ನವದೆಹಲಿ: ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಗೆಲ್ಲುವ ಪ್ರಮುಖ ನೆಚ್ಚಿನ ತಂಡವಾಗಿದೆ ಎಂದು ಸ್ಪಿನ್ ದಂತಕತೆ ರವಿಚಂದ್ರನ್ ಅಶ್ವಿನ್ (R Ashwin) ಭವಿಷ್ಯ ನುಡಿದಿದ್ದಾರೆ. ಒಂದು ವೇಳೆ ಆರ್‌ಸಿಬಿ ಫೈನಲ್ ಪಂದ್ಯದಲ್ಲಿ ಸೋತರೇ ಅದು, ಎದುರಾಳಿ ಜಿಟಿಯಿಂದಲ್ಲ, ಅದು ಬೆಂಗಳೂರು ಆಟಗಾರರೇ ತಪ್ಪು ಮಾಡಿಕೊಂಡರೆ ಮಾತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2025ರ ಚಾಂಪಿಯನ್ ಆಗಿರುವ ಆರ್‌ಸಿಬಿ, ಈ ಸೀಸನ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದೆ. ಲೀಗ್ ಹಂತವನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಗಿಸಿತ್ತು ಹಾಗೂ ಕ್ವಾಲಿಫೈಯರ್-1ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 92 ರನ್‌ಗಳ ಭರ್ಜರಿ ಜಯ ಸಾಧಿಸಿ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದಿತ್ತು.
ಇದೀಗ ಆರ್‌ಸಿಬಿ ಮತ್ತೊಮ್ಮೆ ಗುಜರಾತ್ ಟೈಟನ್ಸ್ ತಂಡವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಈ ಸೀಸನ್‌ನಲ್ಲಿ ಜಿಟಿ ತನ್ನ ತವರಿನ ಮೈದಾನದಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಗುಜರಾತ್‌ಗೆ ತವರಿನ ಮೈದಾನದ ಅನುಕೂಲವಿದೆ ಎಂಬುದನ್ನು ಒಪ್ಪಿಕೊಂಡಿರುವ ಆಶ್ವಿನ್, ಟೂರ್ನಿಯುದ್ದಕ್ಕೂ ಆರ್‌ಸಿಬಿ ನೀಡಿರುವ ಸ್ಥಿರ ಹಾಗೂ ಪ್ರಭಾವಿ ಪ್ರದರ್ಶನದ ಆಧಾರದ ಮೇಲೆ ಅವರನ್ನು ಸೋಲಿಸುವುದು ಅತ್ಯಂತ ಕಠಿಣ ಸವಾಲು ಎಂದು ಅಭಿಪ್ರಾಯಪಟ್ಟಿದ್ದಾರೆ.
IPL 2027: ಲಖನೌ ಸೂಪರ್ ಜಯಂಟ್ಸ್‌ಗೆ ನೂತನ ನಾಯಕನನ್ನು ಹೆಸರಿಸಿದ ಆಕಾಶ್ ಚೋಪ್ರಾ!
ಜಿಯೊ ಹಾಟ್‌ಸ್ಟಾರ್ ಜೊತೆ ಮಾತನಾಡಿದ ಆರ್ ಅಶ್ವಿನ್, "ಗುಜರಾತ್ ಟೈಟನ್ಸ್ ತಂಡ ತನ್ನ ತವರು ಮೈದಾನದಲ್ಲಿ ಆಡುತ್ತಿದ್ದು, ಅಲ್ಲಿಯೇ ಪ್ರಾಬಲ್ಯ ಸಾಧಿಸಿ ಅದನ್ನು ಕೋಟೆಯನ್ನಾಗಿ ರೂಪಿಸಿಕೊಂಡಿರುವುದು ಫೈನಲ್ ಪಂದ್ಯಕ್ಕೆ ಮುನ್ನ ಅವರಿಗೆ ಹೆಚ್ಚುವರಿ ಆತ್ಮವಿಶ್ವಾಸ ಮತ್ತು ಉತ್ತೇಜನ ನೀಡಲಿದೆ,” ಎಂದು ಹೇಳಿದ್ದಾರೆ.
“ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಚಾರಕ್ಕೆ ಬಂದರೆ, ಅವರು ಮೊದಲು ಬ್ಯಾಟ್ ಮಾಡುತ್ತಾರೆಯೇ ಅಥವಾ ಬೌಲ್ ಮಾಡುತ್ತಾರೆಯೇ ಎಂಬುದು ದೊಡ್ಡ ವಿಷಯವಲ್ಲ. ಈ ಫೈನಲ್ ಪಂದ್ಯವನ್ನು ಕಳೆದುಕೊಳ್ಳಬೇಕಾದರೆ ಅದು ಅವರ ಕೈಯಿಂದಲೇ ಬಿಟ್ಟುಕೊಡಬೇಕು. ಆರ್‌ಸಿಬಿ ಸ್ಪಷ್ಟವಾಗಿ ನೆಚ್ಚಿನ ತಂಡವಾಗಿ ಕಣಕ್ಕಿಳಿಯುತ್ತಿದೆ. ಸೀಸನ್ ಪೂರ್ತಿ ಆಡಿದಂತೆ ಆಕ್ರಮಣಕಾರಿ ಕ್ರಿಕೆಟ್‌ನಿಂದ ಹಿಂದೆ ಸರಿಯಬಾರದು ಅಥವಾ ಅದರ ತೀವ್ರತೆಯನ್ನು ಕಡಿಮೆ ಮಾಡಬಾರದು,” ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
RCB vs GT ನಡುವೆ ಐಪಿಎಲ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಆರ್ ಅಶ್ವಿನ್!
ಕ್ವಾಲಿಫೈಯರ್-1ರಲ್ಲಿ ಸೋಲು ಅನುಭವಿಸಿದ್ದ ಗುಜರಾತ್ ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಕಮ್‌ಬ್ಯಾಕ್ ಮಾಡಿ ಫೈನಲ್‌ಗೆ ಪ್ರವೇಶ ಪಡೆಯಿತು. ಶುಭಮನ್ ಗಿಲ್ ನೇತೃತ್ವದ ಈ ತಂಡವು ಸೀಸನ್ ಪೂರ್ತಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ತಂಡಗಳಲ್ಲಿ ಒಂದಾಗಿದ್ದು, ಅಹಮದಾಬಾದ್‌ನಲ್ಲಿ ಪ್ರೇಕ್ಷಕರ ಭರ್ಜರಿ ಬೆಂಬಲವೂ ಅವರಿಗೆ ಲಭಿಸುವ ಸಾಧ್ಯತೆ ಇದೆ.
ಆದಾಗ್ಯೂ, ಮಾಜಿ ಸ್ಪಿನ್ನರ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿರುವ ಉಭಯ ತಂಡಗಳ ವಿಭಿನ್ನ ಆಟದ ಶೈಲಿಯನ್ನು ಉಲ್ಲೇಖಿಸಿ, ಆರ್‌ಸಿಬಿ ತಂಡದ ಆಕ್ರಮಣಕಾರಿ ಶೈಲಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಈ ಸೀಸನ್‌ನಲ್ಲಿ ನಿರ್ಭೀತಿಯ ಹಾಗೂ ದಿಟ್ಟ ಕ್ರಿಕೆಟ್ ಆಡಿದ್ದು, ಅದೇ ಶೈಲಿಯನ್ನು ಫೈನಲ್‌ನಲ್ಲೂ ಮುಂದುವರಿಸಿದರೆ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದಿದ್ದಾರೆ.
'ತವರಿನ ಪ್ರಯೋಜನ ಬಳಸಿಕೊಳ್ಳುತ್ತೇವೆ'; ಫೈನಲ್‌ಗೂ ಮುನ್ನ ಆರ್‌ಸಿಬಿಗೆ ಗಿಲ್ ಎಚ್ಚರಿಕೆ
“ಈ ಎರಡು ತಂಡಗಳ ಆಟದ ಶೈಲಿ ಪರಸ್ಪರ ಸಂಪೂರ್ಣ ಭಿನ್ನವಾಗಿದೆ. ಆರ್‌ಸಿಬಿ ಹೆಚ್ಚುವರಿ ಅಪಾಯವನ್ನು ತೆಗೆದುಕೊಳ್ಳಲು ಸದಾ ಸಿದ್ಧವಾಗಿರುತ್ತದೆ. ತಂಡದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಕೃಣಾಲ್ ಪಾಂಡ್ಯ ಅವರಂತಹ ಹೋರಾಟಗಾರರು ಇದ್ದಾರೆ. ಅವರು ಈ ಸೀಸನ್‌ನಲ್ಲಿ ತಮ್ಮ ಪ್ರದರ್ಶನದ ಮೂಲಕ ತಂಡಕ್ಕೆ ಹೆಚ್ಚಿನ ಬಲ ತುಂಬಿದ್ದು, ನಿರ್ಣಾಯಕ ಕ್ಷಣಗಳಲ್ಲಿ ಜವಾಬ್ದಾರಿ ವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ,” ಎಂದು ಅಶ್ವಿನ್ ಹೇಳಿದ್ದಾರೆ.