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ಶಫಾಲಿ ವರ್ಮಾ 64 ರನ್ ಗಳಿಸಿದರೆ, ಶ್ರೀ ಚರಣಿ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಜಿಂಬಾಬ್ವೆ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ.

ವಡೋದರಾ: ಪ್ರತೀಕಾ ರಾವಲ್‌ (Pratika Rawal) ಶತಕದ ಬಲದಿಂದ ಭಾರತ ಮಹಿಳಾ ಕ್ರಿಕೆಟ್ ತಂಡ, ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ(INDW vs ZIMW) ಭರ್ಜರಿ ಗೆಲುವು ಪಡೆದಿದೆ. ಶುಕ್ರವಾರ (ಅಕ್ಟೋಬರ್ 23) ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ ಐತಿಹಾಸಿಕ ದ್ವಿಪಕ್ಷೀಯ ಮಹಿಳಾ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಪ್ರತೀಕಾ ರಾವಲ್ ಅವರ ಅಜೇಯ ಶತಕ ಹಾಗೂ ಬೌಲರ್ ಶ್ರೀ ಚರಣಿ ಅವರ ಅಮೋಘ ಪ್ರದರ್ಶನದ ನೆರವಿನಿಂದ ಭಾರತ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ ತಂಡ ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿತು. ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೂ, ಬೆಲವ್ಡ್ ಬಿಜಾ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಜಿಂಬಾಬ್ವೆ ತಂಡ 49.5 ಓವರ್‌ಗಳಲ್ಲಿ 197 ರನ್ ಗಳಿಸಿತು. ಜಿಂಬಾಬ್ವೆ ಪರ ಬೆಲವ್ಡ್ ಬಿಜಾ 62 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಅವರು ತಂಡದ ಇನಿಂಗ್ಸ್‌ ಅನ್ನು ನಿಭಾಯಿಸಲು ಪ್ರಯತ್ನಿಸಿದರು. ಮಿಚೆಲ್ ಮವುಂಗಾ 23 ಎಸೆತಗಳಲ್ಲಿ 29 ರನ್ ಗಳಿಸಿ ಕೊನೆಯಲ್ಲಿ ರನ್ ವೇಗ ಹೆಚ್ಚಿಸಿದರು.

15 ಬಾಲ್‌ಗಳಲ್ಲಿ 42 ರನ್‌ ಸಿಡಿಸಿ ಇರ್ಫಾನ್‌ ಪಠಾಣ್‌ ದಾಖಲೆಯನ್ನು ಮುರಿದ ನಮನ್‌ ಧೀರ್‌!

ಭಾರತದ ಪರ ಶ್ರೀ ಚರಣಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಕ್ರಾಂತಿ ಗೌಡ್ ಮೂರು ವಿಕೆಟ್ ಪಡೆದು ಎದುರಾಳಿ ತಂಡದ ಕುಸಿತಕ್ಕೆ ಕಾರಣರಾದರು. ದೀಪ್ತಿ ಶರ್ಮಾ ಎರಡು ವಿಕೆಟ್ ಪಡೆದರೆ, ಶಫಾಲಿ ವರ್ಮಾ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

ಶ್ರೀ ಚರಣಿ ಬೌಲಿಂಗ್‌ಗೆ ಜಿಂಬಾಬ್ವೆ ತತ್ತರ

ಭಾರತದ ಪರ ಸ್ಪಿನ್ನರ್ ಶ್ರೀ ಚರಣಿ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದರು. ಅವರು 23 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಜಿಂಬಾಬ್ವೆ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಆರಂಭಿಕ ಹಂತದಲ್ಲಿ ಜಿಂಬಾಬ್ವೆ ರನ್ ಗಳಿಸುತ್ತಿದ್ದರೂ, ಶ್ರೀ ಚರಣಿ ದಾಳಿಗಿಳಿದ ಬಳಿಕ ಪಂದ್ಯದ ಗತಿ ಬದಲಾಯಿತು. ಅವರು ಪ್ರಮುಖ ಬ್ಯಾಟರ್‌ಗಳನ್ನು ಔಟ್ ಮಾಡುವ ಮೂಲಕ ಜಿಂಬಾಬ್ವೆ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಕ್ರಾಂತಿ ಗೌಡ್ ಕೂಡ ಮೂರು ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು. ಈ ಸಂಘಟಿತ ಬೌಲಿಂಗ್ ಪ್ರದರ್ಶನದಿಂದ ಜಿಂಬಾಬ್ವೆ ತಂಡ 200 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.



ಪ್ರತೀಕಾ ರಾವಲ್ ಭರ್ಜರಿ ಶತಕ

198 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕರಾದ ಸ್ಮೃತಿ ಮಂಧಾನಾ ಮತ್ತು ಪ್ರತಿಕಾ ರಾವಲ್ ಉತ್ತಮ ಆರಂಭ ಒದಗಿಸಿದರು. ಸ್ಮೃತಿ ಮಂಧಾನಾ 32 ರನ್ ಗಳಿಸಿ ಔಟಾದರೂ, ಪ್ರತೀಕಾ ರಾವಲ್ ತಮ್ಮ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿದರು. ಪ್ರತೀಕಾ 96 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 15 ಬೌಂಡರಿಗಳು ಸೇರಿದ್ದವು. ಇದು ಅವರ ಏಕದಿನ ವೃತ್ತಿಜೀವನದ ಮೂರನೇ ಶತಕವಾಗಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ತೊಂದರೆ ಅನುಭವಿಸಿದ್ದ ಅವರು, ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.



ಇನ್ನೊಂದೆಡೆ, ಶಫಾಲಿ ವರ್ಮಾ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 33 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದ ಅವರು ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. ಪ್ರತಿಕಾ ಮತ್ತು ಶಫಾಲಿ ಎರಡನೇ ವಿಕೆಟ್‌ಗೆ ಕೇವಲ 70 ಎಸೆತಗಳಲ್ಲಿ 106 ರನ್‌ಗಳ ಅಜೇಯ ಜೊತೆಯಾಟವಾಡಿ ಭಾರತವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್

ಜಿಂಬಾಬ್ವೆ ಮಹಿಳಾ ತಂಡ: 49.5 ಓವರ್‌ಗಳಿಗೆ 197-10 (ಬೆಲವ್ಡ್ ಬಿಜಾ 62; ಶ್ರೀ ಚರಣಿ 23ಕ್ಕೆ 4)

ಭಾರತ ಮಹಿಳಾ ತಂಡ: 27.1 ಓವರ್‌ಗಳಿಗೆ 200/1 (ಪ್ರತೀಕಾ ರಾವಲ್ 100*, ಶಫಾಲಿ ವರ್ಮಾ 64*)

ಮುಂದಿನ ಪಂದ್ಯ ಯಾವಾಗ?

ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಅಕ್ಟೋಬರ್ 25ರಂದು ವಡೋದರಾದಲ್ಲೇ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಭಾರತ, ಮುಂದಿನ ಪಂದ್ಯದಲ್ಲೂ ಗೆಲುವು ದಾಖಲಿಸಿ ಸರಣಿ ಮುನ್ನಡೆ ಹೆಚ್ಚಿಸುವ ಗುರಿ ಹೊಂದಿದೆ. ಜಿಂಬಾಬ್ವೆ ತಂಡ ಸರಣಿಯನ್ನು ಸಮಬಲಗೊಳಿಸಲು ತನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಿದೆ.