ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ (Jasprit Bumrah) ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 10 ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ಈ ಸೀಸನ್‌ನಲ್ಲಿ ವೈಫಲ್ಯ ಅನುಭವಿಸುವುದಕ್ಕೂ ಕೂಡ ಬುಮ್ರಾ ಅವರ ದುರ್ಬಲ ಪ್ರದರ್ಶನವೇ ಕಾರಣ ಎಂದು ಹೇಳಬಹುದು. ಅಂದ ಹಾಗೆ ಬುಮ್ರಾ ವೈಫಲ್ಯಕ್ಕೆ ಕಾರಣವೇನೆಂದು ಭಾರತ ತಂಡದ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shastri) ವಿವರಿಸಿದ್ದಾರೆ.
ಕಳೆದ 12 ತಿಂಗಳಲ್ಲಿ ಭಾರತ ತಂಡದೊಂದಿಗೆ ಅವರು ಭಾರೀ ಕೆಲಸದ ಒತ್ತಡ ಅನುಭವಿಸಿದ್ದನ್ನು ಶಾಸ್ತ್ರಿ ಉಲ್ಲೇಖಿಸಿದ್ದಾರೆ. ಇದೇ ಅವಧಿಯಲ್ಲಿ ಭಾರತ ತಂಡ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಗೆದ್ದಿದೆ. ಈ ನಿರಂತರ ಕ್ರಿಕೆಟ್‌ನಿಂದ ಅವರು ಮಾನಸಿಕವಾಗಿ ದಣಿದಿರಬಹುದು ಎಂದು ಮಾಜಿ ಆಲ್‌ರೌಂಡರ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡದ ಮುಂದಿನ ವೇಳಾಪಟ್ಟಿಯೂ ಕಠಿಣವಾಗಿದ್ದು, ಮುಂಬೈ ಇಂಡಿಯನ್ಸ್ ತಂಡ ಬುಮ್ರಾ ಅವರ ಫಿಟ್ನೆಸ್ ಮತ್ತು ವರ್ಕ್‌ಲೋಡ್ ಅನ್ನು ಜಾಗರೂಕತೆಯಿಂದ ನಿರ್ವಹಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.
“ಕಳೆದ ಒಂದು ವರ್ಷದ ಭಾರೀ ಕ್ರಿಕೆಟ್ ಆಡಿದ ನಂತರ ಜಸ್‌ಪ್ರೀತ್ ಬುಮ್ರಾ ಈ ಐಪಿಎಲ್ ಟೂರ್ನಿಗೆ ಮರಳಿದ್ದಾರೆ. ಅವರ ಹೋರಾಟ ಕೇವಲ ದೈಹಿಕವಾಗಿಯೇ ಅಲ್ಲ, ಮಾನಸಿಕ ದಣಿವೂ ದೊಡ್ಡ ಕಾರಣವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಹಲವು ಟೆಸ್ಟ್ ಸರಣಿಗಳು ಮತ್ತು ಏಕದಿನ ವಿಶ್ವಕಪ್ ಇರುವುದರಿಂದ, ಅವರ ಫಿಟ್ನೆಸ್ ಅನ್ನು ಅತ್ಯಂತ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು,” ಎಂದು ರವಿ ಶಾಶ್ತ್ರಿ ಜಿಯೋಹಾಟ್‌ಸ್ಟಾರ್‌ನ ‘ಚಾಂಪಿಯನ್ಸ್ ವಾಲಿ ಕಾಮೆಂಟರಿ’ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೂ, ಮುಂಬೈ ಇಂಡಿಯನ್ಸ್ ತಂಡದ ಪ್ಲೇಆಫ್ ಹಾದಿ ಅತ್ಯಂತ ಕಠಿಣವಾಗಿದೆ. ಆಡಿದ10 ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
IPL 2026: ʻಒಂದು ಕಾಲದಲ್ಲಿ ನನ್ನನ್ನು ಟೆಸ್ಟ್ ಕ್ರಿಕೆಟ್‌ಗೆ ಸೀಮಿತ ಮಾಡಿದ್ದರುʼ-ಕೆಎಲ್ ರಾಹುಲ್!
ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ, ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಜೊತೆಗೆ ಇತರ ತಂಡಗಳ ಫಲಿತಾಂಶಗಳ ಮೇಲೂ ಅವಲಂಬಿಸಬೇಕಿದೆ. ವಿಶೇಷವಾಗಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲ್ಲಾ ಪಂದ್ಯಗಳನ್ನು ಸೋಲಬೇಕು ಅಥವಾ ಗುಜರಾತ್ ಟೈಟನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಗರಿಷ್ಠ ಒಂದೇ ಒಂದು ಗೆಲುವು ಪಡೆಯಬೇಕು.
ಈ ಎಲ್ಲಾ ಸಮೀಕರಣಗಳ ನಡುವೆಯೂ ಮುಂಬೈ ತಂಡ ಪ್ಲೇಆಫ್‌ನಿಂದ ಹೊರ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ಪ್ರಾಯೋಗಿಕವಾಗಿ ಅವರ ಅವಕಾಶಗಳು ಬಹುತೇಕ ಅಸಾಧ್ಯವಾಗಿದ್ದರೂ, ಅಂಕಿಅಂಶಗಳ ಪ್ರಕಾರ ಇನ್ನೂ ಸಾಧ್ಯತೆ ಉಳಿದಿದೆ. ಮುಂಬೈ ಇಂಡಿಯನ್ಸ್ ತಂಡ ತಮ್ಮ ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರಾಯ್ಪುರದಲ್ಲಿ ಮುಖಾಮುಖಿಯಾಗಲಿದೆ. ಪಂದ್ಯವನ್ನು ಜಿಯೋಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಿ ವೀಕ್ಷಿಸಬಹುದು.