ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2027ರ ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ಭುವನೇಶ್ವರ್‌ ಕುಮಾರ್‌ಗೆ ಚಾನ್ಸ್‌ ನೀಡಬೇಕೆಂದ ಆರ್‌ ಅಶ್ವಿನ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಭುವನೇಶ್ವರ್‌ ಕುಮಾರ್‌ ಅವರನ್ನು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಗುಣಗಾಣ ಮಾಡಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಭುವನೇಶ್ವರ್ ಕುಮಾರ್ ಅವರನ್ನು ಭಾರತ ತಂಡದಲ್ಲಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

2027ರ ಏಕದಿನ ವಿಶ್ವಕಪ್‌ಗೆ ಭುವನೇಶ್ವರ್‌ ಕುಮಾರ್‌ ಅವರನ್ನು ಬೆಂಬಲಿಸಿದ ಆರ್‌ ಅಶ್ವಿನ್‌.

ನವದೆಹಲಿ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ (ODI World Cup 2026) ಟೂರ್ನಿಯ ಭಾರತ ತಂಡದಲ್ಲಿ ಹಿರಿಯ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ (Bhuvneshwar Kumar) ಅವಕಾಶ ನೀಡಬೇಕೆಂದು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಆಗ್ರಹಿಸಿದ್ದಾರೆ. 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 28 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭುವನೇಶ್ವರ್‌ ಕುಮಾರ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಎರಡನೇ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ದಕ್ಷಿಣ ಆಫ್ರಿಕಾ ದಂತಹ ವೇಗದ ಬೌಲಿಂಗ್‌ ಕಂಡೀಷನ್ಸ್‌ನಲ್ಲಿ ಭುವನೇಶ್ವರ್‌ ಕುಮಾರ್‌ ಅವರ ಬೌಲಿಂಗ್‌ ಸೂಕ್ತವಾಗಲಿದೆ ಎಂದು ಹೇಳಿದ್ದಾರೆ.

"ಭುವನೇಶ್ವರ್ ಕುಮಾರ್ ಅವರನ್ನು ಖಂಡಿತವಾಗಿಯೂ ತಂಡದಲ್ಲಿ ಪರಿಗಣಿಸಬೇಕು. ನಾನು ಆಯ್ಕೆಗಾರನಾಗಿದ್ದರೆ, ಅವರಿಗೆ ಮೊದಲ ದರ್ಜೆ ಕ್ರಿಕೆಟ್, ವಿಜಯ್ ಹಝಾರೆ ಟ್ರೋಫಿ ಸೇರಿದಂತೆ ಎಲ್ಲ ಟೂರ್ನಿಗಳಲ್ಲೂ ಆಡಲು ಅವಕಾಶ ನೀಡುತ್ತಿದ್ದೆ. 2027ರ ವಿಶ್ವಕಪ್‌ ಟೂರ್ನಿಗೂ ಮುನ್ನ ದಕ್ಷಿಣ ಆಫ್ರಿಕಾ ಪರಿಸ್ಥಿತಿಗೆ ಅವರನ್ನು ಸಂಪೂರ್ಣವಾಗಿ ಸಿದ್ಧಗೊಳಿಸಬೇಕು. ಅಲ್ಲಿ ಅವರಂತಹ ಅನುಭವಿ ಸ್ವಿಂಗ್ ಬೌಲರ್ ಭಾರತ ತಂಡಕ್ಕೆ ಅತ್ಯಗತ್ಯ," ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧ ಆಗಸ್ಟ್ 15 ರಂದು ಗಾಲೆಯಲ್ಲಿ ಆರಂಭವಾಗಲಿರುವ ಎರಡು ಪಂದ್ಯಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೂರು ಪರಿಣಿತ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂದು ಅಶ್ವಿನ್ ಇದೇ ವೇಳೆ ಅಭಿಪ್ರಾಯಪಟ್ಟಿದ್ದರು.

