ನವದೆಹಲಿ: ಅಜಿತ್ ಅಗರ್ಕರ್ (Ajit Agarkar) ಅವರ ನಿರ್ಗಮನದ ಬಳಿಕ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡದಲ್ಲಿ ಹಲವು ಹಿರಿಯ ಆಟಗಾರರಿಗೆ ಅವಕಾಶ ನೀಡಬಹುದು ಎಂದು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ತಿಳಿಸಿದ್ದಾರೆ. ನಾಲ್ಕು ವರ್ಷಗಳ ಬಳಿಕ ಭುವನೇಶ್ವರ್ ಕುಮಾರ್ ರಾಷ್ಟ್ರೀಯ ತಂಡಕ್ಕೆ ಮರಳಬಹುದಾದರೆ, ಮತ್ತೊಬ್ಬ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಕೂಡ ಮರಳಬಹುದು. 2022ರಲ್ಲಿ ಕೊನೆಯ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳಿದ್ದಾರೆ.
ಅಜಿತ್ ಅಗರ್ಕರ್ ಅನುಪಸ್ಥಿತಿಯಲ್ಲಿ ಆಯ್ಕೆ ಮಾಡಿದ ಮೊದಲ ಭಾರತ ತಂಡ ಇದಾಗಿದೆ. ಅಂದ ಹಾಗೆ ಅಗರ್ಕರ್ ಅವರ ಬಿಸಿಸಿಐ ಚೀಫ್ ಸೆಲೆಕ್ಟರ್ ಅವಧಿ ಅಕ್ಟೋಬರ್ 4 ರಂದು ಮುಗಿದಿದೆ. ಭುವನೇಶ್ವರ್ ಕುಮಾರ್ ಕಳೆದ ಎರಡು ಆವೃತ್ತಿಗಳ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರ ಫಲವಾಗಿ ಇದೀಗ ನ್ಯೂಜಿಲೆಂಡ್ ಪ್ರವಾಸದ ಭಾರತ ತಂಡಕ್ಕೆ ಮರಳಿದ್ದಾರೆ. ಇದೇ ಹಾದಿಯಲ್ಲಿ ಮೊಹಮ್ಮದ್ ಶಮಿ ಕೂಡ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಬಹುದು ಎಂದು ಅಶ್ವಿನ್ ತಿಳಿಸಿದ್ದಾರೆ.
IND vs WI: ಎರಡನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್!
ಮೊಹಮ್ಮದ್ ಶಮಿಗೆ ಅಶ್ವಿನ್ ಬೆಂಬಲ
"ಆಯ್ಕೆ ಸಮಿತಿಯ ಮುಖ್ಯಸ್ಥರನ್ನು ಬದಲಾಯಿಸಲಾಗಿದೆ. ಅಜಿತ್ ಅಗರ್ಕರ್ ಅವರು ತಮ್ಮ ಹುದ್ದೆಯಿಂದ ಹೊರ ನಡೆದಿದ್ದಾರೆ. ಬಹುಶಃ ಅಜಿತ್, ತಮ್ಮ ಹುದ್ದೆಯ ಅವಧಿಯಲ್ಲಿ ಹೆಚ್ಚು ಯುವ ಹಾಗೂ ಹೊಸ ಆಟಗಾರರ ಕಡೆಗೆ ಗಮನ ಹರಿಸುತ್ತಿದ್ದರು. ಆದರೆ, ಇದೀಗ ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತ ತಂಡದ ಬೌಲಿಂಗ್ ವಿಭಾಗ ಅಷ್ಟೊಂದು ಪ್ರಭಾವಶಾಲಿಯಾಗಿ ಕಾಣುತ್ತಿಲ್ಲ," ಎಂದು ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
"ಬಿಸಿಸಿಐ ಇದೀಗ ಅನುಭವಿ ಆಟಗಾರರನ್ನು ಅವಲಂಬಿಸುತ್ತಿದೆ. ಈ ಕಾರಣದಿಂದಲೇ ಅವರು ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ, ಮೊಹಮ್ಮದ್ ಶಮಿಗೆ ಭಾರತ ತಂಡದ ಬಾಗಿಲು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಭುವನೇಶ್ವರ್ ಕುಮಾರ್ ಅವರು ದೀರ್ಘಾವಧಿ ಬಳಿಕ ಭಾರತ ತಂಡಕ್ಕೆ ಮರಳಿರುವುದು ತುಂಬಾ ಖುಷಿ ನೀಡಿದೆ," ಎಂದು ಅವರು ತಿಳಿಸಿದ್ದಾರೆ.
ಭಾರತ ತಂಡಕ್ಕೆ ಭುವನೇಶ್ವರ್ ಕುಮಾರ್ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ ಕಪಿಲ್ ದೇವ್!
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು. ಗಾಯಕ್ಕೆ ತುತ್ತಾದ ಬಳಿಕ ಅವರು ಅಂದಿನಿಂದ ಇಲ್ಲಿಯವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ದೇಶಿ ಕ್ರಿಕೆಟ್ ಆಡುತ್ತಾ ಬಂದಿದ್ದಾರೆ. ಆದರೂ ಅವರು ಭಾರತ ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ಶಮಿ ಹಾಗೂ ಅಜಿತ್ ಅಗರ್ಕರ್ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು. ಆದರೆ, ನಾಲ್ಕು ವರ್ಷಗಳ ಬಳಿಕ ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳಿದ ಬಳಿಕ ಶಮಿ ರಾಷ್ಟ್ರೀಯ ತಂಡಕ್ಕೆ ಮರಳುವ ವಿಶ್ವಾಸವನ್ನು ಹೊಂದಿದ್ದಾರೆ.
"ಅವರು ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಅವರೇನಾದರೂ ಟಿ20ಐ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದರೆ, ಖಂಡಿತವಾಗಿಯೂ 50 ಓವರ್‌ಗಳ ಸ್ವರೂಪಕ್ಕೆ ಮರಳಬಹುದು. ಹಾಗಾಗಿ ಸೆಲೆಕ್ಟರ್‌ಗಳು ಭುವನೇಶ್ವರ್ ಕುಮಾರ್ ಅವರನ್ನು ಅತ್ಯಂತ ಸನಿಹದಲ್ಲಿ ವೀಕ್ಷಣೆ ಮಾಡಬಹುದು," ಎಂದು ಅಶ್ವಿನ್ ತಿಳಿಸಿದ್ದಾರೆ.