ಅಜಿಂಕ್ಯ ರಹಾನೆಗೆ ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ರೋಹಿತ್ ಶರ್ಮಾ

ಮೂವರು ಸ್ಪಿನ್ನರ್‌ಗಳಿಗೆ ಸ್ಥಾನ ನೀಡಬೇಕೆಂದ ಅಶ್ವಿನ್‌

ರವೀಂದ್ರ ಜಡೇಜಾ, ಮಾನವ್ ಸುತಾರ್ ಮತ್ತು ಕುಲ್‌ದೀಪ್ ಯಾದವ್ ಮೂವರೂ ಮೊದಲ ಟೆಸ್ಟ್‌ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಬೇಕು. ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ಗಳನ್ನು ಗಮನಿಸಿದರೆ, ಈ ತ್ರಿವಳಿ ಸ್ಪಿನ್ ದಾಳಿಯು ಭಾರತಕ್ಕೆ ದೊಡ್ಡ ಬಲವಾಗಲಿದೆ ಎಂದು ಅಶ್ವಿನ್ ಹೇಳಿದ್ದಾರೆ.

"ರವೀಂದ್ರ ಜಡೇಜಾ ಖಂಡಿತವಾಗಿಯೂ ಆಡುತ್ತಾರೆ. ಕಳೆದ ಪಂದ್ಯದಲ್ಲಿ ಏಳು ವಿಕೆಟ್ ಪಡೆದಿರುವ ಮಾನವ್ ಸುತಾರ್ ಕೂಡ ತಂಡದಲ್ಲಿ ಇರಬೇಕು. ಜೊತೆಗೆ ಕುಲ್‌ದೀಪ್ ಯಾದವ್‌ಗೂ ಅವಕಾಶ ನೀಡಬೇಕು. ಹೀಗಾಗಿ ಭಾರತ ಮೂರು ಪರಿಣಿತ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಬೇಕು. ಏಳನೇ ಕ್ರಮಾಂಕದಲ್ಲಿ ಸಾರಾಂಶ್ ಜೈನ್ ಅವರನ್ನು ಆಡಿಸಬಹುದು. ಆಗ ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್, ನಾಲ್ಕನೇ ಕ್ರಮಾಂಕದಲ್ಲಿ ಶುಭಮನ್ ಗಿಲ್, ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಅಥವಾ ಸಾಯಿ ಸುಧರ್ಶನ್, ನಂತರ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಇರುತ್ತಾರೆ. ಹೀಗೆ ಮಾಡಿದರೆ ತಂಡದಲ್ಲಿ ಇಬ್ಬರು ವೇಗದ ಬೌಲರ್‌ಗಳಿಗೆ ಅವಕಾಶ ಸಿಗುತ್ತದೆ," ಎಂದು ಆರ್. ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ವೈಭವ್ ಸೂರ್ಯವಂಶಿಗೆ ಉಪನಾಯಕತ್ವ; ಪ್ರಶ್ನೆ ಮಾಡಿದ ಹರ್ಷ ಭೋಗ್ಲೆ

ಇದರ ನಡುವೆ, ಈ ವರ್ಷದ ಐಪಿಎಲ್ ಟೂರ್ನಿಯ ವೇಳೆ ಗಾಯಕ್ಕೆ ಒಳಗಾಗಿ ತಂಡದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಅವರು ಚೇತರಿಸಿಕೊಂಡು ಮತ್ತೆ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಅವರು ಇತ್ತೀಚಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮತ್ತೊಂದೆಡೆ, ಚೈನಾಮನ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಕೂಡ ಆಯ್ಕೆಗೆ ಲಭ್ಯರಾಗಿದ್ದು, ಶ್ರೀಲಂಕಾದ ಸ್ಪಿನ್‌ಗೆ ನೆರವಾಗುವ ಪಿಚ್‌ಗಳಲ್ಲಿ ಭಾರತ ತಂಡದ ನಿರ್ವಹಣೆಗೆ ಹಲವು ಸ್ಪಿನ್ ಆಯ್ಕೆಗಳನ್ನು ಒದಗಿಸಿದ್ದಾರೆ.